ಶನಿವಾರ, ಅಕ್ಟೋಬರ್ 24, 2020
18 °C
ದೋನಹಳ್ಳಿಯಲ್ಲಿ ಎರಡು ತಿಂಗಳ ಹಿಂದೆಯೇ ಮುರಿದು ಬಿದ್ದ ಸೇತುವೆಯ ಒಂದು ಭಾಗ

ಕಿರುಸೇತುವೆಗೆ ಹಾನಿ: ದುರಸ್ತಿಗೆ ಆಗ್ರಹ

ಜಾನೇಕೆರೆ ಆರ್‌. ಪರಮೇಶ್‌ Updated:

ಅಕ್ಷರ ಗಾತ್ರ : | |

Prajavani

ಸಕಲೇಶಪುರ: ತಾಲ್ಲೂಕಿನ ಹಾನುಬಾಳು ಸಮೀಪದ ದೋನಹಳ್ಳಿ ಗ್ರಾಮದ ಬೆಣಗಿನಹಳ್ಳ ಕಿರುಸೇತುವೆಯ ಒಂದು ಭಾಗ ಕುಸಿದು ಎರಡು ತಿಂಗಳು ಕಳೆದರೂ ಇನ್ನೂ ದುರಸ್ತಿಗೊಳಿಸಿಲ್ಲ. ಇದರಿಂದ ಈ ಭಾಗದ ಜನರಿಗೆ ತೀವ್ರ ತೊಂದರೆ ಉಂಟಾಗಿದೆ.

ಆಗಸ್ಟ್‌ ಮೊದಲ ವಾರ ಸುರಿದ ಭಾರಿ ಮಳೆಯಿಂದಾಗಿ ಅವರೇಕಾಡು– ಮಗಜಹಳ್ಳಿ ನಡುವಿನ ಮುಖ್ಯರಸ್ತೆಗೆ ಅಡ್ಡಲಾಗಿರುವ ಬೆಣಗಿನಹಳ್ಳ ಕಿರು ಸೇತುವೆಯ ಒಂದು ಭಾಗದ ಮುರಿದು ಬಿದ್ದಿದೆ. ಇದರಿಂದಾಗಿ ದೋನಹಳ್ಳಿ, ಬಾಚನಹಳ್ಳಿ ಎಸ್ಟೇಟ್‌ ಹಾಗೂ ಅವರೇಕಾಡು ಗ್ರಾಮಸ್ಥರಿಗೆ ಮಗಜಹಳ್ಳಿ, ದೇವಾಲದ ಕೆರೆಯ ಸಂಪರ್ಕ ಕಡಿತಗೊಂಡಿದೆ. ಈ ಗ್ರಾಮಸ್ಥರು ನ್ಯಾಯಬೆಲೆ ಅಂಗಡಿ, ಸರ್ಕಾರಿ ಆಸ್ಪತ್ರೆ, ಸರ್ಕಾರಿ ಶಾಲೆಗೆ ಹೋಗಬೇಕಾದರೆ ದೇವಾಲದಕೆರೆ ಗ್ರಾಮಕ್ಕೆ ಬರಬೇಕು.

ಅಲ್ಲದೆ, ಹೊಳೆಯಿಂದ ಆಚೆ ಬದಿಯಲ್ಲಿ ದೋನಹಳ್ಳಿ ಗ್ರಾಮದ ತೇಜಪಾಲ್‌, ಗಿರೀಶ್‌, ಯೋಗೇಶ್, ರಾಮಚಂದ್ರ, ಅಪ್ಪಣ್ಣ ಸೇರಿದಂತೆ ಇನ್ನೂ ಹಲವು ರೈತರ ತೋಟ ಹಾಗೂ ಗದ್ದೆಗಳು ಇವೆ. ಸೇತುವೆ ಮುರಿದು ಬಿದ್ದಿರುವುದರಿಂದ ಅತ್ತ ಹೋಗುವುದಕ್ಕೆ ಸಾಧ್ಯವಾಗುತ್ತಿಲ್ಲ. ಬಾಚನಹಳ್ಳಿ, ಅವರೇಕಾಡು, ಹಾನುಬಾಳು ಮಾರ್ಗವಾಗಿ ಸುಮಾರು 15 ಕಿ.ಮೀ ಸುತ್ತಿಕೊಂಡು ಹೋಗಬೇಕಾಗಿದೆ. ಕಳೆದ ಒಂದು ವಾರದಿಂದ ನಿರಂತರವಾಗಿ ಮಳೆ ಬೀಳುತ್ತಿರುವುದರಿಂದ ಹಳ್ಳದಲ್ಲಿ ಪುನಃ ಪ್ರವಾಹ ಉಂಟಾಗಿದೆ. ಇದರಿಂದ ಸಮಸ್ಯೆ ಮತ್ತಷ್ಟು ತೀವ್ರವಾಗಿದೆ.

ಈ ಹಳ್ಳಕ್ಕೆ ಎಚ್‌.ಡಿ.ದೇವೇಗೌಡರು ಪ್ರಧಾನಿ ಆಗಿದ್ದ ವೇಳೆ ಕಿರು ಸೇತುವೆಯನ್ನು ನಿರ್ಮಾಣ ಮಾಡಲಾಗಿತ್ತು.

ಸೇತುವೆ ದುರಸ್ತಿ ಮಾಡುವಂತೆ ಜಿಲ್ಲಾಧಿಕಾರಿ, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸ ಲಾಗಿದೆ. ಪ್ರಧಾನಿ ಮೋದಿ ಅವರಿಗೂ ಇ–ಮೇಲ್‌ ಮೂಲಕ ಮನವಿ ಸಲ್ಲಿಸ ಲಾಗಿದೆ. ಆದರೆ, ಈವರೆಗೂ ಸೇತುವೆ ದುರಸ್ತಿಪಡಿಸಿಲ್ಲ ಎಂದು ಗ್ರಾಮದ ಡಿ.ಎಂ.ಗಿರೀಶ್‌ ಬೇಸರ ವ್ಯಕ್ತಪಡಿಸಿದರು.

ಅನುದಾನ ಕೋರಿ ಮನವಿ ಸಲ್ಲಿಕೆ

ದೋನಹಳ್ಳಿ ಕಿರು ಸೇತುವೆ ದುರಸ್ತಿಗಾಗಿ ಮಳೆಹಾನಿ ಪರಿಹಾರ ನಿಧಿ ಮತ್ತು ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಕೋರಿ ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ಅನುದಾನ ಬಿಡುಗಡೆ ಆದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು ಎಂದು ಶಾಸಕ ಎಚ್‌.ಕೆ.ಕುಮಾರಸ್ವಾಮಿ ತಿಳಿಸಿದರು.

**

ಎತ್ತಿನಹೊಳೆ ಯೋಜನೆಯಡಿ ಬಯಲು ಸೀಮೆಗೆ ನಮ್ಮ ತಾಲ್ಲೂಕಿನಿಂದಲೇ ನೀರು ಹರಿಸಲಾ ಗುತ್ತದೆ. ಹೀಗಾಗಿ, ಈ ಯೋಜನೆಯಡಿ ಸೇತುವೆ ದುರಸ್ತಿ ಮಾಡಿಸಬೇಕು.
-ತೇಜ್‌ಪಾಲ್‌, ದೋನಹಳ್ಳಿ ರೈತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.