ಹಾಸನ: ಪೈಲ್ಸ್ ಸಮಸ್ಯೆಗೆ ಸಮರ್ಪಕ ಚಿಕಿತ್ಸೆ ನೀಡದೇ ಆರೋಗ್ಯ ಹದಗೆಡಲು ಕಾರಣವಾದ ವೈದ್ಯನಿಗೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ₹10 ಲಕ್ಷ ಪರಿಹಾರ ನೀಡುವಂತೆ ಆದೇಶಿಸಿದೆ.
ಚನ್ನರಾಯಪಟ್ಟಣ ತಾಲ್ಲೂಕಿನ ಪಿಲ್ಲಹಳ್ಳಿ ಗ್ರಾಮದ ಮಹೇಶ್ ಪಿ.ಡಿ. ಅವರಿಗೆ ಪೈಲ್ಸ್ ತೊಂದರೆ ಉಂಟಾಗಿದ್ದು, ಕೆ.ಆರ್.ಪೇಟೆಯಲ್ಲಿ ಸಾಬಾ ಕ್ಲಿನಿಕ್‌ಗೆ ತೆರಳಿದ್ದರು. ಅಲ್ಲಿನ ವೈದ್ಯ ಡಾ.ನಿಸಾರ್ ಅಹಮದ್, ಪೈಲ್ಸ್ ತೊಂದರೆಯನ್ನು ಶಸ್ತ್ರಚಿಕಿತ್ಸೆ ಇಲ್ಲದೇ ನಿವಾರಣೆ ಮಾಡುವುದಾಗಿ ಆಶ್ವಾಸನೆ ನೀಡಿ ಚಿಕಿತ್ಸೆ ಪ್ರಾರಂಭಿಸಿದ್ದರು. ಚಿಕಿತ್ಸೆಯ ನಂತರ ನೋವು ಕಡಿಮೆಯಾಗುವ ಬದಲು ಇನ್ನೂ ಹೆಚ್ಚಾಗಿತ್ತು..
ಮಹೇಶ್ ಅವರನ್ನು ಪರೀಕ್ಷಿಸಿದ ಡಾ.ನಿಸಾರ್ ಅಹಮದ್, ತಕ್ಷಣವೇ ಶಸ್ತ್ರಚಿಕಿತ್ಸೆ ಮಾಡಿ ಪೈಲ್ಸ್ ತೆಗೆಯಬೇಕು ಎಂದು ಹೇಳಿ, ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ. ಅಲ್ಲದೇ ₹17,500 ಪಡೆದಿದ್ದರು.
ಆದರೆ, ಶಸ್ತ್ರಚಿಕಿತ್ಸೆ ಮಾಡಿದ ಭಾಗದಲ್ಲಿ ನೋವು ಜಾಸ್ತಿಯಾಗಿದ್ದು, ರಕ್ತಸ್ರಾವ ಹೆಚ್ಚಾಗಿತ್ತು. ಈ ಬಗ್ಗೆ ಡಾ.ನಿಸಾರ್ ಅಹಮದ್ ಅವರಿಗೆ ತಿಳಿಸಿದರೂ, ಸರಿಯಾದ ಉತ್ತರ ನೀಡದೇ, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಹೋಗುವಂತೆ ಸೂಚಿಸಿದ್ದರು.
ನಂತರ ಮಹೇಶ್ ಅವರು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಾಗಿದ್ದು, ಗುದನಾಳ ಮತ್ತು ಕರುಳಿನ ಭಾಗಕ್ಕೆ ಆಗಿರುವ ಹಾನಿ ಸರಿಪಡಿಸಲು ಹೆಚ್ಚಿನ ಖರ್ಚಾಗುತ್ತದೆ. ಅಲ್ಲದೇ ಸಾಮಾನ್ಯ ಜೀವನ ನಡೆಸಲು ಸಾಧ್ಯವಾಗದ ಪರಿಸ್ಥಿತಿ ಉಂಟಾಗಿದೆ.
ತಮಗೆ ಉಂಟಾದ ಮಾನಸಿಕ ಹಿಂಸೆ, ನೋವು, ವೈದ್ಯಕೀಯ ವೆಚ್ಚ, ಸೇವಾನ್ಯೂನತೆ ಹಾಗೂ ಫಿರ್ಯಾದಿನ ಖರ್ಚಿನ ಪರಿಹಾರವಾಗಿ ಒಟ್ಟಾರೆ ₹45,73,500 ಪರಿಹಾರವಾಗಿ ಕೊಡಿಸುವಂತೆ ಮಹೇಶ್ ಅವರು ಹಾಸನದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷೆ ಚಂಚಲ ಸಿ.ಎಂ. ಹಾಗೂ ಸದಸ್ಯೆ ಅನುಪಮಾ ಆರ್. ಅವರನ್ನು ಒಳಗೊಂಡ ಪೀಠವು, ಮಹೇಶ್ ಅವರಿಗೆ ಒಟ್ಟು ಪರಿಹಾರವಾಗಿ ₹10 ಲಕ್ಷ ಅನ್ನು ಆದೇಶವಾದ ದಿನಾಂಕದಿಂದ 45 ದಿನಗಳೊಳಗಾಗಿ ನೀಡಬೇಕು. ತಪ್ಪಿದ್ದಲ್ಲಿ ಒಟ್ಟು ಮೊತ್ತದ ಮೇಲೆ ವಾರ್ಷಿಕ ಶೇ 10ರ ಬಡ್ಡಿಯೊಂದಿಗೆ ಪಾವತಿಸುವಂತೆ ಆದೇಶ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.