ಸೋಮವಾರ, ಆಗಸ್ಟ್ 8, 2022
21 °C
ಮಾರುಕಟ್ಟೆಯಲ್ಲಿ ಜನಜಾತ್ರೆ, ಮಾಸ್ಕ್‌, ಅಂತರ ಪಾಲನೆ ಮಾಯ

ಯುಗಾದಿ ಹಬ್ಬ: ಹಾಸನದಲ್ಲಿ ಕೋವಿಡ್‌ ನಿಯಮ ಗಾಳಿಗೆ ತೂರಿದ ಗ್ರಾಹಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಕೋವಿಡ್‌ ಎರಡನೇ ಅಲೆ ಪ್ರಾರಂಭವಾಗಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದರೂ ಅಂತರ ಪಾಲನೆ, ಮಾಸ್ಕ್‌ ಧರಿಸುವುದು ಸೇರಿದಂತೆ ಸುರಕ್ಷತಾ ನಿಯಮಗಳನ್ನು ಮರೆತು ಸೋಮವಾರ ಮಾರುಕಟ್ಟೆಯಲ್ಲಿ ಖರೀದಿ ನಡೆಸಿದರು.

ನಗರದ ಕಟ್ಟಿನಕೆರೆ ಮಾರುಕಟ್ಟೆ, ಕಸ್ತೂರ ಬಾ ರಸ್ತೆ, ಮಹಾವೀರ ವೃತ್ತ ಸೇರಿದಂತೆ ಆಯಕಟ್ಟಿನ ಸ್ಥಳಗಳಲ್ಲಿ ಜನರು ಹೂವು, ಹಣ್ಣು, ತರಕಾರಿ ಖರೀದಿಗೆ ಮುಗಿ ಬಿದ್ದಿದ್ದರು. ಯುಗಾದಿ ಹಬ್ಬಕ್ಕೆ ಅಗತ್ಯ ವಸ್ತುಗಳನ್ನು ಖರೀದಿ ಮಾಡಲು ಮಾರುಕಟ್ಟೆಗಳಿಗೆ ದಾಂಗುಡಿ ಇಡುತ್ತಿದ್ದಾರೆ.

ಜಿಲ್ಲೆಯಲ್ಲಿ ಪ್ರಸ್ತುತ ಸಕ್ರಿಯ ಪ್ರಕರಣಗಳ ಸಂಖ್ಯೆ ಸಾವಿರ ಗಡಿ ದಾಟಿದೆ. ಜಾತ್ರೆ, ಉತ್ಸವ ಸೇರಿದಂತೆ ಇತರೆಡೆ
ಜನಜಂಗುಳಿ ಸೇರದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಈ ಯಾವುದೇ ನಿಯಮಗಳು ಪಾಲನೆ ಆಗಲಿಲ್ಲ. ವ್ಯಾಪಾರಿಗಳು, ಗ್ರಾಹಕರು ಮಾಸ್ಕ್‌ ಧರಿಸದೇ ಓಡಾಡುತ್ತಿದ್ದರು.

ಬಾಳೆ ದಿಂಡು, ಮಾವಿನ ಸೊಪ್ಪು, ಕಬ್ಬಿನ ಜಲ್ಲೆ ಮುಂತಾದ ಸಾಮಗ್ರಿಗಳ ಮಾರಾಟ ನಗರದ ವಿವಿಧೆಡೆ
ನಡೆಯುತ್ತಿದೆ. ಒಂದು ಕಟ್ಟು ಬೇವಿನ ಸೊಪ್ಪು ₹10, ಮಾರು ಸೇವಂತಿಗೆ ಹೂವು ₹100, ಮಲ್ಲಿಗೆ ₹80, ಕನಕಾಂಬರ ₹50, ತುಳಸಿ ಹಾರ ₹50, ಚೆಂಡು ಹೂವು ₹100, ಬಾಳೆಹಣ್ಣು ಕೆ.ಜಿ ಗೆ ₹50– 60 ರಂತೆ ಮಾರಾಟವಾಗುತ್ತಿದೆ.

‘ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬಟ್ಟೆ ವ್ಯಾಪಾರ ಕೊಂಚ ಚೇತರಿಕೆಯಾಗಿದೆ. ಹೊಸಬಟ್ಟೆ ಖರೀದಿಗೆ
ಬರುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್‌, ಸ್ಯಾನಿಟೈಸರ್‌ ಮತ್ತು ಅಂತರ ಪಾಲನೆ ನಿಯಮ ಪಾಲಿಸಬೇಕು’
ಎಂದು ಮಧು ಕ್ರಿಯೆಷನ್‌ ಬಟ್ಟೆ ಅಂಗಡಿ ಮಾಲೀಕ ಅಮಿದ್‌ ಹೇಳಿದರು.

‘ಕೋವಿಡ್ ಆರಂಭದಲ್ಲಿ ಕಠಿಣ ನಿಯಮ ಕೈಗೊಳ್ಳಲಾಗಿತ್ತು. ಈಗ ಎರಡನೇ ಅಲೆ ಪ್ರಾರಂಭವಾಗಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಾಸ್ಕ್‌ ಧರಿಸದವರಿಗೆ ಹಾಗೂ ಅಂತರ ಪಾಲನೆ ಮಾಡದವರಿಗೆ ದಂಡ ವಿಧಿಸಬೇಕು ’ ಎಂದು ಹೂವಿನ ವ್ಯಾಪಾರಿ ಮಂಜುಳ ಅಭಿಪ್ರಾಯಪಟ್ಟರು.

‘ಕೋವಿಡ್‌ ಎರಡನೇ ಅಲೆ ಆರಂಭವಾಗಿದೆ. ಸಾರ್ವಜನಿಕರಿಗೆ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಹೊರಗೆ ಹೋಗುವಾಗ ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು. ಅಗತ್ಯವಿದ್ದರೆ ಮಾತ್ರ ಖರೀದಿಗೆ ಹೋಗಬೇಕು’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕೆ.ಎಂ.ಸತೀಶ್ ಕುಮಾರ್‌ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು