ಮಂಗಳವಾರ, ಜನವರಿ 19, 2021
21 °C
ಜನ ಸೇವಕ ಸಮಾವೇಶದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್

ಅಧಿಕಾರ ದರ್ಪದಿಂದ ಸೋತ ಕಾಂಗ್ರೆಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಆರು ದಶಕಗಳ ಕಾಲ ದೇಶವನ್ನಾಳಿದ್ದ ಕಾಂಗ್ರೆಸ್‌ ಇಂದು ಅವನತ್ತಿಯತ್ತ ಸಾಗಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್‌ ಹೇಳಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ, ಪಕ್ಷದ ಬೆಂಬಲಿತ ಸದಸ್ಯರನ್ನು ಸನ್ಮಾನಿಸಲು ನಗರದ ಪವನಪುತ್ರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ ಆಯೋಜಿಸಿದ್ದ ‘ಜನ ಸೇವಕ‌’ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಗಾಂಧೀಜಿ, ಅಂಬೇಡ್ಕರ್‌, ಗೋಮಾತೆಯ ಶಾಪ ಕಾಂಗ್ರೆಸ್‌ಗೆ ತಟ್ಟಿದೆ. ಸ್ವಾತಂತ್ರ್ಯ ಬಂದ ನಂತರ ಗಾಂಧಿ ವಿಚಾರವನ್ನು ಕೈ ಬಿಟ್ಟಿದೆ. ಇನ್ನು ಅಂಬೇಡ್ಕರ್ ಅವರನ್ನು ಎರಡು ಬಾರಿ ಸೋಲಿಸಿತು. ಅಂಬೇಡ್ಕರ್ ಅವರ ಶವ ಸಂಸ್ಕಾರಕ್ಕೂ  ದೆಹಲಿಯಲ್ಲಿ ಅವಕಾಶ ನೀಡಲಿಲ್ಲ. ವಿ.ಪಿ. ಸಿಂಗ್ ಸರ್ಕಾರ ಅವರಿಗೆ ಭಾರತ ರತ್ನನೀಡಿದ್ದು. ಈ ಶಾಪ ಕೂಡ ಕಾಂಗ್ರೆಸ್‌ಗೆ ತಟ್ಟಿದೆ. ಗೋ ‌ರಕ್ಷಣೆ ಬದಲು ಗೋ ಹತ್ಯೆಗೆ ಪ್ರೋತ್ಸಾಹ ನೀಡಿತು. ಹಾಗಾಗಿ ಈ ಮೂರು ಶಾಪಗಳು ತಟ್ಟಿದೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಗಾಂಧೀಜಿ ಚಿಂತನೆಯ ಗ್ರಾಮ ಸ್ವರಾಜ್‌ ಕನಸು ನನಸು ಮಾಡಿದವರು ಪ್ರಧಾನಿ ನರೇಂದ್ರ ಮೋದಿ. ಕಾಂಗ್ರೆಸ್‌ ಅಧಿಕಾರ ದರ್ಪ, ಅಹಂಕಾರದಿಂದ ಇಂದು ಸೋತಿದೆ. ಆದ್ದರಿಂದ ಅಧಿಕಾರದ ದರ್ಪ, ಅಹಂ ದೂರ ಇಟ್ಟು ಜನಸೇವಕರಾಗಿ ಕೆಲಸ ಮಾಡಿದರೆ ಮಾತ್ರ ಜನ ಮಾನಸದಲ್ಲಿ ಉಳಿಯಲು ಸಾಧ್ಯ ಎಂದು ನುಡಿದರು.

ರಾಜ್ಯದಲ್ಲಿ ಎಲ್ಲೇ ಬರ ಬಂದರೂ, ಯಾವ ಕೆರೆ ಬತ್ತಿದರೂ ಎಚ್‌.ಡಿ.ದೇವೇಗೌಡರ ಕಣ್ಣಲ್ಲಿ ನೀರು ಬತ್ತುವುದಿಲ್ಲ. ಕಣ್ಣೀರಿನಿಂದ ಜನರ ಮನಸ್ಸು ಗೆಲ್ಲಲು ಸಾಧ್ಯವಿಲ್ಲ ಎಂಬುದನ್ನು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜಿಲ್ಲೆಯ ಜನರು ಸಾಬೀತು ಮಾಡಿದ್ದಾರೆ ಎನ್ನುವ ಮೂಲಕ ಜೆಡಿಎಸ್ ವರಿಷ್ಠ ದೇವೇಗೌಡರನ್ನು ಟೀಕಿಸಿದರು.

ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿರುವವರು ಹೆದರಬೇಕಿಲ್ಲ. ಹಿಂದೆ ಅಟಲ್‌ ಬಿಹಾರಿ ವಾಜಪೇಯಿ, ಯಡಿಯೂರಪ್ಪ ಸೋತು, ಗೆದ್ದವರು. ಸೋಲನ್ನು ಸವಾಲಾಗಿ ಸ್ವೀಕಾರ ಮಾಡಬೇಕು. ಸೋತವರನ್ನೂ ಕೈ ಹಿಡಿಯುವುದು ಬಿಜೆಪಿಯ ಸಿದ್ಧಾಂತ ಎಂದು ಹೇಳಿದರು.

ಸಂಸದ ಪ್ರಾತಾಪ್ ಸಿಂಹ ಮಾತನಾಡಿ,  ಜಿಲ್ಲೆಯಲ್ಲಿ 1999 ರಲ್ಲಿ ಬಿ.ಬಿ. ಶಿವಪ್ಪ ಅವರ ನೇತೃತ್ವದಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಬಾವುಟ ಹಾರಿಸಲಾಗಿತ್ತು. ಕಾರ್ಯಕರ್ತರು‌ ಉತ್ಸಾಹ ಕಳದುಕೊಳ್ಳದೆ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಏಳು ‌ಕ್ಷೇತ್ರಗಳಲ್ಲೂ ಬಿಜೆಪಿ ಬಾವುಟ ಹಾರಿಸಲು ಶ್ರಮಿಸಬೇಕು ಎಂದು ಕರೆ ನೀಡಿದರು.

ಹಾಸನಕ್ಕೆ ಪಾಸ್ ಪೋರ್ಟ್ ಸೇವಾ ಕೇಂದ್ರ, ಬಿಳಿಕೆರೆಯಿಂದ-ಬೇಲೂರು, ಹಾಸನ - ಮಂಗಳೂರು ರಸ್ತೆ, ಹೊಸ ಬಸ್ ನಿಲ್ದಾಣ ಸಮೀಪದ ರೈಲ್ವೆ ಮೇಲ್ಸೇತುವೆ ಹಾಗೂ ಬೇಲೂರು - ಹಾಸನ ನಡುವಿನ ರೈಲ್ವೆ ಮಾರ್ಗಕ್ಕೆ ಹಣ ನೀಡಿದ್ದು ಕೇಂದ್ರ ಸರ್ಕಾರ. ಕಾರ್ಯಕರ್ತರು ಇದನ್ನು ಅರ್ಥ ಮಾಡಿಕೊಂಡು ಸರ್ಕಾರದ ಸಾಧನೆಗಳನ್ನು ಮನೆ ಮನೆಗೆ ತಲುಪಿಸಬೇಕು ತಿಳಿಸಿದರು.

ಬಿಜೆಪಿ ರಾಜ್ಯ ಪರಿಶಿಷ್ಟ ಜಾತಿ ಮೋರ್ಚಾ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನ್‌ಧನ್‌ ಖಾತೆಗಳನ್ನು ತೆರೆದು ನೇರವಾಗಿ ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡಲಾಗುತ್ತಿದೆ. ಇದರಿಂದ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಿದಂತಾಯಿತು ಎಂದು ವಿವರಿಸಿದರು.

ಹಿರಿಯ ಮುಖಂಡ ಎ.ಮಂಜು ಮಾತನಾಡಿ, ರಾಜ್ಯ ಮತ್ತು ಕೇಂದ್ರ ಸರ್ಕಾರದ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಹಲವು ವರ್ಷಗಳಿಂದ ಆಯಾ ಕಟ್ಟಿನ ಜಾಗದಲ್ಲಿ ಠಿಕಾಣಿ ಹೂಡಿರುವ ಅಧಿಕಾರಿಗಳನ್ನು ವರ್ಗಾವಣೆ ಮಾಡಬೇಕು ಎಂದು ಪಕ್ಷದ ಅಧ್ಯಕ್ಷರಿಗೆ ಮನವಿ ಮಾಡಿದರು.

ಇದಕ್ಕೂ ಮುನ್ನ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆದ್ದಿರುವ ಪಕ್ಷದ ಬೆಂಬಲಿತ ಸದಸ್ಯರಿಗೆ ನಾಯಕರು ಪುಷ್ಪವೃಷ್ಟಿ ಮಾಡಿ ಅಭಿನಂದಿಸಿದರು.

 ಜಿಲ್ಲಾ ಘಟಕದ ಅಧ್ಯಕ್ಷ ಎಚ್‌.ಕೆ. ಸುರೇಶ್‌ ಸ್ವಾಗತಿಸಿದರು. ರಾಜ್ಯ ಸಂಘಟನಾ ಕಾರ್ಯದರ್ಶಿ ಅಶ್ವಥ್ ನಾರಾಯಣ, ಉಪಾಧ್ಯಕ್ಷ ರಾಜೇಂದ್ರ, ಮೈ.ವಿ. ರವಿಶಂಕರ್, ಮುಖಂಡರಾದ ಎ.ಎಸ್. ಬಸವರಾಜು, ಎಚ್.ಎಂ. ವಿಶ್ವನಾಥ್, ಬಿ.ಆರ್. ಗುರುದೇವ್, ನವಿಲೆ ಅಣ್ಣಪ್ಪ, ರೇಣುಕುಮಾರ್‌, ಹುಡಾ ಅಧ್ಯಕ್ಷ ಲಲಾಟ ಮೂರ್ತಿ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಹೇಮಂತ್‌ ಗೌಡ, ಸಕಲೇಶಪುರದ ಶ್ವೇತಾ ಪ್ರಸನ್ನ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು