ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವೇಗೌಡರಿಗೆ ರಾಜಕೀಯ ಪುನರ್ಜನ್ಮ ನೀಡಿದ್ದೇ ನಾನು: ಮಂಜು ಕಿಡಿ

ಸೋಲಿನ ಭೀತಿಯಿಂದ ಇಲ್ಲ, ಸಲ್ಲದ ಆರೋಪ
Last Updated 16 ಏಪ್ರಿಲ್ 2019, 20:26 IST
ಅಕ್ಷರ ಗಾತ್ರ

ಹಾಸನ: ‘ನನ್ನ ಮತ್ತು ಹಿರಿಯ ಮುಖಂಡ ಹನುಮೇಗೌಡರ ಸಹಕಾರದಿಂದ 1991ರಲ್ಲಿ ಲೋಕಸಭೆಗೆ ಸ್ಪರ್ಧಿಸಿದ್ದ ದೇವೇಗೌಡರು ಗೆಲುವು ಸಾಧಿಸಿದರು. ಅವರಿಗೆ ರಾಜಕೀಯ ಪುನರ್ಜನ್ಮ ಕೊಟ್ಟಿದ್ದೇ ನಾನು’ ಎಂದು ಬಿಜೆಪಿ ಅಭ್ಯರ್ಥಿ ಎ.ಮಂಜು ಹೇಳಿದರು.

‘ಸಚಿವ ರೇವಣ್ಣ ಅವರು ಸೋಲಿನ ಭಯದಿಂದ ಹತಾಶರಾಗಿ ನನ್ನನ್ನ ಬೆಂಗಳೂರು ಡಾನ್ ಎಂದಿದ್ದಾರೆ. ಡಾನ್ ಅಂದರೆ ಕ್ರಿಮಿನಲ್ ಕೇಸ್‌ ಇರಬೇಕು. ರೌಡಿ ಶೀಟರ್ ಆಗಿರಬೇಕು. ನಾನು ಅವರಂತೆ ರಣ ಹೇಡಿ ಅಲ್ಲ. ನೇರವಾಗಿ ಹೋರಾಡುವ ವ್ಯಕ್ತಿ’ ಎಂದು ಸುದ್ದಿಗೋಷ್ಠಿಯಲ್ಲಿ ವಾಗ್ದಾಳಿ ನಡೆಸಿದರು.

ಬಸವಾಪಟ್ಟಣದ ಎಂಜಿನಿಯರ್ ಸಾವಿಗೆ ಯಾರು ಕಾರಣ ಎಂಬುದನ್ನು ರೇವಣ್ಣ ಹೇಳಬೇಕು. ‌ಮಹಿಳೆಯರಿಗೂ ಸಾಕಷ್ಟು ಕಿರುಕುಳ ನೀಡಿದ್ದಾರೆ. ದೇವೇಗೌಡರ ಕುಟುಂಬದ ಆಂತರಿಕ ಕಚ್ಚಾಟದ ವಿಡಿಯೊವನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಗುಡುಗಿದರು.

‘ರೇವಣ್ಣನನ್ನು ಹಾಸನ ಡೇರಿಗೆ ಅಧ್ಯಕ್ಷನಾಗಿ ಮಾಡಿದ್ದು ನಾನು. ಆದರೆ, ಅವರು ಈಗ ಅದನ್ನು ಮರೆತಿದ್ದಾರೆ. ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಮುಗಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಏನಾದರೂ ಸಣ್ಣ ತಪ್ಪು ಮಾಡಿದ್ದರೆ ಬಿಡುತ್ತಿದ್ದರಾ’ ಎಂದು ಪ್ರಶ್ನಿಸಿದರು.

ದೇವರೇ ಇದ್ದರೆ ಇವರ ಕುಟುಂಬವನ್ನ ಕ್ಷಮಿಸುವುದಿಲ್ಲ. ನೀರಾವರಿ ಇಲಾಖೆ ಹಣವನ್ನು ದೇವಾಲಯ ಕಟ್ಟಲ ಬಳಸಿದ್ದರೆ. ಇದರ ತನಿಖೆ ಮಾಡಿಸಲಾಗುವುದು. ಶಾಸಕ ಪ್ರೀತಂಗೌಡ ಮನೆ ಮೇಲೆ ಕಲ್ಲು ಹೊಡೆದರೆ ದೇವೇಗೌಡರು ಯಾರು ಪ್ರೀತಂಗೌಡ ಅಂತಾರೆ.‌ ಇಷ್ಟು ದಿನ ಎಂದೂ ರೇವಣ್ಣ ನನ್ನ ಬಗ್ಗೆ ಮಾತನಾಡಿರಲಿಲ್ಲ. ಮಗ ಚುನಾವಣೆಗೆ ಸ್ಪರ್ಧಿಸಿರುವ ಕಾರಣ ಏನೇನೋ ಮಾತನಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗೌಡರ ಕುಟುಂಬದ ಸಾಧನೆ ಏನಿದ್ದರೂ ರೈತರ ಭೂಮಿ ವಶಕ್ಕೆ ಪಡೆದು ಬೇರೆಯವರಿಗೆ ಕೊಡುವುದು. ಎಷ್ಟು ದಿನ ನಡೆಯುತ್ತದೆ. 23 ನೇ ತಾರೀಖಿನವರೆಗೆ ಅಷ್ಟೇ ತಾನೆ. ಬಾಯಿ ಚಪಲಕ್ಕೆ, ತೀಟೆ ತೀರಿಸಿಕೊಳ್ಳಲು ಮಾತನಾಡಬಾರದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಜನರು ಬದಲಾವಣೆ ಬಯಸಿದ್ದಾರೆ. ಹಿಂದೆ ದೇವೇಗೌಡರ ವಿರುದ್ಧ ಸ್ಪರ್ಧಿಸಿ ಕಡಿಮೆ ಅಂತರದಲ್ಲಿ ಸೋತಿದ್ದೆ.ಈ ಬಾರಿ ಗೆಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸೈನಿಕರ ಬಗ್ಗೆ ಹೇಳಿಕೆ ನೀಡಿರುವ ಸಿ.ಎಂ ಕುಮಾರಸ್ವಾಮಿ ಕೂಡಲೇ ಕ್ಷಮೆ ಕೇಳಬೇಕು. ಹಿಂದೆ ಮೋದಿ ಪ್ರಧಾನಿಯಾದರೆ ದೇಶ ಬಿಟ್ಟು ಹೋಗ್ತೀನಿ ಎಂದು ಗೌಡರು ಹೇಳಿದ್ದರು. ಈಗ ಹಾಸನ ಬಿಟ್ಟು ತುಮಕೂರಿಗೆ ಹೋಗಿದ್ದಾರೆ. ಈಗ ರೇವಣ್ಣ ರಾಜಕೀಯ ನಿವೃತ್ತಿ ಅಂತಿದ್ದಾರೆ ಎಂದು ಲೇವಡಿ ಮಾಡಿದರು.

ಗೋಷ್ಠಿಯಲ್ಲಿ ಶಾಸಕ ಪ್ರೀತಂ ಗೌಡ, ಜಿಲ್ಲಾ ಘಟಕದ ಅಧ್ಯಕ್ಷ ನವಿಲೆ ಅಣ್ಣಪ್ಪ, ಸುರೇಶ್‌, ಶೋಬನ್‌ ಬಾಬು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT