ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂದೆ ಹತ್ಯೆಗೆ ಸುಪಾರಿ ಕೊಟ್ಟ ಪುತ್ರಿ: ಅನೈತಿಕ ಸಂಬಂಧ ವಿರೋಧಿಸಿದ್ದಕ್ಕೆ ಕೃತ್ಯ

ಪ್ರಿಯಕರ ಸೇರಿ ಮೂವರ ಬಂಧನ
Last Updated 31 ಆಗಸ್ಟ್ 2019, 12:22 IST
ಅಕ್ಷರ ಗಾತ್ರ

ಹಾಸನ: ಅನೈತಿಕ ಸಂಬಂಧ ವಿರೋಧಿಸಿದರು ಎಂಬ ಕಾರಣಕ್ಕಾಗಿ ತನ್ನ ಪ್ರಿಯಕರನ ಸಹಕಾರದಲ್ಲಿ ಪುತ್ರಿಯೇ ತಂದೆಯನ್ನು ಹತ್ಯೆ ಮಾಡಿಸಿರುವ ಪ್ರಕರಣವನ್ನು ಭೇದಿಸಿರುವ ಆಲೂರು ಠಾಣೆ ಪೊಲೀಸರು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಬೆಂಗಳೂರಿನ ಮುನೇಶ್ವರ ನಗರದ ನಿವಾಸಿ ಮುನಿರಾಜು ಹತ್ಯೆಯಾದವರು. ಮುನಿರಾಜು ಅವರ ಪುತ್ರಿ ವಿದ್ಯಾ, ಆಕೆಯ ಪ್ರಿಯಕರ ಚಿದಾನಂದ ಹಾಗೂ ಆತನ ಸ್ನೇಹಿತ ರಘುನನ್ನು ಬಂಧಿಸಲಾಗಿದೆ. ತಂದೆ ಕೊಲೆ ಮಾಡಲು ₹ 15 ಲಕ್ಷ ಸುಪಾರಿ ಕೊಟ್ಟಿದ್ದಳು ಎಂದು ಪೊಲೀಸ್‌ ವರಿಷ್ಠಾಧಿಕಾರಿ ರಾಮ್‌ ನಿವಾಸ್‌ ಸೆಪಟ್‌ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹಣ ಹಾಗೂ ಹೆಣ್ಣಿನ ಆಸೆಯಿಂದ ಚಿದಾನಂದ ತನ್ನ ಸ್ನೇಹಿತ ರಘು ಸಹಾಯದಿಂದ ಮುನಿರಾಜು ಅವರನ್ನು ಹತ್ಯೆ ಮಾಡಿದ್ದ. ಬಳಿಕ ಶವವನ್ನು ಆಲೂರು ತಾಲ್ಲೂಕಿನ ಮಣಿಗನಹಳ್ಳಿಯ ಹೇಮಾವತಿ ಹಿನ್ನೀರಿನಲ್ಲಿ ಶವ ಎಸೆದು ಪರಾರಿಯಾಗಿದ್ದರು ಎಂದು ಹೇಳಿದರು.

ಮೊಲದ ಪತಿಯಿಂದ ವಿಚ್ಛೇದನ ಪಡೆದು ಚಿದಾನಂದ್ ಜತೆ ವಿದ್ಯಾ ಅಕ್ರಮ ಸಂಬಂಧ ಹೊಂದಿದ್ದಳು. ಪುತ್ರಿಯ ಈ ವರ್ತನೆಗೆ ವಿರೋಧ ವ್ಯಕ್ತಪಡಿಸಿದ್ದ ಮುನಿರಾಜು, ನಡವಳಿಕೆ ತಿದ್ದಿಕೊಳ್ಳುವಂತೆ ತಿಳಿವಳಿಕೆ ಹೇಳಿದ್ದರು. ಆದರೆ, ಇದು ಆಕೆಗೆ ಇಷ್ಟವಾಗಲಿಲ್ಲ. ಈ ನಡುವೆ 2018 ರಲ್ಲಿ ವಿದ್ಯಾಳಿಗೆ ಅಪಘಾತ ಪ್ರಕರಣವೊಂದರಲ್ಲಿ ಏಳೆಂಟು ಲಕ್ಷ ರೂಪಾಯಿ ಪರಿಹಾರ ಬಂದಿತ್ತು ಹಾಗೂ ವಿವಾಹ ವಿಚ್ಛೇದನ ನೀಡಿದ ಬಳಿಕ ಬಂದಿದ್ದ ಜೀವನಾಂಶದ ಮೊತ್ತದಲ್ಲಿ ತನಗೂ ಸ್ವಲ್ಪ ಹಣ ನೀಡುವಂತೆ ತಂದೆ ಕೇಳಿದ್ದರು ಎಂದು ವಿವರಿಸಿದರು.

ಈ ವಿಷಯವಾಗಿ ಇಬ್ಬರ ನಡುವೆ ಜಗಳ ನಡೆಯುತ್ತಿತ್ತು. ಹಾಗಾಗಿ ತಂದೆ ಕೊಂದು, ಹಣ ಲಪಟಾಯಿಸಿ ಪ್ರಿಯಕರನೊಂದಿಗೆ ನೆಮ್ಮದಿಯ ಜೀವನ ನಡೆಸಲು ವಿದ್ಯಾ ನಿರ್ಧರಿಸಿದ್ದಳು. ಹಾಗಾಗಿ ಚಿದಾನಂದನ ಜತೆ ಚರ್ಚಿಸಿ ಮುನಿರಾಜು ಕೊಲ್ಲಲು ಸಂಚು ರೂಪಿಸಿದರು. ತನ್ನ ಸ್ನೇಹಿತ ರಘು ಜತೆಗೂಡಿ ಆ.25 ರಂದು ರೋಗಿಯೊಬ್ಬರನ್ನು ಕರೆತರಬೇಕು ಎಂದು ಹೇಳಿ ಸ್ಪೇರ್ ಡ್ರೈವರ್ ಆಗಿದ್ದ ಮುನಿರಾಜು ಅವರನ್ನು ಆಲೂರು ತಾಲ್ಲೂಕಿನ ಮಣಿಗನಹಳ್ಳಿ ಬಳಿಗೆ ಕರೆದುಕೊಂಡು ಬಂದಿದ್ದರು. ಬಳಿಕ ಮುನಿರಾಜು ಕುತ್ತಿಗೆಗೆ ಕೇಬಲ್ ಬಿಗಿದು ಉಸಿರುಗಟ್ಟಿಸಿದ್ದಲ್ಲದೆ, ಎದೆ ಹಾಗೂ ಕುತ್ತಿಗೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಬಳಿಕ ಶವವನ್ನು ಹೇಮಾವತಿ ಹಿನ್ನೀರಿಗೆ ಎಸೆದು ಪರಾರಿಯಾಗಿದ್ದರು ಎಂದರು.

ನಂತರ ತಂದೆ ಕಾಣೆಯಾಗಿರುವ ಬಗ್ಗೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸರಿಗೆ ಆ. 25 ರಂದು ದೂರು ನೀಡಿದ್ದಳು. ಆಲೂರು ಬಳಿ ಆ. 26 ರಂದು ಸಿಕ್ಕಿದ್ದ ಅಪರಿಚಿತ ಮೃತದೇಹದ ಬಗ್ಗೆ ಎಲ್ಲೆಡೆ ಪ್ರಚಾರ ಮಾಡಲಾಗಿತ್ತು. ಹಿರೀಸಾವೆ ಪೊಲೀಸ್ ಠಾಣೆಗೂ ಬಂದು ತಂದೆ ಶವ ಎಂದು ಗುರುತು ಮಾಡಿದ್ದಳು. ಅದಾದ ಬಳಿಕ ಚಿದಾನಂದ್ ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ ಎಂದು ಎಸ್‌ಪಿ ಮಾಹಿತಿ ನೀಡಿದರು.

ಆಲೂರು ಠಾಣೆ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ರೇವಣ್ಣ ಹಾಗೂ ಸಿಬ್ಬಂದಿ ನಾಲ್ಕು ದಿನಗಳಲ್ಲಿಯೇ ಪ್ರಕರಣ ಭೇದಿಸಿದ್ದಾರೆ.

ಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ನಂದಿನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT