ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮರಸ್ಯದ ಸಂಕೇತ ರಂಭಾಪುರಿ ದಸರಾ ಸಮ್ಮೇಳನ

Last Updated 26 ಸೆಪ್ಟೆಂಬರ್ 2022, 16:19 IST
ಅಕ್ಷರ ಗಾತ್ರ

ಬೇಲೂರು (ಮಾನವಧರ್ಮ ಮಂಟಪ): ಅಶಾಂತಿಯಿಂದ ನೆಮ್ಮದಿ ಕಳೆದುಕೊಂಡಿರುವ ಜನಸಮುದಾಯಕ್ಕೆ ಸಾಮರಸ್ಯವನ್ನು ಬೆಸೆಯುವುದೇ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಉದ್ದೇಶವಾಗಿದೆ ಎಂದು ರಂಭಾಪುರಿ ಪೀಠದ ಪ್ರಸನ್ನ ರೇಣುಕ ವೀರಸೋಮೇಶ್ವರ ದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ನುಡಿದರು.

ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸೋಮವಾರ ಆರಂಭವಾದ ರಂಭಾಪುರಿ ಶರನ್ನವರಾತ್ರಿ ದಸರಾ ಧರ್ಮ ಸಮ್ಮೇಳನದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ನಾಡಹಬ್ಬ ದಸರಾ ಹಿಂದೂಗಳ ಪವಿತ್ರ ಹಬ್ಬ. ದುಷ್ಟ ಶಕ್ತಿಗಳ ದಮನಕ್ಕಾಗಿ ಹೋರಾಡಿದ ವಿಜಯದ ಸಂಕೇತವಾಗಿದೆ. ವೀರಶೈವ ಎಂಬುದು ಶಕ್ತಿ, ವಿಶಿಷ್ಟ ಸಿದ್ಧಾಂತವಾಗಿದೆ. ವಿಶಿಷ್ಟ ಜೀವನಿಗೂ ಶಕ್ತಿ, ವಿಶಿಷ್ಟ ಶಿವನಿಗೂ ಇರುವ ಸಾಮರಸ್ಯವೇ ವಿಶಿಷ್ಟಾದ್ವೈತ ಎಂದು ವಿವರಿಸಿದರು.

ವಿಜಯನಗರದ ಅರಸರು ದಸರಾ ಆಚರಿಸುತ್ತಿದ್ದರು. ಮೈಸೂರು ಅರಸರು ನಡೆಸಿದ ನಾಡಿನ ಶ್ರೇಯಸ್ಸಿನ ದಸರಾ ಈಗಲೂ ವೈಭವದಿಂದ ನಡೆಯುತ್ತಿದೆ. ಮೈಸೂರಿನಲ್ಲಿ ಅರಮನೆ ದಸರಾ ನಡೆದರೆ, ರಂಭಾಪುರಿ ಪೀಠದಿಂದ ಗುರುಮನೆಯ ದಸರಾ ಆಚರಿಸಿಕೊಂಡು ಬಂದಿದ್ದೇವೆ ಎಂದು ಸ್ವಾಮೀಜಿ ಹೇಳಿದರು.

ಶಿವಾನಂದ ಸ್ವಾಮೀಜಿ ನಾಡಿನ ವಿವಿಧೆಡೆ ಆಚರಿಸಿದ ದಸರಾವನ್ನು ವೀರಗಂಗಾಧರ ಶ್ರೀಗಳು ಮುಂದುವರಿಸಿ ದಸರಾಕ್ಕೆ ಮೆರಗು ನೀಡಿದ್ದಾರೆ. ಇದೇ ಹಾದಿಯಲ್ಲಿ ಮುನ್ನಡೆಯುವ ಮೂಲಕ ಇತಿಹಾಸವನ್ನು ಮರುಕಳಿಸುವಂತಾಗಿದೆ ಎಂದು ಹೇಳಿದರು.

1992ರಲ್ಲಿ ವಿಜಯಪುರ ಜಿಲ್ಲೆಯ ನಿಡಗುಂದಿಯಲ್ಲಿ ಆರಂಭವಾದ ದಸರಾ ನಾಡಿನ ವಿವಿಧ ಭಾಗದಲ್ಲಿ ಪ್ರತಿವರ್ಷ ನಡೆಯುತ್ತಿದೆ. ಈಗ ಹೊಯ್ಸಳ ನಾಡಿನಲ್ಲಿ ರಾಜವೈಭವ ಮರುಕಳಿಸುವಂತೆ ನಡೆಯುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

ಉದ್ಘಾಟಿಸಿ ಮಾತನಾಡಿದ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಧಾರ್ಮಿಕ ಪ್ರಜ್ಞೆ ಜಾಗೃತ: ಧರ್ಮ, ಸಂಸ್ಕೃತಿ, ಗೌರವ ಜನರಲ್ಲಿ ಕಡಿಮೆ ಆಗುತ್ತಿರುವ ಕಾಲದಲ್ಲಿ ಬಾಳೆಹೊನ್ನೂರು ಮಠದ ಶ್ರೀಗಳು, ಧಾರ್ಮಿಕ ಸಮ್ಮೇಳನ ನಡೆಸುವ ಮೂಲಕ ಧಾರ್ಮಿಕ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿದ್ದಾರೆ ಎಂದು ಹೇಳಿದರು.

ಬೇಲೂರಿನಲ್ಲಿ ಪ್ರಾರಂಭಗೊಂಡಿರುವ ದಸರಾ ನಾಡಹಬ್ಬ ಸಂಭ್ರಮದಿಂದ ನಡೆಯುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಶಿವನ ಶಕ್ತಿಯನ್ನು ಆರಾಧಿಸುವುದು ಹಿಂದೂಗಳ ಸಂಸ್ಕೃತಿ. ಭೌತಿಕ ಬದುಕಿಗೆ ಸುಖ ಶಾಂತಿ ಪ್ರಾಪ್ತವಾಗಬೇಕಾದರೆ ಆಧ್ಯಾತ್ಮಿಕ ಭಾವನೆ ಜಾಗೃತಗೊಳಿಸಬೇಕಾಗುತ್ತದೆ ಎಂದರು.

ದಸರಾ ಧರ್ಮ ಸಮ್ಮೇಳನ ಭಕ್ತರಿಗೆ ಮಾನಸಿಕ ನೆಮ್ಮದಿ ನೀಡುತ್ತದೆ. ಭಕ್ತರಿಗೆ ಜಗದ್ಗುರುಗಳು ನೀಡುವ ಹಿತವಚನ ಬದುಕಿಗೆ ದಾರಿದೀಪವಾಗಲಿದೆ. ಧರ್ಮ ಸಮ್ಮೇಳನದಲ್ಲಿ ಭಾಗವಹಿಸಿ ಸಾಮರಸ್ಯದ ಹಬ್ಬವನ್ನು ಕಣ್ತುಂಬಿಕೊಳ್ಳುವ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ ಯಡಿಯೂರಪ್ಪ ಹೇಳಿದರು.

ಪುಷ್ಪಗಿರಿ ಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಭಾವತರಂಗ ಕೃತಿ ಬಿಡುಗಡೆ ಮಾಡಿದರು.ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮೀಜಿ, ಬಾಳೆಹೊನ್ನೂರು ರೇಣುಕಚಾರ್ಯ ಗುರುಕುಲ, ತೆಂಡೇಕೆರೆ ಶಾಖಾಮಠದ ಗಂಗಾಧರ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾ ಉಸ್ತುವಾರಿ ಸಚಿವ ಕೆ. ಗೋಪಾಲಯ್ಯ, ಶಾಸಕರಾದ.ಕೆ.ಎಸ್.ಲಿಂಗೇಶ್, ಬೆಳ್ಳಿಪ್ರಕಾಶ್, ವೀರಶೈವ ಲಿಂಗಾಯತ ಅಭಿವೃದ್ದಿ ಮಂಡಳಿ ಅಧ್ಯಕ್ಷ ಬಿ.ಎಸ್. ಮರಮಶಿವಯ್ಯ, ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕರ್, ಜಿಲ್ಲಾ ಪಂಚಾಯಿತಿ ಸಿಇಒ ಕಾಂತರಾಜ್ ಇದ್ದರು.

ದಸರಾ ಧರ್ಮ ಸಮ್ಮೇಳನ ಆರಂಭ
ಸಂಜೆ ತಂಪಾದ ವಾತಾವರಣದಲ್ಲಿ ರಂಭಾಪುರಿ ಶ್ರೀಗಳ ಶರನ್ನವರಾತ್ರಿ ದಸರಾ ಧರ್ಮಸಮ್ಮೇಳನ ಸೋಮವಾರ ಆರಂಭವಾಯಿತು.
ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ ಅವರನ್ನು ಮಂಗಳ ವಾದ್ಯ, ಕೊಂಬು ಕಹಳೆಯ ಮೊದಲಾದ ವಾದ್ಯತಂಡದೊಂದಿಗೆ ಶಿವಕುಮಾರ ಸ್ವಾಮೀಜಿ ಸಮುದಾಯ ಭವನದಿಂದ ಬೇಲೂರಿನ ಸರ್ಕಾರಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ನಿರ್ಮಿಸಿದ್ದ ಭವ್ಯ ವೇದಿಕೆಗೆ ಕರೆ ತರಲಾಯಿತು.

ರಾಜ ಪರಿವಾರದವರಂತೆ ವಿಶಿಷ್ಟ ಉಡುಪು ಧರಿಸಿದ್ದ ಸೇವಕರು, ಸ್ವಾಮೀಜಿ ಅವರನ್ನು ಕರೆ ತಂದರು. ಸುದೀರ್ಘವಾದ ಬಿರುದಾವಳಿಗಳನ್ನು ಪಠಿಸಲಾಯಿತು. ಶಾಸಕ ಕೆ.ಎಸ್.ಲಿಂಗೇಶ್ ಹಾಗೂ ರಂಭಾಪುರಿ ಪೀಠದ ವಿವಿಧ ಶಾಖಾ ಮಠದ ಸ್ವಾಮೀಜಿಗಳು ಜೊತೆಯಲ್ಲಿ ಹೆಜ್ಜೆ ಹಾಕಿದರು. ಚನ್ನಕೇಶವನ ಬೀಡಾದ ಹೊಯ್ಸಳರ ನಾಡಿನಲ್ಲಿ ರಾಜವೈಭವ ಮರುಕಳಿಸಿತ್ತು.
ರಂಭಾಪುರಿ ಶ್ರೀಗಳು ಕೆಂಪು ಪೇಟದೊಂದಿಗೆ ಹಸಿರು ಕೆಂಪು ಬಣ್ಣದ ವಿಶಿಷ್ಟ ಉಡುಪು ಧರಿಸಿದ್ದು ವಿಶೇಷವಾಗಿತ್ತು. ಗಾನಭೂಷಣ ಗದುಗಿನ ವಿರೇಶ ಕಿತ್ತೂರ ವಾದ್ಯಗೋಷ್ಠಿಯೊಂದಿಗೆ ಭಕ್ತಿಗಾಯನದ ಸುಧೆ ಹರಿಸಿದರು. ಹಾಡಿನ ಮೂಲಕ ರಂಭಾಪುರಿ, ಉಜ್ಜಯಿನಿ, ಕೇದಾರ, ಶ್ರೀಶೈಲ, ಕಾಶಿ ಪೀಠಗಳ ಕುರಿತು ಹಾಡುತ್ತ, ಪಂಚಪೀಠಗಳ ಮಹತ್ವ ಸಾರಿದರು. ಶಿವಮೊಗ್ಗದ ಜಿ.ಬಿ.ರಕ್ಷಿತಾ ಭರತನಾಟ್ಯ ಪ್ರದರ್ಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT