ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತರ ಮನೆಯಲ್ಲಿ ಎ.ಮಂಜು ಉಪಹಾರ

ಜೆಡಿಎಸ್‌– ಕಾಂಗ್ರೆಸ್‌ ತಿರಸ್ಕರಿಸಿ, ಬಿಜೆಪಿ ಬೆಂಬಲಿಸಲು ಮನವಿ
Last Updated 30 ಮಾರ್ಚ್ 2019, 14:50 IST
ಅಕ್ಷರ ಗಾತ್ರ

ಹಾಸನ: ಪೌರಕಾರ್ಮಿಕರ ಪಾದ ಪೂಜೆ ಮಾಡಿ ನಾಮಪತ್ರ ಸಲ್ಲಿಸಿದ್ದ ಬಿಜೆಪಿ ಅಭ್ಯರ್ಥಿ ಎ.ಮಂಜು, ಈಗ ದಲಿತ ಮುಖಂಡ ಎಚ್.ಕೆ.ಸಂದೇಶ್ ಅವರ ಮನೆಯಲ್ಲಿ ಉಪಾಹಾರ ಸೇವಿಸಿದರೊಂದಿಗೆ ದಲಿತರ ಮತ ಸಳೆಯಲು ಕಾರ್ಯತಂತ್ರ ರೂಪಿಸಿದ್ದಾರೆ.

ನಗರದಲ್ಲಿರುವ ಎಚ್‌.ಕೆ.ಸಂದೇಶ್ ಅವರ ನಿವಾಸಕ್ಕೆ ಮುಖಂಡರೊಂದಿಗೆ ತೆರಳಿ, ಕುಟುಂಬ ಸದಸ್ಯರೊಂದಿಗೆ ಕುಳಿತು ತಿಂಡಿ ತಿಂದರು. ಈ ವೇಳೆ ದಲಿತ ಮುಖಂಡ ಕೃಷ್ಣಕುಮಾರ್‌, ನಾರಾಯಣದಾಸ್‌ ಸೇರಿದಂತೆ ಹಲವರು ಸಾಥ್‌ ನೀಡಿದರು.
‘ಬಿಜೆಪಿ ದಲಿತ ವಿರೋಧಿಗಳಲ್ಲ. ದಲಿತರನ್ನು ಕಾಂಗ್ರೆಸ್ ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಂಡಿದೆ. ದಲಿತ
ವಿರೋಧಿಯಾಗಿರುವ ಜೆಡಿಎಸ್ ತಿರಸ್ಕರಿಸಿ, ಬಿಜೆಪಿ ಬೆಂಬಲಿಸುವಂತೆ’ ಮಂಜು ಕೋರಿದರು.

ಬಳಿಕ ತಾಲ್ಲೂಕಿನ ಯಡೂರು ಗ್ರಾಮದಲ್ಲಿ ಏರ್ಪಡಿಸಿದ್ದ ದಲಿತ ಮುಖಂಡರ ಸಭೆಯಲ್ಲಿ ಮಾತನಾಡಿದ ಮಂಜು, ‘ದಲಿತ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಕಲ್ಪಿಸಲು ನಡೆಸುವ ಯಾವುದೇ ಹೋರಾಟದಲ್ಲಿ ಹಣ ಬೀಳುವುದಾದರೆ ಮೊದಲು ನನ್ನದೇ ಬೀಳಲಿ’ ಎಂದರು.

‘ಒಂದು ಕಾಲದಲ್ಲಿ ನಾನು ಬೆಂಗಳೂರು ಆಳಿದ್ದೇನೆ. ಆದರೆ, ಈಗ ಮನ ಪರಿವರ್ತನೆಯಾಗಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದೇನೆ. ರಾಜಕೀಯದಲ್ಲಿ ನನಗೆ ಇವರು ಯಾವುದಕ್ಕೂ ಸರಿಸಾಟಿಯಲ್ಲ. 25 ವರ್ಷ ಒಕ್ಕಲಿಗ ಸಂಘದ ಕಾರ್ಯದರ್ಶಿಯಾಗಿದ್ದಾಗ ಈ ಕುಟುಂಬದವರನ್ನು ಒಳಗೆ ಬಿಟ್ಟುಕೊಂಡಿರಲಿಲ್ಲ. ನಾನು ದರ್ಬಾರ್‌ ಮಾಡುತ್ತಿದ್ದಾಗ ಅಪ್ಪ–ಮಕ್ಕಳು ಬೆಂಗಳೂರೇ ನೋಡಿರಲಿಲ್ಲ. ನಾನೇನಾದ್ರು ಭಷ್ಟಾಚಾರ ಮಾಡಿದ್ದರೆ ಇವರು ಸುಮ್ಮನೇ ಬಿಡ್ತಿದ್ರಾ’ ಎಂದು ಜೆಡಿಎಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

’ಶೃಂಗೇರಿ ಶಾರದಾಂಬೆ ಪೂಜೆ ಮಾಡಿಕೊಂಡು ಬಂದರೂ ಐಟಿ ದಾಳಿ ತಪ್ಪಲಿಲ್ಲ. ನಿಂಬೆಹಣ್ಣಿನಿಂದಲೇ ಎಲ್ಲವೂ ಆಗುವುದಿದ್ದರೆ ಯುದ್ಧ ವಿಮಾನಗಳು ಏಕೆ ಬೇಕಿತ್ತು? ಎರಡು ನಿಂಬೆ ಹಣ್ಣು ಎಸೆದಿದ್ದರೆ ಸಾಕಿತ್ತು ಅಲ್ಲವೇ’ ಎಂದು ಸಚಿವ ರೇವಣ್ಣ ಅವರ ಕಾಲೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT