ಬುಧವಾರ, ಅಕ್ಟೋಬರ್ 23, 2019
23 °C
ನೀರಿನ ಹರಿವು ಹೆಚ್ಚಳ, ಸ್ಥಳೀಯರು, ಮೃತ ಸಂಬಂಧಿಕರ ಪ್ರತಿಭಟನೆ

ದಿನ ಕಳೆದರೂ ಸಿಗದ ಮೃತದೇಹ

Published:
Updated:

ಹಾಸನ: ಆಲೂರು ಬಳಿಯ ಯಗಚಿ ನದಿಯಲ್ಲಿ ಈಜಲು ಹೋಗಿ ಮುಳುಗಿರುವ ಮೂವರು ಯುವಕರ ಮೃತದೇಹ ದಿನ ಕಳೆದರೂ ಪತ್ತೆಯಾಗಿಲ್ಲ. 

ಬಾಳಿ ಬದುಕಬೇಕಾದ ಯುವಕರು ಜೀವ ಕಳೆದುಕೊಂಡಿರುವುದು ಕುಟುಂಬ ಸದಸ್ಯರನ್ನು ದುಃಖದ ಕಡಲಲ್ಲಿ ಮುಳುಗಿಸಿದೆ.

ಮಳೆನಾಡು ಭಾಗದಲ್ಲಿ ಜೋರು ಮಳೆಯಾಗಿದ್ದರಿಂದ ಬುಧವಾರ ನದಿಯಲ್ಲಿ ನೀರಿನ ಹರಿವು ಹೆಚ್ಚಾದ ಕಾರಣ ಅಗ್ನಿಶಾಮಕ ಸಿಬ್ಬಂದಿ ಹಾಗೂ ಈಜುಗಾರರು ನದಿಗೆ ಇಳಿದು ಶೋಧ ಕಾರ್ಯ ನಡೆಸಲು ಸಾಧ್ಯವಾಗುತ್ತಿಲ್ಲ.

ಮೃತದೇಹ ಹುಡುಕಲು ಈವರೆಗೂ ಸಾಧ್ಯವಾಗದೇ ಇರುವುದಕ್ಕೆ ತೀವ್ರ ಆಕ್ರೋಶ ಹೊರ ಹಾಕಿರುವ ಸ್ಥಳೀಯರು ಹಾಗೂ ಮೃತರ ಸಂಬಂಧಿಕರು ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳ ವಿರುದ್ಧ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು.

ಆಲೂರು ತಾಲ್ಲೂಕಿನ ಹುಣಸವಳ್ಳಿ ಗ್ರಾಮದ ರತನ್ ಮತ್ತು ದೊಡ್ಡ ಕಣಗಾಲು ಗ್ರಾಮದ ಭೀಮರಾಜ್ ಹಾಗೂ ಮನು ಎಂಬ ಯುವಕರು ಈಜಲು ಹೋಗಿ ಮೃತಪಟ್ಟಿದ್ದರು. ಸ್ಥಳೀಯರ ಸಮಯ ಪ್ರಜ್ಞೆಯಿಂದಾಗಿ ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಹುಣಸವಳ್ಳಿ ಗ್ರಾಮದ ಸಂಜಯ್, ಧನು ಎಂಬುವರನ್ನು ರಕ್ಷಿಸಲಾಗಿತ್ತು. ಧನು ಇನ್ನೂ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ದುರಂತ ನಂತರ ಪೊಲೀಸ್‌ ವರಿಷ್ಠಾಧಿಕಾರಿ ರಾಮ್ ನಿವಾಸ್ ಸೆಪಟ್ ಹೊರತು ಪಡಿಸಿದರೆ ಸ್ಥಳೀಯ ಶಾಸಕ ಎಚ್.ಕೆ.ಕುಮಾರಸ್ವಾಮಿ ಅವರಾಗಲೀ, ಜಿಲ್ಲಾಧಿಕಾರಿಯಾಗಲೀ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಹಾಗೂ ಮೃತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದರು.

‘ಪ್ರಭಾವಿಗಳು ಅಥವಾ ಅವರ ಕಡೆಯವರು ನೀರು ಪಾಲಾಗಿದ್ದರೆ ಜಿಲ್ಲಾಡಳಿತ ಹಾಗೂ ಜನಪ್ರತಿನಿಧಿಗಳು ಬರುತ್ತಿದ್ದರು. ಮೃತಪಟ್ಟವರು ಬಡವರು ಆಗಿರುವ ಕಾರಣ ಇತ್ತ ಮುಖ ಹಾಕಿಲ್ಲ’ ಎಂದು ಪ್ರತಿಭಟನೆ ನಡೆಸಿದರು.

‘ಅಗ್ನಿಶಾಮಕ ಸಿಬ್ಬಂದಿ ನೀರಿಗೇ ಇಳಿದಿಲ್ಲ. ಈ ವಿಚಾರದಲ್ಲಿ ರಾಜಕೀಯ ಅಥವಾ ಪಕ್ಷಪಾತ ಮಾಡದೆ, ಶೀಘ್ರವೇ ಮೃತದೇಹ ಹುಡುಕಿಕೊಡಬೇಕು. ಹುಣಸವಳ್ಳಿ ಬಳಿಯ ಯಗಚಿ ನದಿಯ ದಡದಲ್ಲಿ ಅಪಾಯದ ಸ್ಥಳ ಎಂಬ ನಾಮಫಲಕ ಹಾಕುವಂತೆ’ ಸ್ಥಳೀಯರಾದ ಹರೀಶ್‌, ಶಿವಸ್ವಾಮಿ ಮನವಿ ಮಾಡಿದರು.

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯಿಸಿ (+)