ದೇವೇಗೌಡರಿಗೆ ಯಾರ ಮೇಲೂ ನಂಬಿಕೆ ಇಲ್ಲ: ಅಶೋಕ್‌

ಸೋಮವಾರ, ಏಪ್ರಿಲ್ 22, 2019
32 °C
'ರೇವಣ್ಣಗೆ ನಿಂಬೆ ಹಣ್ಣು ಚಿಹ್ನೆ ಕೊಡಬೇಕಿತ್ತು'

ದೇವೇಗೌಡರಿಗೆ ಯಾರ ಮೇಲೂ ನಂಬಿಕೆ ಇಲ್ಲ: ಅಶೋಕ್‌

Published:
Updated:

ಹಾಸನ: ಲೋಕಸಭಾ ಚುನಾವಣೆಯಲ್ಲಿ ದಳಪತಿಗಳಿಗೆ ಸೆಡ್ಡು ಹೊಡೆಯಲು ಹೊರಟಿರುವ ಬಿಜೆಪಿ, ರಾಜ್ಯ ನಾಯಕರನ್ನೂ ಜಿಲ್ಲೆಗೆ ಕರೆ ತಂದು ಪ್ರಚಾರ ಮಾಡಿಸುವ ಮೂಲಕ ಮತದಾರರ ಮನ ಗೆಲ್ಲಲು ಮುಂದಾಗಿದೆ.

ಬಿಜೆಪಿ ಹಿರಿಯ ನಾಯಕ ಎಸ್.ಎಂ.ಕೃಷ್ಣ, ಬಿಜೆಪಿ ಅಭ್ಯರ್ಥಿ ಎ.ಮಂಜು ಪರ ಅರಸೀಕೆರೆ ತಾಲ್ಲೂಕಿನ ಗಂಡಸಿ, ಬೇಲೂರು ತಾಲ್ಲೂಕಿನ ಅಂದಲೆ, ಹಗರೆ ಮತ್ತು ಗೆಂಡೆಹಳ್ಳಿ ಮೊದಲಾದ ಕಡೆ ಪ್ರಚಾರ ನಡೆಸಿ, ಮತಯಾಚಿಸಿದರು.

’ಮತ್ತೊಂದೆಡೆ ಮೋದಿ ಪ್ರಧಾನಿ ಆಗುವುದನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಆ ತಾಕತ್ತು ಯಾರಿಗೂ ಇಲ್ಲ’ ಎಂದು ಶಾಸಕ ಆರ್.ಅಶೋಕ್ ಹೇಳಿದರು.

ಇದಕ್ಕೂ ಮುನ್ನ ಹಾಸನದ ಬೂವನಹಳ್ಳಿ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಗೆ ಮಾತನಾಡಿದ ಎಸ್.ಎಂ.ಕೃಷ್ಣ, ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದಾರೆ. ಇದಕ್ಕೆ ಪೂರಕ ವಾತಾವರಣ ಇದೆ. ಮೋದಿ ಕಿತ್ತೊಗೆಯುತ್ತೇನೆ, ಮೋದಿ ಅವರು ರೈತರಿಗೆ ಏನೂ ಮಾಡಿಲ್ಲ’ ಎಂಬ ದೇವೇಗೌಡರ ಆರೋಪಕ್ಕೆ ತಿರುಗೇಟು ನೀಡಿದ ಕೃಷ್ಣ, ಈ ಚುನಾವಣೆಯಲ್ಲಿ ಅದೇ ರೈತರು ಉತ್ತರ ಕೊಡುತ್ತಾರೆ’ ಎಂದರು.

ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರ ಮಾಡುವ ಸಂಬಂಧ ಹಾರಿಕೆ ಉತ್ತರ ನೀಡಿದರು.

ಇದೇ ವೇಳೆ ಮಾತನಾಡಿದ ಆರ್‌.ಅಶೋಕ್‌, ಸಮ್ಮಿಶ್ರ ಸರ್ಕಾರ ಗೊಂದಲ‌ದಲ್ಲಿ ಇದೆ. ಹಾಸನ, ತುಮಕೂರು, ಮಂಡ್ಯದಲ್ಲಿ ಕಾಂಗ್ರೆಸ್ ನವರು ಕೆಲಸ ಮಾಡುತ್ತಿಲ್ಲ. ದೇವೇಗೌಡರಿಗೆ ಕುಟುಂಬ ಸದಸ್ಯರು ಬಿಟ್ಟರೆ ಯಾರ ಮೇಲೂ ನಂಬಿಕೆ ಇಲ್ಲ. ಯಾರ ಬೆಂಬಲವೂ ಇಲ್ಲದೆ ಅವರು ಒಂಟಿಯಾಗಿದ್ದಾರೆ ಎಂದು ಗೇಲಿ ಮಾಡಿದರು.

‘ದೇಶದಲ್ಲಿ ಮೋದಿ ಮತ್ತೆ ಪ್ರಧಾನಿ ಆಗೋದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ದೇವೇಗೌಡರು, ಮಮತಾ ಬ್ಯಾನರ್ಜಿ ಸೇರಿ ಯಾರಿಗೂ ಆ ತಾಕತ್ತು ಇಲ್ಲ’ ಎಂದ ಅಶೋಕ್, ‘ರಾಜ್ಯದಲ್ಲಿ ಅಧಿಕಾರಕ್ಕಾಗಿ ಮೇಲ್ಮಟ್ಟದ ನಾಯಕರು ಒಂದಾಗಿದ್ದಾರೆ, ಆದರೆ, ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಂತರಿಕ ಬೇಗುದಿ ಇದ್ದೇ ಇದೆ’ ಎಂದರು.

ಹಿಂದೆ ಸಿನಿಮಾ‌ ನಟರ ಮನೆ ಮೇಲೆ ಐಟಿ ‌ದಾಳಿ‌ ಮಾಡಿದಾಗ ಇದೇ ಕುಮಾರಸ್ವಾಮಿ ಹಣ ಇತ್ತು ದಾಳಿಯಾಗಿದೆ ಎಂದಿದ್ದರು, ಆದರೀಗ ಗುತ್ತಿಗೆದಾರರ ಮನೆ ಮೇಲೆ ದಾಳಿ ನಡೆದರೆ ಸಿಎಂಗೇಕೆ ಈ ಪರಿ ನೋವು ಎಂದು ಪ್ರಶ್ನಿಸಿದರು.

ಮೋದಿ ಮತ್ತೆ ಪ್ರಧಾನಿಯಾಗುವುದಿಲ್ಲ ಎಂಬ ಸಚಿವ ರೇವಣ್ಣ ಭವಿಷ್ಯ ಕುರಿತ ಮಾತಿಗೆ, ಅವರಿಗೆ ಚುನಾವಣೆಯಲ್ಲಿ ನಿಂಬೆಹಣ್ಣು ಚಿಹ್ನೆ ಕೊಡಬೇಕಿತ್ತು. ಜ್ಯೋತಿಷ್ಯದ ಮೇಲೆಯೇ ಎಲ್ಲವೂ ಆಗಲ್ಲ ಎನ್ನುವುದನ್ನು ರೇವಣ್ಣ ಅರ್ಥ ಮಾಡಿಕೊಳ್ಳಬೇಕು. ಇದರ ಮೇಲೆ ರಾಜ್ಯಭಾರ ನಡೆಯಲಿದೆ ಎಂಬುದು ಭ್ರಮೆ. ಅದು ಅವರ ಮಾನಸಿಕ ಸ್ಥಿತಿ ತೋರಲಿದೆ ಎಂದು ಟಾಂಗ್ ನೀಡಿದರು. ಮಂಡ್ಯದಲ್ಲಿ ಜಾತಿ ಜಗಳ ವಿಚಾರವಾಗಿ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು. ಆಯೋಗ ಕ್ರಮ ಕೈಗೊಳ್ಳಬೇಕು ಎಂದು ಅಶೋಕ್ ಒತ್ತಾಯಿಸಿದರು.

ಕೃಷ್ಣ ಪ್ರಚಾರ ಸಂದರ್ಭದಲ್ಲಿ ಅನ್ಯ ಪಕ್ಷಗಳ ಅನೇಕರು, ಬಿಜೆಪಿ ಸೇರ್ಪಡೆಯಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !