ಪಾಂಡವಪುರ: ಬಸ್ ಅಡ್ಡಗಟ್ಟಿ ನಿಲ್ಲಿಸುವಂತೆ ಒತ್ತಡ ಹೇರಿದ ವಿದ್ಯಾರ್ಥಿಯನ್ನು ಪೊಲೀಸ್ ಠಾಣೆಗೆ ಕರೆದೊಯ್ದ ಸಾರಿಗೆ ಸಿಬ್ಬಂದಿ ವಿರುದ್ಧ ಮುಖಂಡ ಸಿ.ಎಸ್.ಪುಟ್ಟರಾಜು ಹರಿಹಾಯ್ದು ಡಿಪೋ ಮ್ಯಾನೇಜರ್ ಅವರನ್ನು ತರಾಟೆಗೆ ತೆಗೆದುಕೊಂಡರು.
ತಾಲ್ಲೂಕಿನ ಟಿ.ಎಸ್.ಛತ್ರ ಗ್ರಾಮದ ಬಳಿ ವಿದ್ಯಾರ್ಥಿಗಳು ಕಾಲೇಜಿಗೆ ಹೋಗಲು ಬಸ್‌ಗಾಗಿ ಕಾಯುತ್ತಿದ್ದರು. ಈ ವೇಳೆ ಬಂದ ಬಸ್ ನಿಲ್ಲಿಸದಿದ್ದಾಗ ವಿದ್ಯಾರ್ಥಿಗಳು ಅಡ್ಡಗಟ್ಟಿ, ‘ಕಾಲೇಜಿಗೆ ಹೋಗಲು ತಡವಾಗುತ್ತಿದೆ ಯಾವ ಕಾರಣಕ್ಕೆ ಬಸ್ ನಿಲ್ಲಿಸುತ್ತಿಲ್ಲ’ ಎಂದು ಪ್ರಶ್ನಿಸಿದರು.
ಪ್ರಶ್ನಿಸಿದವರಲ್ಲಿ ಒಬ್ಬ ವಿದ್ಯಾರ್ಥಿಯನ್ನು ಬಸ್‌ಗೆ ಹತ್ತಿಸಿಕೊಂಡ ಸಾರಿಗೆ ಬಸ್ ಸಿಬ್ಬಂದಿ ಪಾಂಡವಪುರ ಪೊಲೀಸರಿಗೆ ಒಪ್ಪಿಸಿದ್ದರು. ವಿಷಯ ತಿಳಿದ ಸಿ.ಎಸ್.ಪುಟ್ಟರಾಜು, ಪೊಲೀಸ್ ಠಾಣೆಗೆ ಬಂದು, ವಿದ್ಯಾರ್ಥಿಯನ್ನು ಠಾಣೆಯಿಂದ ಬಿಡಿಸಿದದರು.
ಸಾರಿಗೆ ಬಸ್ ಡಿಪೊ ಮ್ಯಾನೇಜರ್ ಅಪ್ಪುರೆಡ್ಡಿ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ತರಾಟೆಗೆ ತೆಗೆದುಕೊಂಡರು. ‘ವಿದ್ಯಾರ್ಥಿಗಳನ್ನು ಪುಗಸಟ್ಟೆ ಬಸ್‌ಗೆ ಹತ್ತಿಸಿಕೊಳ್ಳುತ್ತಿಲ್ಲ. ಸರ್ಕಾರ ವಿದ್ಯಾರ್ಥಿಗಳ ಬಸ್ ಪ್ರಯಾಣಕ್ಕೆ ದುಡ್ಡು ಕೊಡ್ತಿಲ್ವ? ಜನರ ತೆರಿಗೆ ಹಣದಲ್ಲಿ ನೀನು ಬಸ್ ಓಡಿಸುತ್ತಿದ್ದಿಯಾ..’ ಎಂದು ತರಾಟೆಗೆ ತೆಗದುಕೊಂಡರು. ‘ವಿದ್ಯಾರ್ಥಿಯನ್ನು ಪೊಲೀಸ್ ಠಾಣೆಗೆ ಕರೆತರಲು ಎಷ್ಟು ಧೈರ್ಯ ನಿಮಗೆ, ವಿದ್ಯಾರ್ಥಿಗಳಿಗೆ ತೊಂದರೆಕೊಟ್ಟರೇ ಪರಿಣಾಮ ನೆಟ್ಟಗಿರದು ಎಂದು ಎಚ್ಚರಿಕೆ ನೀಡಿದರು.
ವಿದ್ಯಾರ್ಥಿಗಳು ಶಾಲೆ, ಕಾಲೇಜಿಗೆ ತೆರಳಲು ಅನುಕೂಲವಾಗುವಂತೆ ಬಸ್ ವ್ಯವಸ್ಥೆಗೆ ಕ್ರಮಕೈಗೊಳ್ಳಲಾಗುವುದು ಎಂದು ಬಸ್ ಡಿಪೋ ಮ್ಯಾನೇಜರ್ ಅಪ್ಪುರೆಡ್ಡಿ ಭರವಸೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.