ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಾಸನ: ಮುನಿರತ್ನ ಶಾಸಕ ಸ್ಥಾನ ರದ್ದುಗೊಳಿಸಲು ಒತ್ತಾಯ

ಸಂವಿಧಾನ ವಿರೋಧಿ ನಡೆ: ಗಡೀಪಾರು ಶಿಕ್ಷೆ ನೀಡಲು ಡಿಎಸ್‌ಎಸ್‌ ಆಗ್ರಹ
Published : 17 ಸೆಪ್ಟೆಂಬರ್ 2024, 14:16 IST
Last Updated : 17 ಸೆಪ್ಟೆಂಬರ್ 2024, 14:16 IST
ಫಾಲೋ ಮಾಡಿ
Comments

ಹಾಸನ: ದಲಿತ ಹಾಗೂ ಒಕ್ಕಲಿಗ ಸಮುದಾಯದ ಮಹಿಳೆಯರನ್ನು ಬಹಿರಂಗವಾಗಿ ನಿಂದಿಸಿರುವ ಮುನಿರತ್ನ ಶಾಸಕ ಸ್ಥಾನವನ್ನು ರದ್ದುಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ರಾಜ್ಯ ಘಟಕದ ಸಂಚಾಲಕ ಎಂ. ಸೋಮಶೇಖರ್ ಮಾತನಾಡಿ, ‘ದಲಿತರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಶಾಸಕ ಮುನಿರತ್ನ ಅವರನ್ನು ಬಂಧಿಸಲಾಗಿದೆ. ಆದರೆ ಇವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಶಾಸಕ ಸ್ಥಾನವನ್ನು ರದ್ದುಗೊಳಿಸಬೇಕು’ ಎಂದು ಆಗ್ರಹಿಸಿದರು.

‘ಮುನಿರತ್ನ ಅವರು ಸ್ಪರ್ಧಿಸಿದ್ದ ವಿಧಾನಸಭಾ ಕ್ಷೇತ್ರದಲ್ಲಿ 50ಸಾವಿರಕ್ಕೂ ಹೆಚ್ಚು ಮತಗಳು ದಲಿತರಿಂದ ಬಂದಿವೆ. ಆದರೆ, ಆ ಸಮುದಾಯದವರನ್ನೇ ನಿಂದಿಸಿ ಸಂವಿಧಾನ ವಿರೋಧಿ ಕೆಲಸ ಮಾಡಿದ್ದಾರೆ’ ಎಂದು ದೂರಿದರು.

‘ಸಂವಿಧಾನಬದ್ಧವಾಗಿ ಅಧಿಕಾರವನ್ನು ಪಡೆದಿರುವ ಇವರು, ಶಾಸಕ ಸ್ಥಾನದಲ್ಲಿ ಮುಂದುವರಿಯುವುದು ಸರಿಯಲ್ಲ. ಅವರನ್ನು ಶಾಸಕ ಸ್ಥಾನ ರದ್ದುಗೊಳಿಸಬೇಕು ಎಂದು ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯದಾದ್ಯಂತ ಇಂದು ಹೋರಾಟವನ್ನು ಹಮ್ಮಿಕೊಂಡಿದೆ’ ಎಂದರು.

‘ಮುನಿರತ್ನ ಅವರ ವರ್ತನೆ ಸಂವಿಧಾನ ವಿರೋಧಿಯಾಗಿದ್ದು, ಮುಂದಿನ ಯಾವುದೇ ಚುನಾವಣೆಯಲ್ಲಿ ಅವರು ಸ್ಪರ್ಧಿಸದಂತೆ ರಾಜ್ಯಪಾಲರು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಸಂಚಾಲಕ ವಳಲಹಳ್ಳಿ ವೀರೇಶ್ ಮಾತನಾಡಿ, ‘ಪರಿಶಿಷ್ಟ ಜಾತಿ, ಪಂಗಡ ಮತ್ತು ಒಕ್ಕಲಿಗ ಸಮುದಾಯದ ಮಹಿಳೆಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಮುನಿರತ್ನ ಅವರ ಶಾಸಕ ಸ್ಥಾನ ರದ್ದುಪಡಿಸುವುದಷ್ಟೇ, ರಾಜ್ಯದಿಂದ ಗಡೀಪಾರು ಮಾಡಬೇಕು. ಸಂವಿಧಾನ ವಿರೋಧಿ ನಡೆ ಅನುಸರಿಸಿರುವ ಅವರ ವಿರುದ್ಧ ಸರ್ಕಾರ ಹಾಗೂ ರಾಜ್ಯಪಾಲರು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

‘ಈ ರೀತಿ ಸಂವಿಧಾನಬದ್ಧ ಹುದ್ದೆಗೆ ವಿರುದ್ಧವಾಗಿ ನಡೆದುಕೊಂಡಿರುವ ಶಾಸಕರ ವಿರುದ್ಧ ಪರಿಶಿಷ್ಟ ಜಾತಿ ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿ ಶಾಸಕ ಸ್ಥಾನದಿಂದ ವಜಾ ಗೊಳಿಸಬೇಕು’ ಎಂದರು.

ಪ್ರತಿಭಟನೆಯಲ್ಲಿ ರಮೇಶ್, ಕೃಷ್ಣದಾಸ್, ಆರ್‌ಪಿಐ ಸತೀಶ್, ಅಬ್ದುಲ್ ಸಮ್ಮದ್, ರಾಜು ಗೊರೂರು, ಎಚ್.ಕೆ. ಸಂದೇಶ್, ಪುಟ್ಟರಾಜಪ್ಪ, ವಿಜಯ್ ಕುಮಾರ್, ಮಧು, ಲೋಕೇಶ್, ದೀಪು, ಎಂ.ಜಿ ಪೃಥ್ವಿ, ಧರ್ಮೇಶ್, ಮಂಜುನಾಥ್, ದಿನೇಶ್, ಎಚ್.ಎಸ್. ಮಂಜುನಾಥ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT