ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ದೂರವಾಗಿಸು, ಕುಡಿತ ಬಿಡಿಸು

ಕೋರಿಕೆ ಈಡೇರಿಸುವಂತೆ ಹಾಸನಾಂಬೆಗೆ ಹತ್ತಾರು ಪತ್ರ
Last Updated 17 ನವೆಂಬರ್ 2020, 12:44 IST
ಅಕ್ಷರ ಗಾತ್ರ

ಹಾಸನ: ಹಾಸನಾಂಬೆ ದೇವಾಲಯದ ಕಾಣಿಕೆ ಹುಂಡಿಯಲ್ಲಿ ಹಣದ ಜತೆಗೆ ವಿವಿಧ ಕೋರಿಕೆ ಈಡೇರಿಸು ತಾಯಿ ಎಂದು
ಹತ್ತಾರು ಪತ್ರಗಳು ಬಂದಿವೆ.

ಸಿದ್ದೇಶ್ವರ ಸ್ವಾಮಿ ದೇವಾಲಯ ಪ್ರಾಂಗಣದಲ್ಲಿ ಮಂಗಳವಾರ ನಡೆದ ಹುಂಡಿ ಕಾಣಿಕೆ ಎಣಿಕೆ ವೇಳೆ ದೇವಿಗೆ ಮೊರೆಯಿಟ್ಟ ವಿಶೇಷ ಚೀಟಿಗಳು ಲಭ್ಯವಾದವು.

‘ಕೌಟುಂಬಿಕ ‌ಸಮಸ್ಯೆ ಸರಿಪಡಿಸು, ಮಾಡಿರುವ ಸಾಲ ಬೇಗ ತೀರುವಂತೆ ಮಾಡು, ಮದುವೆ ಮಾಡಿಸು, ಹಣಕಾಸು ಸಮಸ್ಯೆ ಬಗೆಹರಿಸು ತಾಯೆ, ಒಳ್ಳೆ ಕೆಲಸ ಕೊಡಿಸು, ಗಂಡ ಮಕ್ಕಳನ್ನು ಕಾಪಾಡು. ನನ್ನ ಕೆಲಸ ಪರ್ಮನೆಂಟ್‌ ಆಗಲಿ, ಕೊರೊನಾ ಮಹಾಮಾರಿ ಹೋಗಲಾಡಿಸು, ಮನೆ ಕಟ್ಟುವಂತೆ ಮಾಡು’ ಎಂದು‌ ಹಲವರು ಕೈ ಬರಹದ ಪತ್ರಗಳ ಮೂಲಕ ನಿವೇದನೆ ಮಾಡಿಕೊಂಡಿದ್ದಾರೆ

‘ಇನ್ನು ಮುಂದೆ ಬೆಳಿಗ್ಗೆ, ಮಧ್ಯಾಹ್ನ ಕುಡಿಯುವುದಿಲ್ಲ. ಸಂಜೆ ಸ್ವಲ್ಪ ತೆಗೆದುಕೊಳ್ಳುತ್ತೇನೆ. ಅಪ್ಪಿತಪ್ಪಿ ಸಂಜೆ ಕುಡಿದರೆ ಮನ್ನಿಸು’ ಎಂದು ಬೇಡಿದ್ದರೆ, ಮತ್ತೊಬ್ಬರು ‘ಒಳ್ಳೆಯ ವರನನ್ನು ಕೊಡು, ಮಾದುವೆ ಮಾಡಿಸು’ಎಂದು ಕೇಳಿದ್ದಾರೆ.

ಈ ನಡುವೆ ಹಾಸನಾಂಬೆ ‌ಪಾಸ್ ವಿತರಣೆ, ಗಣ್ಯರಿಗೆ ಮಾತ್ರ ದರ್ಶನಕ್ಕೆ ಅವಕಾಶ ನೀಡಿ, ಜನಸಾಮಾನ್ಯರಿಗೆ ನಿರಾಕರಣೆ ತಾರತಮ್ಯದ ವಿರುದ್ಧ ಕೆಲವರು ಸುದೀರ್ಘ ಪತ್ರ ಬರೆದು ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ.

ಈ ನಡುವೆ ಭಕ್ತರೊಬ್ಬರು ‘ನನ್ನ ಕುಡಿತದ ಚಟದಿಂದ ಪತ್ನಿ ದೂರವಾಗಿದ್ದಾಳೆ. ಬೆಳಗ್ಗೆ, ಮಧ್ಯಾಹ್ನ ಕುಡಿಯುವುದಿಲ್ಲ. ರಾತ್ರಿ ಕುಡಿದರೆ ಕ್ಷಮಿಸಿ, ಪತ್ನಿಯನ್ನು ಮತ್ತೆ ಒಂದಾಗಿಸು ಅಮ್ಮ’ಎಂದು ವಿಶೇಷ ಮನವಿ ಮಾಡಿಕೊಂಡಿದ್ದಾರೆ.

ಹುಂಡಿ ಹಣ ಎಣಿಸುತ್ತಿದ್ದ ಕಂದಾಯ, ಸ್ಕೌಟ್ಸ್‌, ಗೈಡ್‌ ಸಿಬ್ಬಂದಿ ನಗುತ್ತಲೇ ಚೀಟಿಗಳನ್ನು ಓದಿ ಪಕ್ಕಕ್ಕೆ ಸರಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT