ಶನಿವಾರ, ಡಿಸೆಂಬರ್ 14, 2019
24 °C
ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎ.ಪರಮೇಶ್ ನಿರ್ದೇಶನ

ಮಂಗನ ಕಾಯಿಲೆ: ಜನರಲ್ಲಿ ಅರಿವು ಮೂಡಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಎಲ್ಲ ತಾಲ್ಲೂಕು, ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳು ಜಂಟಿಯಾಗಿ ಮಂಗನ ಕಾಯಿಲೆ ಕುರಿತು ಪ್ರಚಾರ ಹಾಗೂ ಸಾರ್ವಜನಿಕರಿಗೆ ಅರಿವು ಮೂಡಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಎ. ಪರಮೇಶ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮಂಗನ ಕಾಯಿಲೆ ತಡೆಗಟ್ಟುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆ ವಿವಿಧ ಇಲಾಖೆಗಳ ಸಹಕಾರದೊಂದಿಗೆ ಶಾಲೆ, ಅಂಗನವಾಡಿ, ಸ್ತ್ರೀಶಕ್ತಿ ಸಂಘಗಳಲ್ಲಿ ಗ್ರಾಮ ಆರೋಗ್ಯ ಪೌಷ್ಟಿಕ ಸಭೆಗಳಲ್ಲಿ ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳನ್ನು ನಡೆಸಿ ಮಂಗನ ಕಾಯಿಲೆ ಬಗ್ಗೆ ಅರಿವು ಮೂಡಿಸುವಂತೆ ಸೂಚಿಸಿದರು.

ಮಂಗಗಳು ಸತ್ತರೆ ಕೂಡಲೇ ಗ್ರಾಮ ಪಂಚಾಯಿತಿಗೆ, ಆರೋಗ್ಯಾಧಿಕಾರಿಗಳಿಗೆ ಅಥವಾ ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡುವಂತೆ ಜನಸಾಮಾನ್ಯರಿಗೆ ತಿಳಿಸುವಂತೆ ಹಾಗೂ ಕಾಡಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ಪ್ರತಿ ಮನೆಗೂ ಉಚಿತ ಡಿಎಂಪಿ ತೈಲ ವಿತರಿಸುವಂತೆ ಅಧಿಕಾರಿಗಳಿಗೆ ಹೇಳಿದರು.

ಕಾಡಿಗೆ ತೆರಳುವ ಜನರಿಗೆ ಕಡ್ಡಾಯವಾಗಿ ಡಿಎಂಪಿ ತೈಲ, ಉಣ್ಣೆ ನಿರೋಧಕವನ್ನು ಬಳಸುವಂತೆ ಹಾಗೂ ಕಾಡಿಗೆ ಹೋಗಿ ಬಂದ ಜಾನುವಾರುಗಳ ಮೈತೊಳೆದು ಉಣ್ಣೆ ನಿರೋಧಕಗಳನ್ನು ಸಿಂಪಡಿಸುವಂತೆ ಮಾಹಿತಿ ತಿಳಿಸಲು ಅರಣ್ಯ ಇಲಾಖಾಧಿಕಾರಿಗಳಿಗೆ ಪರಮೇಶ್ ಹೇಳಿದರು.

ಸಾವನ್ನಪ್ಪಿದ ಮಂಗಗಳ ಕಳೇಬರವನ್ನು ಮರಣೋತ್ತರ ಪರೀಕ್ಷೆ ಮಾಡಿ, ಶಿವಮೊಗ್ಗದ ವಿಡಿಎಲ್ ಲ್ಯಾಬ್‍ಗೆ ಮಾದರಿ ಕಳುಹಿಸುವಂತೆ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಟ್ರಕ್ಕಿಂಗ್ ತೆರಳದಂತೆ ಹಾಗೂ ಕಾಡಿಗೆ ಹೋದರೆ ಉಣ್ಣೆ ನಿರೋಧಕಗಳನ್ನು ಬಳಸುವ ಹಾಗೂ ಲಸಿಕೆಗಳ ಬಗ್ಗೆ ಮಾಹಿತಿ ನೀಡುವ ಬೋರ್ಡ್‍ಗಳನ್ನು ಪ್ರವಾಸಿ ತಾಣಗಳಲ್ಲಿ ಹಾಕುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಆರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸತೀಶ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿಕಾರಿ ಪಾಪಬೋವಿ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಶಿವಲಿಂಗಪ್ಪ ಎಸ್ ಕುಂಬಾರ್, ಕುಟುಂಬ ಕಲ್ಯಾಣಾಧಿಕಾರಿ ಹೇಮಲತಾ, ಮಲೇರಿಯಾ ರೋಗ ನಿಯಂತ್ರಣಾಧಿಕಾರಿ ರಾಜಗೊಪಾಲ್ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ್ರತಿಕ್ರಿಯಿಸಿ (+)