ಬುಧವಾರ, ಜೂನ್ 16, 2021
27 °C
ಕೋವಿಡ್ ನಿರ್ವಹಣೆ ಪ್ರಗತಿ ಪರಿಶೀಲಿಸಿದ ಉಸ್ತುವಾರಿ ಸಚಿವ ಗೋಪಾಲಯ್ಯ ಸೂಚನೆ

ಹಾಸನದ ಎಲ್ಲ ತಾಲ್ಲೂಕಿಗೆ ಸಾವಿರ ಔಷಧಿ ಕಿಟ್ ವಿತರಿಸಿ: ಸಚಿವ ಗೋಪಾಲಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಅರಕಲಗೂಡು: ಜಿಲ್ಲೆಯ ಎಲ್ಲ ತಾಲ್ಲೂಕುಗಳಿಗೆ ತಲಾ ಒಂದು ಸಾವಿರ ಔಷಧಿ ಕಿಟ್ ವಿತರಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸತೀಶ್ ಅವರಿಗೆ ಸೂಚನೆ ನೀಡಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ಭಾನುವಾರ ತಾಲ್ಲೂಕು ಮಟ್ಟದ ಕೋವಿಡ್ ಪ್ರಗತಿ ಪರಿಶಿಲನಾ ಸಭೆ ನಡೆಸಿದ ಅವರು, ಸೋಂಕು ಪತ್ತೆಯಾದ ಕೂಡಲೇ ಅಗತ್ಯ ಚಿಕಿತ್ಸೆಗೆ ಕ್ರಮ ಕೈಗೊಂಡರೆ ಸೋಂಕಿನ ಪ್ರಮಾಣ ತಗ್ಗಿಸಲು ಸಾಧ್ಯ. ಸೋಂಕು ದೃಢಪಟ್ಟ ಕೂಡಲೇ ಅವರಿಗೆ ಔಷಧಿಗಳ ಕಿಟ್ ನೀಡಿ ಮಾಹಿತಿ ನೀಡಬೇಕು. ಈ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕು ಎಂದು ಸೂಚನೆ ನೀಡಿದರು.

ಕೊಣನೂರು ಸಮುದಾಯ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ರೂಪಿಸಲು ಅಗತ್ಯ ಕ್ರಮ ಕೈಗೊಳ್ಳಲು ಹಾಗೂ ಆಮ್ಲ ಜನಕದ ಸಿಲಿಂಡರ್ ತ್ವರಿತವಾಗಿ ಒದಗಿಸಲು ಕ್ರಮ ಕೈಗೊ ಳ್ಳುವಂತೆ ಡಿಎಚ್ಒಗೆ ಸೂಚಿಸಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಸವಲತ್ತು ಒದಗಿಸಲು ಕ್ರಮ ಕೈಗೊಳ್ಳುವ ಜತೆಗೆ ಆಮ್ಲಜನಕದ ಘಟಕದ ನಿರ್ಮಾಣಕ್ಕೆ ಮುಂದಿನ ಕಂತಿನಲ್ಲಿ ಅವಕಾಶ ಒದಗಿಸುವುದಾಗಿ ತಿಳಿಸಿದರು. ಕೊಣನೂರು ಆಸ್ಪತ್ರೆಯಲ್ಲಿ ಕೆಟ್ಟಿರುವ ಆಂಬುಲೆನ್ಸ್ ಬದಲಿಗೆ ಹೊಸದನ್ನು ನೀಡುವವರೆಗೆ ತಾತ್ಕಾಲಿಕ ವ್ಯವಸ್ಥೆ ಕೈಗೊಳ್ಳಲು ಸೂಚಿಸಿದರು.

ಶಾಸಕ ಎ.ಟಿ.ರಾಮಸ್ವಾಮಿ ಮಾತನಾಡಿ, ತಾಲ್ಲೂಕಿನಲ್ಲಿ ಕೋವಿಡ್ ನಿರ್ವಹಣೆಗೆ ಕೈಗೊಂಡಿರುವ ಕ್ರಮಗಳ ಕುರಿತು ವಿವರಿಸಿದರು. ಪಟ್ಟಣದ ಸರ್ಕಾರಿ ಆಸ್ಪತ್ರೆ 100 ಹಾಸಿಗೆಗಳ ಆಸ್ಪತ್ರೆಯಾಗಿದ್ದು, ಇಲ್ಲಿ 70 ಹಾಸಿಗೆಗಳನ್ನು ಕೋವಿಡ್ ಪೀಡಿತರಿಗೆ ಮೀಸಲಿರಿಸಿದ್ದರೂ ಸಾಕಾಗುತ್ತಿಲ್ಲ. ಕನಿಷ್ಠ 150 ಹಾಸಿಗೆಗೆ ವಿಸ್ತರಿಸಲು ಕ್ರಮ ಕೈಗೊಳ್ಳಬೇಕು. ಪ್ರಯೋಗಾಲಯವನ್ನು ಉನ್ನತ ದರ್ಜೆಗೆ ಏರಿಸಿ ಕೋವಿಡ್‌ ಪರೀಕ್ಷೆಗೆ ವ್ಯವಸ್ಥೆ ಮಾಡಬೇಕು. ಆಮ್ಲ ಜನಕದ ಜಂಬೊ ಸಿಲಿಂಡರ್ ಕೊರತೆಯಾಗದಂತೆ ಉದ್ಯಮಿಗಳಿಂದ 60 ಸಿಲಿಂಡರ್ ಸಂಗ್ರಹಿಸಿ ಒದಗಿಸಲಾಗಿದೆ. ಆಮ್ಲಜನಕದ ಘಟಕ ತರೆಯಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಕೆಂದ್ರ ಸರ್ಕಾರ ನೀಡಿರುವ, ಬಳಕೆ ಆಗದ ವೆಂಟಿಲೇಟರ್‌ಗಳನ್ನು ಕೊರತೆ ಇರುವ ತಾಲ್ಲೂಕು ಕೇಂದ್ರಗಳಲ್ಲಿ ಬಳಕೆ ಮಾಡಲು ನೀಡಬೇಕು ಎಂದರು.

ಎಲ್ಲ ತಾಲ್ಲೂಕು ಕೇಂದ್ರಗಳ ಪ್ರಯೋಗಾಲಯವನ್ನು ಉನ್ನತೀಕ ರಣಗೊಳಿಸಿ ಪರೀಕ್ಷಾ ಕಾರ್ಯ ನಡೆಸಲು ಇಲಾಖೆಯಿಂದ ಸೂಚನೆ ಬಂದಿದ್ದು, ಒಂದೆರಡು ದಿನಗಳಲ್ಲಿ ಇದು ಜಾರಿಯಾಗಲಿದೆ ಎಂದು ಡಿಎಚ್ಒ ಡಾ.ಸತೀಶ್ ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಎಂ.ವಿ ಗೋಪಾಲ ಸ್ವಾಮಿ ಮಾತನಾಡಿದರು. ಜಿಪಂ ಸಿಇಒ ಬಿ.ಎ.ಪರಮೇಶ್, ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಮ್, ಎಸ್‌ಪಿ ನಂದಿನಿ, ಸಕಲೇಶಪುರ ಉಪ ವಿಭಾಗಾಧಿಕಾರಿ ಗಿರೀಶ್ ನಂದನ್, ತಹಶೀಲ್ದಾರ್ ವೈ.ಎಂ.ರೇಣುಕುಮಾರ್ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸಚಿವರು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ತರೆಳಿ ಪರಿಶೀಲಿಸಿದರು.

ಸರಗೂರು ಪಂಚಾಯಿತಿ ವ್ಯಾಪ್ತಿಯ ಸೋಂಕಿತರೊಬ್ಬರು ಕೋವಿಡ್ ಕೇರ್ ಸೆಂಟರ್ ಗೆ ಬರಲು ಒಪ್ಪುತ್ತಿಲ್ಲ. ಎಲ್ಲ ಪ್ರಯತ್ನ ನಡಸಲಾಯಿತು. ಸೋಂಕಿನಿಂದ ಸತ್ತರೆ ಅದಕ್ಕೆ ನಾನೇ ಹೊಣೆ ಎಂದು ಪತ್ರ ಬರೆದು ಕೊಟ್ಟಿದ್ದಾರೆ ಎಂದು ತಹಶೀಲ್ದಾರ್ ರೇಣುಕುಮಾರ್ ಅಸಹಾಯಕತೆ ತೋಡಿಕೊಂಡರು.

ಕೋವಿಡ್ ಪೀಡಿತನಿಂದ ಕುಟುಂಬ ಹಾಗೂ ಗ್ರಾಮಸ್ಥರಿಗೆ ಸೋಂಕು ಹರಡುವ ಅಪಾಯವಿದೆ. ಬೇರೆಯವರಿಗೆ ರೋಗ ಹರಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಪೊಲೀಸರ ನೆರವಿನಿಂದ ಕೇರ್ ಸೆಂಟರ್‌ ಸೇರಿಸುವಂತೆ ತಾಕೀತು ಮಾಡಿದರು.

ಕೋವಿಡ್ ಪೀಡಿತರಿಗೆ ವಿತರಿಸುವ ಔಷಧಿ ಕಿಟ್‌ನಲ್ಲಿ ಇರಬೇಕಾದ ಮಾತ್ರೆಗಳ ಬಗ್ಗೆಯೂ ಸಚಿವರು ಪರಿಶೀಲನೆ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.