ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಡ್ಡಾಯವಾಗಿ ಪಾಲಿಸಿ: ಸಚಿವ ಪ್ರಭು ಚವ್ಹಾಣ್

ಬಂಜಾರ ಸ್ವಾಭಿಮಾನಿ ಸಮಾವೇಶ
Last Updated 1 ಫೆಬ್ರುವರಿ 2021, 4:41 IST
ಅಕ್ಷರ ಗಾತ್ರ

ಅರಸೀಕೆರೆ: ‘ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಲಂಬಾಣಿ ಸಮುದಾಯದವರು ಶೈಕ್ಷಣಿಕವಾಗಿ ಮುನ್ನೆಲೆಗೆ ಬರಬೇಕು, ಜತೆಗೆ ಲಂಬಾಣಿ ಸಮುದಾಯದ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು’ ಎಂದು ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರ ಹೊರವಲಯದ ತಿರುಪತಿ ಕಾರೇಹಳ್ಳಿ ಗ್ರಾಮದ ಬಳಿ ಭಾನುವಾರ ತಾಲ್ಲೂಕು ಬಂಜಾರ ಸೇವಾ ಸಂಘದ ವತಿಯಿಂದ ಆಯೋಜಿಸಿದ್ದ ಜಿಲ್ಲಾಮಟ್ಟದ ಬಂಜಾರ ಸ್ವಾಭಿಮಾನಿ ಸಮಾವೇಶ ಹಾಗೂ ನೂತನ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಸನ್ಮಾನ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ತಾಲ್ಲೂಕಿನಲ್ಲಿ 100 ಕುಟುಂಬಗಳಿರುವ ಲಂಬಾಣಿ ಸಮುದಾಯದ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ ಸಹಕಾರದೊಂದಿಗೆ ಲಂಬಾಣಿ ಗ್ರಾಮಗಳಿಗೆ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿಕೊಂಡು ಲಂಬಾಣಿ ಭಾಷೆ ಮತ್ತು ಸಂಸ್ಕೃತಿಯನ್ನು ಕಾಪಾಡಿಕೊಳ್ಳಬೇಕು’ ಎಂದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿ ಸಮುದಾಯದ ಸಂಘಟನೆಗೆ ಅದೇ ಸಮಾಜದ ಹಲವು ಸಂಘಟನೆಗಳು ಶ್ರಮಿಸುತ್ತಿವೆ. ಈ ನಿಟ್ಟಿನಲ್ಲಿ ಬಂಜಾರ ಸೇವಾ ಸಂಘದ ಪಾತ್ರ ಶ್ಲಾಘನೀಯ. ಕಷ್ಟಪಟ್ಟು ದುಡಿದು ತಿನ್ನುವ ಸಮಾಜವಾದ ಬಂಜಾರ ಸಮಾಜದ ಏಳಿಗೆಗೆ ನಾನು ಸದಾ ಬದ್ಧನಾಗಿದ್ದೇನೆ’ ಎಂದರು.

ತಾಲ್ಲೂಕಿನ ಬಂಜಾರ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿವಿಧ ಗ್ರಾಮ ಪಂಚಾಯಿತಿಗೆ ಆಯ್ಕೆಯಾದ ಸಮಾಜದ ನೂತನ ಸದಸ್ಯರನ್ನು ಸನ್ಮಾನಿಸಲಾಯಿತು.

ಜಿ.ಪಂ. ಸದಸ್ಯರಾದ ಬಿಳಿಚೌಡಯ್ಯ , ಪಟೇಲ್ ಶಿವಪ್ಪ, ಆಲ್ ಇಂಡಿಯಾ ಬಂಜಾರ ಸೇವಾ ಸಂಘದ ರಾಷ್ಟ್ರೀಯ ಕಾರ್ಯಾಧ್ಯಕ್ಷ ರಾಮನಾಯ್ಕ್, ರಾಜ್ಯ ಘಟಕದ ಅಧ್ಯಕ್ಷ ಪಾಂಡುರಂಗ ಪಮ್ಮಾರ್, ರಾಜ್ಯ ಕಾರ್ಯಾಧ್ಯಕ್ಷ ಪುಟ್ಟನಾಯ್ಕ್ , ವಕೀಲ ಅನಂತನಾಯ್ಕ್ , ಜಿಲ್ಲಾ ಘಟಕದ ಅಧ್ಯಕ್ಷ ಸೋಮನಾಯ್ಕ್ , ತಾಲ್ಲೂಕು ಘಟಕದ ಅಧ್ಯಕ್ಷ ಸುನಿಲ್ ನಾಯ್ಕ್ , ಕಾರ್ಯಾಧ್ಯಕ್ಷ ಸಾಕಿ ಮಂಜುನಾಥ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಜಗದೀಶ್ ನಾಯ್ಕ್ , ಮೈಸೂರು ಸೀಮೆ ಲಂಬಾಣಿ ಸಮಾಜದ ಅಧ್ಯಕ್ಷ ಗಂಗಾಧರ ನಾಯ್ಕ್ , ತಾ.ಪಂ. ಸದಸ್ಯೆ ಮಂಜುಳಾ ಬಾಯಿ, ಜಿ.ಪಂ. ಮಾಜಿ ಸದಸ್ಯೆ ಸುಲೋಚನಾ ಬಾಯಿ, ಅಗ್ಗುಂದ ಗ್ರಾ.ಪಂ. ಅಧ್ಯಕ್ಷ ಗಿರೀಶ್, ಬಂಜಾರ ಸೇವಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT