ಹಳೇಬೀಡು: ಕೇಂದ್ರ ಸರ್ಕಾರ ಸಂಸ್ಕೃತಿ ಸಚಿವಾಲಯದಿಂದ ಅನುದಾನ ಬಿಡುಗಡೆಯಾಗದೇ, ಪುರಾತತ್ವ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗುತ್ತಿಗೆ ನೌಕರರಿಗೆ ವೇತನ ಸಿಗದಂತಾಗಿದೆ. 5 ತಿಂಗಳಿಂದ ವೇತನ ಬಾರದೇ ಇರುವುದರಿಂದ 12 ಮಂದಿ ನೌಕರರು ಮಂಗಳವಾರದಿಂದ ಕರ್ತವ್ಯಕ್ಕೆ ಗೈರು ಹಾಜರಾಗಿದ್ದಾರೆ.
ಕೇಂದ್ರ ಪುರಾತತ್ವ ಇಲಾಖೆಗೆ ಸೇರಿರುವ ಹಳೇಬೀಡಿನ ಹೊಯ್ಸಳೇಶ್ವರ, ಕೇದಾರೇಶ್ವರ ದೇವಾಲಯ, ಜೈನ ಬಸದಿ, ಹುಲಿಕೆರೆ ಪುಷ್ಕರಣಿಗಳಲ್ಲಿ ವಾಚ್ ಅಂಡ್ ವಾರ್ಡ್, ಕ್ಲೀನ್ ಅಂಡ್ ಮೆಂಟೇನೆನ್ಸ್ ಎಂದು 12 ಮಂದಿ ಗುತ್ತಿಗೆ ನೌಕರರಿದ್ದಾರೆ. ಗ್ಲೊಬೆಲ್ ಎಂಬ ಕಂಪನಿ, ಕೆಲಸಗಾರರ ವೇತನ ನಿರ್ವಹಣೆ ನಿರ್ವಹಿಸುತ್ತಿದೆ. 5 ತಿಂಗಳಿಂದ ನೌಕರರಿಗೆ ವೇತನ ಕೊಟ್ಟಿಲ್ಲ. ಇಂದಲ್ಲ ನಾಳೆ ವೇತನ ಬರಬಹುದು ಎಂದು ಕಾಯುತ್ತಿದ್ದ ನೌಕರರು ಬೇಸರದಿಂದ ಈಗ ಕೆಲಸಕ್ಕೆ ಗೈರಾಗಿದ್ದಾರೆ.
ಈ ಬೆಳವಣಿಗೆಯಿಂದ ಹೊಯ್ಸಳೇಶ್ವರ ದೇವಾಲಯ ಸೇರಿದಂತೆ ವಿವಿಧ ಸ್ಮಾರಕಗಳಿಗೆ ರಕ್ಷಣೆ ಹಾಗೂ ಸ್ವಚ್ಛತೆಯ ಕೊರತೆ ಎದುರಾಗಿದೆ. ಕಾಯಂ ನೌಕರರು ಸಹ ಕಡಿಮೆ ಇರುವುದರಿಂದ ಸ್ಮಾರಕಗಳ ಸಂರಕ್ಷಣೆ ಕಷ್ಟವಾಗಲಿದೆ.
‘ಕೇಂದ್ರ ಪುರಾತತ್ವ ಇಲಾಖೆ ಅನುದಾನ ಕೊಟ್ಟಿಲ್ಲ. ಹೀಗಾಗಿ ವೇತನ ವಿಳಂಬವಾಗಿದೆ ಎಂದು ಕಂಪನಿಯವರು ಹೇಳುತ್ತಿದ್ದಾರೆ. ಪ್ರತಿ ತಿಂಗಳು ₹2ಸಾವಿರ ಫಿಎಫ್, ಇಎಸ್‌ಐ ಕಡಿತ ಮಾಡಿ ₹1,1500 ವೇತನ ಕೊಡುತ್ತಿದ್ದರು. 5 ತಿಂಗಳಿನಿಂದ ವೇತನ ಇಲ್ಲದೇ ಜೀವನ ನಿರ್ವಹಣೆ ಕಷ್ಟವಾಗಿದೆ’ ಎಂದು ಹೆಸರು ಹೇಳಲು ಇಚ್ಚಿಸದ ನೌಕರರೊಬ್ಬರು ಸಮಸ್ಯೆ ಬಿಚ್ಚಿಟ್ಟರು.
‘ಹಳೇಬೀಡು ಮಾತ್ರವಲ್ಲದೇ, ಕೇಂದ್ರ ಪುರಾತತ್ವ ಇಲಾಖೆಯ ಭಾರತದ ಎಲ್ಲ ಸ್ಮಾರಕಗಳ ಗುತ್ತಿಗೆ ನೌಕರರಿಗೆ ವೇತನ ಬಂದಿಲ್ಲ. ಈ ಕುರಿತು ಹಲವು ಬಾರಿ ಉನ್ನತ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಇಲಾಖೆಯ ಸಭೆಗಳಲ್ಲಿಯೂ ವಿಷಯ ಪ್ರಸ್ತಾಪಿಸಿದ್ದೇವೆ. ಕೇಂದ್ರ ಸಂಸ್ಖೃತಿ ಸಚಿವಾಲಯದಿಂದಲೇ ಅನುದಾನ ಬಿಡುಗಡೆಯಾಗಿಲ್ಲ. ಮತ್ತೊಮ್ಮೆ ಅಧಿಕಾರಿಗಳೊಂದಿಗೆ ಮಾತನಾಡುತ್ತೇವೆ’ ಎಂದು ಸ್ಮಾರಕ ಸಂರಕ್ಷಣಾಧಿಕಾರಿ ಗೌತಮ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.
‘ಸರ್ಕಾರವೇ ಕೂಲಿ ಹಣ ಸಮರ್ಪಕವಾಗಿ ಬಿಡುಗಡೆ ಮಾಡದಿದ್ದರೆ, ಕಾರ್ಮಿಕರ ಬದುಕು ಕಷ್ಟವಾಗುತ್ತದೆ. ಶೀಘ್ರದಲ್ಲಿಯೇ ಗುತ್ತಿಗೆ ಕಾರ್ಮಿಕರಿಗೆ ವೇತನ ಕೊಡದಿದ್ದರೆ ಪ್ರತಿಭಟನೆ ನಡೆಸುತ್ತೇವೆ’ ಎಂದು ಕರವೇ ಜಿಲ್ಲಾ ಘಟಕದ ಉಪಾಧ್ಯಕ್ಷ ಸೀತಾರಾಮು ಎಚ್ಚರಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.