ಹಾಸನ: ಧರ್ಮಶಾಲೆ ಸೇವೆಗೆ ಸರ್ಮಪಣೆ

7
ಸಮಾಜ ಸೇವೆ ಮಾಡಲು ನಿರ್ಮಾಲಾನಂದನಾಥ ಸ್ವಾಮೀಜಿ ಸಲಹೆ

ಹಾಸನ: ಧರ್ಮಶಾಲೆ ಸೇವೆಗೆ ಸರ್ಮಪಣೆ

Published:
Updated:
Deccan Herald

ಹಾಸನ : ‘ಮನುಷ್ಯನಿಗೆ ಭಗವಂತ ಅಪರಿಮಿತ ಶಕ್ತಿ ಕೊಟ್ಟಿದ್ದಾನೆ. ಅದನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಸಮಾಜ ಸೇವೆ ಮಾಡಬೇಕು’ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಾಲಾನಂದನಾಥ ಸ್ವಾಮೀಜಿ ಹೇಳಿದರು.

ಹಾಸನ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ ಆವರಣದಲ್ಲಿ ನಿರ್ಮಿಸಿರುವ ಹಾಸನಾಂಬ ಧರ್ಮಶಾಲೆ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

'ಧರ್ಮ ಶಾಲೆ ನಿರ್ಮಾಣಕ್ಕೆ ಕೈ ಜೋಡಿಸಿದ ದಾನಿಗಳನ್ನು ಸ್ಮರಿಸಬೇಕು. ಸೇವೆ ಮಾಡುವ ಜಾಗದಲ್ಲಿ ಹೆಚ್ಚು ಮಾತು ಇರಬಾರದು. ‘ಆಡುವವನು ಮಾಡುವುದಿಲ್ಲ ಮಾಡುವವನು ಆಡುವುದಿಲ್ಲ’ ಎಂಬುದಕ್ಕೆ ಡಾ.ಗುರುರಾಜ್ ಹೆಬ್ಬಾರ್ ಅವರೇ ಉದಾಹರಣೆ. ಬೇರೆಯವರ ಬದುಕಲ್ಲಿ ಬೆಳಕು ಹತ್ತಿಸಿದರೆ ನಮ್ಮ ಮನೆ ಬೆಳಗುತ್ತದೆ. ಮನುಷ್ಯನಿಗೆ ಮುಖ್ಯವಾಗಿ ಬೇಕಿರುವುದು ಆರೋಗ್ಯ' ಎಂದು ನುಡಿದರು.

ಶಾಸಕ ಪ್ರೀತಂ ಜೆ.ಗೌಡ ಮಾತನಾಡಿ, ಬಡ ರೋಗಿಗಳೊಂದಿಗೆ ಬರುವವರ ವಾಸ್ತವ್ಯಕ್ಕಾಗಿ ಹಿರಿಯ ನಾಗರಿಕರು ಈ ಕಟ್ಟಡ ನಿರ್ಮಾಣ ಮಾಡಿರುವುದು ಪುಣ್ಯದ ಕೆಲಸವಾಗಿದೆ. ಇದು ಯುವಜನರಿಗೆ ಪ್ರೇರಣೆ ನೀಡಿದೆ ಎಂದು ಹೇಳಿದರು.

ಹಾಸನಾಂಬ ಧರ್ಮಛತ್ರ ಸಮಿತಿ ಅಧ್ಯಕ್ಷ ಡಾ.ಗುರುರಾಜ್ ಹೆಬ್ಬಾರ್ ಮಾತನಾಡಿ, ದೇಹಕ್ಕೆ ವಯಸ್ಸಾದರೂ ಮನಸ್ಸನ್ನು ಭಗವಂತನಲ್ಲಿಟ್ಟು ಸದಾ ಲವಲವಿಕೆಯಿಂದ ಕೆಲಸಕ್ಕೆ ಮುಂದಾಗಬೇಕು. ಒಳ್ಳೆಯ ಕೆಲಸಕ್ಕೆ ನಾಲ್ಕು ಜನರೊಂದಿಗೆ ಚರ್ಚಿಸಿ ಮುನ್ನೆಡೆಯಬೇಕು, ಆಗ ಎಲ್ಲರ ಸಹಕಾರ ತಾನಾಗಿಯೇ ಸಿಗುತ್ತದೆ ಎಂದರು.

ಹಿಮ್ಸ್‌ ನಿರ್ದೇಶಕ ಡಾ. ಬಿ.ಸಿ.ರವಿಕುಮಾರ್ ಮಾತನಾಡಿ, ಸಚಿವ ಎಚ್.ಡಿ.ರೇವಣ್ಣ ಅವರ ಕಾಳಜಿಯಿಂದ ಜಿಲ್ಲಾ ಆಸ್ಪತ್ರೆಯನ್ನು 2006 ರಲ್ಲಿ 350 ಹಾಸಿಗೆಯಿಂದ 850 ಹಾಸಿಗೆಗಳಿಗೆ ಏರಿಸಲಾಯಿತು. ನಿತ್ಯ 1500-1700 ಕ್ಕೂ ಹೆಚ್ಚು ಜನರಿಗೆ ಆರೋಗ್ಯ ಸೇವೆ ಒದಗಿಸಲಾಗುತ್ತಿದೆ. ನಗರದ ಗಂಧದ ಕೋಠಿಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಸರ್ಕಾರದಿಂದ ಅನುಮೋದನೆ ದೊರೆತಿದೆ. ಅಲ್ಲದೆ ₹18 ಕೋಟಿ ವೆಚ್ಚದಲ್ಲಿ ರೇಡಿಯಾಲಜಿ ಕೇಂದ್ರಕ್ಕೆ ಅನುಮೋದನೆ ದೊರೆತಿದೆ. ಪಿ.ಜಿ., ನರ್ಸಿಂಗ್ ವಿದ್ಯಾರ್ಥಿಗಳಿಗೆ ವಸತಿ ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.

ಆದಿಚುಂಚನಗಿರಿ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಮುಖಂಡ ಎಚ್.ಪಿ.ಮೋಹನ್, ತಹಶೀಲ್ದಾರ್ ಶಿವಶಂಕರಪ್ಪ, ಉಪ ವಿಭಾಗಾಧಿಕಾರಿ ಎಚ್.ಎಲ್. ನಾಗರಾಜ್, ಡಾ.ಆರ್.ಎನ್.ರಂಗಲಕ್ಷ್ಮಿ, ಆರ್.ಮಹಾವೀರ್ ಚಂದ್ ಬನ್ಸಾಲಿ, ಅನನ್ಯ ಟ್ರಸ್ಟ್‌ಅಧ್ಯಕ್ಷೆ ಕೆ.ಟಿ.ಜಯಶ್ರೀ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !