ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಸಕಾಲಕ್ಕೆ ತಲುಪದ ಬೆಳೆ ವಿಮೆ ಪರಿಹಾರ

ಒಂದೇ ವರ್ಷದಲ್ಲಿ ನೋಂದಾಯಿತರ ಸಂಖ್ಯೆ 6 ಸಾವಿರ ಹೆಚ್ಚಳ
Last Updated 22 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಹಾಸನ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷೆಯ ಪ್ರಧಾನ ಮಂತ್ರಿ ಫಸಲ್‌ ಬಿಮಾ (ವಿಮಾ) ಯೋಜನೆಯ ಬೆಳೆ ವಿಮೆಗೆ
ನೋಂದಾಯಿಸಿಕೊಳ್ಳುವವರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. ಆದರೆ, ವಿಮೆ ಪರಿಹಾರ ಸರಿಯಾದ ಸಮಯಕ್ಕೆ ರೈತರ ಕೈ ಸೇರದಿರುವುದು ಚಿಂತೆಗೀಡು ಮಾಡಿದೆ.

2016-17ನೇ ಸಾಲಿನಲ್ಲಿ 1360 ಜನ ರೈತರಿಗೆ ₹35,81,975 ಪರಿಹಾರ ಮೊತ್ತ ಬಾಕಿ ಇದೆ. ಎರಡು ವರ್ಷಗಳ ಅಂಕಿ ಅಂಶ ಗಮನಿಸಿದರೆ 2018-19ನೇ ಸಾಲಿನ ಹಿಂಗಾರು ಹಾಗೂ 2019-20ನೇ ಸಾಲಿನ ಮುಂಗಾರು ಸೇರಿ 18,128 ರೈತರು ಮತ್ತು2020ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 24,061 ಜನ ರೈತರು ಬೆಳೆ ವಿಮೆಗೆ ನೋಂದಾಯಿಸಿಕೊಂಡಿದ್ದಾರೆ.

ಹಿಂಗಾರು ಹಾಗೂ ಬೇಸಿಗೆ ಹಂಗಾಮಿನ ನೋಂದಣಿ ಈಗ ಪ್ರಾರಂಭವಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ ಈ ವರ್ಷ
ನೋಂದಾಯಿತರ ಸಂಖ್ಯೆ 5,933 ಏರಿಕೆಯಾಗಿದೆ. ಈ ವರ್ಷ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಸಾಕಷ್ಟು ಬೆಳೆ ಹಾನಿಯಾಗಿದೆ. ಹಾಗಾಗಿ ಬೆಳೆ ವಿಮೆ ಪಾವತಿಸಿದವರ ಸಂಖ್ಯೆ ಏರಿಕೆಯಾಗಿರಬಹುದು ಎನ್ನಲಾಗಿದೆ.

‘2016-17ನೇ ಸಾಲಿನಲ್ಲಿ 1360 ಜನ ರೈತರಿಗೆ ₹35,81,975 ಪರಿಹಾರ ಬಾಕಿ ಇದೆ. ದಾಖಲೆ ಸಲ್ಲಿಸುವಾಗ ತಾಂತ್ರಿಕ ದೋಷದಿಂದ ಪರಿಹಾರ ಧನ ‘ಎಸ್ಕ್ರೋ’ ಖಾತೆಗೆ ಜಮೆ ಆಗಿರುತ್ತದೆ. ದಾಖಲೆಗಳನ್ನು ಮತ್ತೆ ಪರಿಶೀಲಿಸಿ ಮರು ಪ್ರಸ್ತಾವನೆ ಸಲ್ಲಿಸಿದರೆ ರೈತರ ಖಾತೆಗೆ ಪರಿಹಾರ ಮೊತ್ತ ಜಮೆ ಆಗಲಿದೆ. 2016-17ನೇ ಸಾಲಿನ 1010 ರೈತರ ದಾಖಲೆಗಳನ್ನು ಪರಿಶೀಲಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ₹27,76,109 ಮೊತ್ತ ಸದ್ಯದಲ್ಲೇ ಬಿಡುಗಡೆ ಆಗಲಿದೆ. ಉಳಿದ 350 ರೈತರ ದಾಖಲೆ ಸರಿಪಡಿಸುವ ಕಾರ್ಯ ಮಾಡಲಾಗುತ್ತಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ಕೆ.ಎಚ್‌. ರವಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ರೈತ ಬ್ಯಾಂಕಿನಲ್ಲಿ ಸಾಲ ಪಡೆದಿದ್ದರೆ, ಅಂತಹ ಖಾತೆಗೆ ಬೆಳೆ ಪರಿಹಾರ ಮೊತ್ತ ಜಮೆ ಆದಲ್ಲಿ, ಸಾಲಕ್ಕೆ ಕಡಿತ ಮಾಡುವುದಿಲ್ಲ. ಮೊದಲು ಹಣ ಕಡಿತವಾದರೂ ಮತ್ತೆ ಅದೇ ಖಾತೆಗೆ ಜಮೆ ಮಾಡಲಾಗುವುದೆಂದು ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ತಿಳಿಸಿದ್ದಾರೆ. ಹಾಗಾಗಿ ರೈತರು ಆತಂಕ ಪಡಬೇಕಾಗಿಲ್ಲ. ಈ ಬಾರಿ ಮೊಬೈಲ್‌ ಆಪ್‌ ಮೂಲಕ ಬೆಳೆ ಸಮೀಕ್ಷೆ ನಡೆಸಲಾಗಿದ್ದು, ಅರ್ಹರಿಗೆ ಪರಿಹಾರ ಸಿಗಲಿದೆ’ ಎಂದು ವಿವರಿಸಿದರು.

‘ಫಸಲ್‌ ಬಿಮಾ ಯೋಜನೆ ಸರಿಯಾದ ರೀತಿಯಲ್ಲಿ ಅನುಷ್ಠಾನ ಆಗುತ್ತಿಲ್ಲ. ಖಾಸಗಿ ವಿಮಾ ಕಂಪನಿ ಆಗಿರುವುದರಿಂದ
ಅವರಿಗೆ ಹಣ ಮಾಡಿಕೊಡಲಾಗುತ್ತಿದೆ. ಬೆಳೆ ನಷ್ಟ ಸಂಭವಿಸಿ ಎರಡು, ಮೂರು ವರ್ಷಗಳು ಕಳೆದರೂ ಪರಿಹಾರ ಸಿಗುತ್ತಿಲ್ಲ. ಫಲಾನುಭವಿಗಳ ಆಯ್ಕೆಯಲ್ಲಿ ಇಲಾಖೆ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಎಚ್‌.ಆರ್‌. ನವೀನ್‌ ಕುಮಾರ್‌ ಆರೋಪಿಸಿದರು.

‘ಪ್ರದೇಶವಾರು ಬೆಳೆ ಸಮೀಕ್ಷೆ ನಡೆಸದೆ ರೈತನ ವೈಯಕ್ತಿಕ ಜಮೀನಿನಲ್ಲಿ ಸಮೀಕ್ಷೆ ನಡೆಸಬೇಕು. ಜೊತೆಗೆ ರೈತ ಈ ಹಿಂದೆ ಬ್ಯಾಂಕಿನಲ್ಲಿ ಸಾಲ ಹೊಂದಿದ್ದರೆ, ವಿಮೆ ಪರಿಹಾರ ಮೊತ್ತ ಸಾಲಕ್ಕೆ ಪಾವತಿಸಿಕೊಳ್ಳಲಾಗುತ್ತಿದೆ. ಇದರಿಂದ ರೈತರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT