ಗುರುವಾರ , ನವೆಂಬರ್ 14, 2019
26 °C
ಎತ್ತಿನಹೊಳೆ ಯೋಜನೆಗೆ ಭೂಮಿ ನೀಡಿದ ರೈತರಿಗೆ ಪ್ರಜ್ವಲ್‌ ರೇವಣ್ಣ ಭರವಸೆ

ರೈತರಿಗೆ 15 ದಿನದಲ್ಲಿ ಪರಿಹಾರ ವಿತರಣೆ

Published:
Updated:
Prajavani

ಬೇಲೂರು: ‘ಎತ್ತಿನಹೊಳೆ ಯೋಜನೆಯಿಂದ ಭೂಮಿ ಕಳೆದುಕೊಳ್ಳುವ ಹಾಸನ ಜಿಲ್ಲೆಯ ರೈತರಿಗೆ ಸರ್ಕಾರ ₹ 441 ಕೋಟಿ ಮೀಸಲಿಟ್ಟಿದ್ದು ಬೇಲೂರು ತಾಲ್ಲೂಕಿನ ರೈತರಿಗೆ ಇನ್ನೂ 15 ದಿನದಲ್ಲಿ ಒಂದೇ ಹಂತದಲ್ಲಿ ಚೆಕ್‌ ಮೂಲಕ ಹಣ ಪಾವತಿಸಲಾಗುವುದು’ ಎಂದು ಸಂಸದ ಪ್ರಜ್ವಲ್‌ ರೇವಣ್ಣ ತಿಳಿಸಿದರು.

ಎತ್ತಿನಹೊಳೆ ಯೋಜನೆಯಿಂದ ಭೂಮಿ ಕಳೆದು ಕೊಳ್ಳುವ ರೈತರಿಗೆ ಪುನರ್‌ ವಸತಿ ಮತ್ತು ಪುನರ್‌ ವ್ಯವಸ್ಥೆ ಕಲ್ಪಿಸುವ ಸಂಬಂಧ ತಾಲ್ಲೂಕಿನ ಹಗರೆಯಲ್ಲಿ ಗುರುವಾರ ಏರ್ಪಡಿಸಿದ್ದ ಸಭೆಯಲ್ಲಿ ಅವರು ಮಾತನಾಡಿದರು.

‘ಬೇಲೂರು ತಾಲ್ಲೂಕಿನಲ್ಲಿ ಎತ್ತಿನಹೊಳೆ ಯೋಜನೆಗೆ ಕೆಲವು ರೈತರ ಜಮೀನುಗಳು ಸೇರ್ಪಡೆಯಾಗಿಲ್ಲ ಎಂಬ ದೂರುಗಳಿವೆ. ಎರಡು ದಿನಗಳ ಬಳಿಕ ಎಂಜಿನಿಯರ್‌ಗಳು ಸ್ಥಳಕ್ಕೆ ಭೇಟಿ ನೀಡಿ ಸರ್ವೆ ನಡೆಸಿ ಕೈಬಿಟ್ಟ ಜಮೀನುಗಳನ್ನು ಸೇರ್ಪಡೆ ಮಾಡುವಂತೆ ಸೂಚಿಸ ಲಾಗಿದೆ. ಯಾವುದೇ ಕಾರಣಕ್ಕೂ ಕಡಿಮೆ ಪರಿಹಾರ ನೀಡಲು ಅವಕಾಶ ನೀಡುವುದಿಲ್ಲ ’ ಎಂದು ಹೇಳಿದರು.

‘ಎತ್ತಿನಹೊಳೆ ಯೋಜನೆಯಿಂದ ನಾಲೆ ಹಾದು ಹೋಗುವ ಅಕ್ಕಪಕ್ಕದ ಜಮೀನುಗಳಿಗೆ ಮತ್ತು ಕೆರೆಗಳಿಗೆ ನೀರು ತುಂಬಿಸಲು ಕ್ರಮಕೈಗೊಳ್ಳಬೇಕು. ಈ ಯೋಜನೆಯಿಂದ ಅನುಕೂಲದ ಜೊತೆಗೆ ಅನಾನೂಕೂಲವೂ ಆಗುತ್ತಿದೆ. ಈ ಯೋಜನೆಯ ಕಾಮಗಾರಿಯಿಂದ 31 ಗ್ರಾಮಗಳ ರಸ್ತೆಗಳು ಹಾಳಾಗಿವೆ. ಈ ರಸ್ತೆಗಳನ್ನು ಅಭಿವೃದ್ಧಿ ಪಡಿಸಲು ಕ್ರಮಕೈಗೊಳ್ಳಬೇಕು. ಗುಂಡಿಬಿದ್ದ ರಸ್ತೆಗಳಿಂದ ದುರಂತ ಸಂಭವಿಸಿದರೆ, ಎಲ್ಲರೂ ಹೊಣೆಗಾರರಾಗ ಬೇಕಾಗುತ್ತದೆ ಎಂದು ಎಚ್ಚರಿಸಿದರು.

ಉಪ ವಿಭಾಗಾಧಿಕಾರಿ ಗಿರೀಶ್‌ ‘2014ರ ಭೂಸ್ವಾಧೀನ ಕಾಯ್ದೆಯಂತೆ ಉಪ ನೋಂದಣಾಧಿಕಾರಿಗಳಿಂದ ಜಮೀನುಗಳ ದರಪಟ್ಟಿ ಪಡೆದು ಎರಡುಪಟ್ಟು ಬೆಲೆ ನೀಡಲಾಗುವುದು. ಇದರ ಜೊತೆಗೆ ಇನ್ನಿತರ ಪರಿಹಾರಗಳು ದೊರೆಯಲಿವೆ. ಪರಿಹಾರ ಕಡಿಮೆಯಾ ದರೆ ನ್ಯಾಯಾಲಯಕ್ಕೂ ಹೋಗುವ ಅವಕಾಶವಿದೆ’ ಎಂದರು.

ಎತ್ತಿನಹೊಳೆ ಯೋಜನೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ರಮೇಶ್‌ ‘ಈಗಾಗಲೇ ಜಮೀನು ಬಿಟ್ಟು ಕೊಡಲು ಒಪ್ಪಂದ ಮಾಡಿಕೊಂಡಿರುವ ರೈತರು ಆತಂಕ ಪಡುವ ಅಗತ್ಯವಿಲ್ಲ. ಅವರ ಜಮೀನಿನಲ್ಲಿರುವ ತೆಂಗು, ಅಡಿಕೆ ಮತ್ತು ಇನ್ನಿತರ ಮರಗಳು, ಗಿಡಗಳು, ಕೊಳವೆ ಬಾವಿ ಹಾಗೂ ಇನ್ನಿತರ ವಿವರಗಳ ಬಗ್ಗೆ ಪಂಚನಾಮೆ ಮಾಡಲಾಗಿದೆ. ಅದರಂತೆ ಪರಿಹಾರ ವಿತರಿಸಲು ಕ್ರಮಕೈಗೊಳ್ಳಲಾಗುವುದು. ತಾಲ್ಲೂಕಿನ ರೈತರಿಗೆ ವಿತರಿಸಲು ಈಗಾಗಲೇ ಸರ್ಕಾರ ₹ 83.62 ಲಕ್ಷ ಹಣ ಬಿಡುಗಡೆ ಮಾಡಿದೆ’ ಎಂದು ತಿಳಿಸಿದರು.

ರೈತ ಮುಖಂಡ ರಂಗಸ್ವಾಮಿ ‘ತೋಟಗಾರಿಕೆ ಹಾಗೂ ಇನ್ನಿತರ ಬೆಳೆಗಳ ಬಗ್ಗೆ ಸರ್ವೆ ನಡೆದಿಲ್ಲ. ರೈತರಿಂದ ಒಪ್ಪಂದ ಮಾಡಿಕೊಂಡು ಏಕಾಏಕಿ ಕಾಮಗಾರಿ ಆರಂಭಿಸಿದ್ದಾರೆ. ಪರಿಹಾರ ವಿತರಿಸಿಲ್ಲ. ಕಾನೂನು ಪ್ರಕಾರ ಕೆಲಸ ಮಾಡುತ್ತಿಲ್ಲ’ ಎಂದು ಆರೋಪಿಸಿದರು.

ರೈತ ಪುಟ್ಟರಾಜು ‘ರೈತರಿಂದ ಒಪ್ಪಂದ ಮಾಡಿಕೊಂಡು 1.5 ವರ್ಷ ಕಳೆದರೂ ಪರಿಹಾರ ನೀಡಿಲ್ಲ. ಬೇಕಾಬಿಟ್ಟಿ ಪರಿಹಾರ ನೀಡಿದರೆ, ಏನು ಮಾಡಬೇಕು’ ಎಂದು ಪ್ರಶ್ನಿಸಿದರು.

ಹಗರೆಯ ದಿಲೀಪ್‌ ‘ಎತ್ತಿನಹೊಳೆ ಯೋಜನೆಯಿಂದ ತಾಲ್ಲೂಕಿಗೆ 0.129 ಟಿಎಂಸಿ ನೀರು ನಿಗಧಿ ಪಡಿಸಲಾಗಿದೆ. ಆದರೆ ಯಾವ ಕೆರೆಗೆ ನೀರು ಹರಿಸುತ್ತಾರೆಂಬ ಬಗ್ಗೆ ಇಲ್ಲಿಯವರೆಗೆ ಮಾಹಿತಿ ಇಲ್ಲ. ಸಕಲೇಶಪುರದಲ್ಲಿ ನೇರ ಖರೀದಿಗೆ ನೀಡುತ್ತಿರು ಹಣವನ್ನೇ ಇಲ್ಲಿನ ರೈತರಿಗೂ ನೀಡಬೇಕು. ಮನೆಗಳಿಗೆ ಇಂದಿನ ಎಸ್‌ಆರ್‌ ರೇಟ್‌ನಂತೆ ಹಣ ನೀಡಬೇಕು. ಬಂಡೆ ಸಿಡಿಸಲು ಬಳಸಿರುವ ಡೈನಾಮೇಟ್‌ಗಳಿಂದ ಮನೆಗಳಿಗೆ ಹಾನಿಯಾಗಿದ್ದು ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು’ ಒತ್ತಾಯಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತಾ ರಾಜಾರಾಂ, ತಹಶೀಲ್ದಾರ್‌ ಎನ್‌.ವಿ.ನಟೇಶ್‌, ತಾ.ಪಂ.ಸದಸ್ಯೆ ಸಂಗೀತಾ, ಗ್ರಾ.ಪಂ. ಅಧ್ಯಕ್ಷೆ ಲಲಿತಾ, ಎಂಜಿನಿಯರ್‌ಗಳಾದ ಶರ್ಮಾ, ಪೀತಾಂಬರ ಸ್ವಾಮಿ, ಜೆಡಿಎಸ್‌ ಮುಖಂಡ ಬಿ.ಸಿ.ಮಂಜುನಾಥ್‌ ಇದ್ದರು.

ಪ್ರತಿಕ್ರಿಯಿಸಿ (+)