ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧರ್ಮ ಉಳಿಯಲು ಪ್ರಚಾರಕರು ಅಗತ್ಯ

ಜಿಲ್ಲಾ ಅರ್ಚಕರ ಒಕ್ಕೂಟದ ಸಮಾವೇಶದಲ್ಲಿ ಪ್ರೀತಂ ಗೌಡ
Last Updated 16 ಫೆಬ್ರುವರಿ 2023, 4:24 IST
ಅಕ್ಷರ ಗಾತ್ರ

ಹಾಸನ: ಹಿಂದೂ ಧರ್ಮ ಉಳಿಯಬೇಕೆಂದರೆ ಧರ್ಮ ಪ್ರಚಾರಕರು ಮತ್ತು ಧರ್ಮ ವಿಚಾರಕರು ಅಗತ್ಯ. ಧರ್ಮದ ವಿರುದ್ಧ ಅನೇಕ ಭಾರಿ ಅಕ್ರಮಣ ನಡೆದರೂ, ಇಂದಿಗೂ ನಮ್ಮ ಧರ್ಮ ಉಳಿದಿದೆ ಎಂದರೆ ಶ್ರದ್ಧೆ, ಭಕ್ತಿ, ನಂಬಿಕೆಯಿಂದ ನೆರವೇರಿಸುವ ಕಾರ್ಯದಿಂದ ಎಂದು ಶಾಸಕ ಪ್ರೀತಂ ಜೆ. ಗೌಡ ಅಭಿಪ್ರಾಯಪಟ್ಟರು.

ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಹಾಸನ ಜಿಲ್ಲಾ ಧಾರ್ಮಿಕ ದತ್ತಿ ಅರ್ಚಕರ ಅಭಿವೃದ್ಧಿ ಒಕ್ಕೂಟದ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮುಜರಾಯಿ ದೇವಾಲಯಗಳ ಅರ್ಚಕರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಬಹುತೇಕ ಅರ್ಚಕರು ಸಮಸ್ಯೆಯಲ್ಲಿದ್ದಾರೆ. ಅವರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಅರ್ಚಕರು ನನಗೆ ನೀಡಿರುವ ಸಮಸ್ಯೆಗಳನ್ನು ನನ್ನ ಪತ್ರದಲ್ಲಿ ಉಲ್ಲೇಖಿಸಿ, ಮುಖ್ಯಮಂತ್ರಿಗೆ ವೈಯಕ್ತಿವಾಗಿ ತಲುಪಿಸಿ ಪರಿಹಾರ ಕಂಡುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ’ ಎಂದರು.

ಯಾರು ಧರ್ಮವನ್ನು ಉಳಿಸುತ್ತಾರೋ ಅವರನ್ನು ಬೆಂಬಲಿಸುವುದು ಅಗತ್ಯವಾಗಿದೆ. ಧರ್ಮವನ್ನು ಉಳಿಸುವ ವ್ಯಕ್ತಿಯನ್ನು ರಾಜಕೀಯದ ಹೊರತಾಗಿಯು ಬೆಂಬಲಿಸಬೇಕು. ಪ್ರಸ್ತುತ ದಿನಗಳಲ್ಲಿ ಭಕ್ತಾದಿಗಳು ಬಹುಸಂಖ್ಯಾತರಾಗಿದ್ದಾರೆ. ಭಕ್ತರು ಅಲ್ಪಸಂಖ್ಯಾತ ಆಗುವ ಮೊದಲೇ ನಾವು ಧರ್ಮ, ದೇಶ, ರಾಷ್ಟೀಯತೆಯನ್ನು ಕಾಪಾಡುವ ನಾಯಕರಾದ ನರೇಂದ್ರ ಮೋದಿ, ಬಿ.ಎಸ್‌. ಯಡಿಯೂರಪ್ಪ ಅವರನ್ನು ಬೆಂಬಲಿಸಬೇಕಿದೆ ಎಂದು ಹೇಳಿದರು.

‘ಕಳೆದ ಕೆಲವು ದಿನಗಳ ಹಿಂದೆ ಚನ್ನಕೇಶವ ಸ್ವಾಮಿ ದೇವಾಲಯದಲ್ಲಿ ನಡೆದ ಸಭೆಯಲ್ಲಿ ಅರ್ಚಕರಿಗಾಗಿ ಅಗತ್ಯ ನಿವೇಶನ ನೀಡುವುದಾಗಿ ತಿಳಿಸಿದ್ದೆ. ಜಾಗವನ್ನು ಈಗಾಗಲೇ ನಿಗದಿಪಡಿಸಲಾಗಿದೆ. ಅದರಂತೆ ಆ ಜಾಗದ ಸಂಪೂರ್ಣ ಹಣವನ್ನು ಮತ್ತು ಅದರ ನೋಂದಣಿಗಾಗಿ ನನ್ನ ವೈಯಕ್ತಿಕ ಹಣವನ್ನು ಭರಿಸಿ, ಅರ್ಚಕರ ಅಭಿವೃದ್ಧಿಗೆ ಅನುಕೂಲ ಮಾಡಿಕೊಡುತ್ತೇನೆ’ ಎಂದು ಭರವಸೆ ನೀಡಿದರು.

ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಜೋಡಿಮಲ್ಲಪ್ಪನಹಳ್ಳಿ ಪ್ರವೀಣ್ ಸರಸ್ವತಿ ಸ್ವಾಮೀಜಿ, ಜಿಲ್ಲಾ ಅರ್ಚಕರ ಒಕ್ಕೂಟದ ಅಧ್ಯಕ್ಷ ಸೋಮಶೇಖರಯ್ಯ, ಕಾರ್ಯಾಧ್ಯಕ್ಷ ಪುಟ್ಟಣ್ಣಯ್ಯ, ಪ್ರಧಾನ ಕಾರ್ಯದರ್ಶಿ ಧನಂಜಯ ಮೂರ್ತಿ, ಜಿಲ್ಲೆಯ ಅರ್ಚಕರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT