ಸ್ಥಳೀಯರಿಗೇ ಉದ್ಯೋಗ ನೀಡಲು ಆಗ್ರಹ

7
ಕಾರ್ಖಾನೆ ಎದುರು ಜಮಾಯಿಸಿದ ಗ್ರಾಮಸ್ಥರ ಪ್ರತಿಭಟನೆ

ಸ್ಥಳೀಯರಿಗೇ ಉದ್ಯೋಗ ನೀಡಲು ಆಗ್ರಹ

Published:
Updated:
ಹಾಸನ ಹೊರವಲಯದ ಕೈಗಾರಿಕಾ ಪ್ರದೇಶದಲ್ಲಿರುವ ವುಡ್‌ಪೇಕರ್ ಡಿಸ್ಟಲರೀನ್, ಬ್ರೇವೆರಿನ್ ಕಾರ್ಖಾನೆ ಎದರು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಹಾಸನ: ‘ಇಲ್ಲಿನ ವುಡ್‌ಪೇಕರ್ ಡಿಸ್ಟಿಲರೀಸ್ ಕಾರ್ಖಾನೆ ಸ್ಥಳೀಯರಿಗೆ ಉದ್ಯೋಗ ನೀಡುತ್ತಿಲ್ಲ. ಆಡಳಿತ ಮಂಡಳಿ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿ ಕೈಗಾರಿಕಾ ಪ್ರದೇಶ ಸುತ್ತಲಿನ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಶುಕ್ರವಾರ ಕಾರ್ಖಾನೆಯ ಎದುರು ನೂರಾರು ಸಂಖ್ಯೆಯಲ್ಲಿ ಸೇರಿದ ಜನರು ಆಡಳಿತ ಮಂಡಳಿ ವಿರುದ್ಧ ಧಿಕ್ಕಾರದ ಘೋಷಣೆಗಳನ್ನೂ ಕೂಗಿದರು. ‘ಕಾರ್ಖಾನೆ ಸ್ಥಾಪನೆಗೆ 300 ಎಕರೆ ಜಮೀನು ಪಡೆದಿದ್ದು, ರೈತರು ಭೂಮಿ ಕಳೆದುಕೊಂಡಿದ್ದಾರೆ. 30 ವರ್ಷದ ಹಿಂದೆ ಎಕರೆಗೆ ₹ 50 ಸಾವಿರ ನೀಡಿ ಭೂಮಿ ಮಾರಾಟ ಮಾಡಲಾಗಿತ್ತು. ಆದರೆ, ಈಗ ಭೂಮಿ ಕಳೆದುಕೊಂಡ ರೈತರ ಕುಟುಂಬದ ಸದಸ್ಯರಿಗೆ ಉದ್ಯೋಗ ನೀಡುತ್ತಿಲ್ಲ. ಬಿಹಾರ, ಪಂಜಾಬ್‌, ಅಸ್ಸಾಂನಿಂದ ಬಂದಿರುವ ಕಾರ್ಮಿಕರಿಗೆ ಉದ್ಯೋಗ ನೀಡುವ ಬದಲು ಸ್ಥಳೀಯರಿಗೆ ಆದ್ಯತೆ ನೀಡಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

‘ಶಾಂತಿಗ್ರಾಮ ಹೋಬಳಿಯ ಕೌಶಿಕ, ಮರ್ಕುಲಿ, ಅಂಬುಗ ಗ್ರಾಮ ಪಂಚಾಯಿತಿಗೆ ಸೇರಿದ ಜಮೀನನ್ನು ಕಂಪನಿ ಪಡೆದಿದೆ.ಕಡಿಮೆ ಬೆಲೆಗೆ ಭೂಮಿ ಪಡೆದಿದ್ದಲ್ಲದೇ ಉದ್ಯೋಗ ನೀಡದೆ ಬಡರೈತರನ್ನು ಬೀದಿಗೆ ತಳ್ಳಿದ್ದಾರೆ’ ಎಂದರು.

‘ಉದ್ಯೋಗ ಹುಡುಕಿಕೊಂಡು ಬರುವ ಜಿಲ್ಲೆಯ ಅಭ್ಯರ್ಥಿಗಳ ಅರ್ಜಿಗಳನ್ನು ಕಡೆಗಣಿಸುತ್ತಾರೆ. ಪದವಿ, ಐಟಿಐ, ಡಿಪ್ಲೊಮಾ ಇನ್ನಿತರ ವಿದ್ಯಾರ್ಹತೆಯ ಯುವಜನರಿಗೆ ಉದ್ಯೋಗ ನೀಡಬೇಕು. ಕಾರ್ಖಾನೆಯಲ್ಲಿ ಇದುವರೆಗೆ ಸ್ಥಳೀಯವಾಗಿ ಕೇವಲ 15 ಜನರಿಗೆ ಉದ್ಯೋಗ ನೀಡಲಾಗಿದೆ’ ಎಂದು ಆರೋಪಿಸಿದರು.

‘ಕಂಪನಿ ಆರಂಭವಾಗಿ ಐದು ತಿಂಗಳು ಕಳೆದಿದೆ. ಪರಿಸರ ಮಾಲಿನ್ಯವಾಗದಂತೆ ಈಗಿನಿಂದಲೇ ಜಾಗ್ರತೆ ವಹಿಸಬೇಕು.  ತ್ಯಾಜ್ಯ ನೀರಿನ ಪರಿಣಾಮ  ಆಗಲೇ ನೀರು ಕಲುಷಿತವಾಗುತ್ತಿದೆ’ ಎಂದು ಆರೋಪಿಸಿದರು.

ಜಿಲ್ಲಾಡಳಿತ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸಂಬಂಧಿಸಿದವರ ಜೊತೆಗೆ ಚರ್ಚಿಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳಿಸಲಾಗುವುದು’ ಎಂದು ಎಚ್ಚರಿಸಿದರು.

ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಟಿ.ಸತೀಶ್, ಜೆಡಿಎಸ್ ಮುಖಂಡರಾದ ಎಸ್‌.ದ್ಯಾವೇಗೌಡ, ಪುಟ್ಟರಾಜು, ಅಗಿಲೆ ನವೀನ್, ಅಶೋಕ್, ಶೇಷಾದ್ರಿ, ಇಂದ್ರೆಶ್ ಕಾರ್ಲೆ, ರಾಮಚಂದ್ರು, ರಂಗಶೆಟ್ಟಿ ಇತರರು ಮುಂಚೂಣಿಯಲ್ಲಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !