ಬುಧವಾರ, ಫೆಬ್ರವರಿ 26, 2020
19 °C
ಖ್ಯಾತ ಕವಿ ದೊಡ್ಡರಂಗೇಗೌಡ ಸಲಹೆ

ರಾಜ್ಯದಲ್ಲಿ ಸರ್ಕಾರಿ ಶಾಲೆ ಮುಚ್ಚಲು ಬಿಡದಿರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ ನಗರದ ಎ.ವಿ. ಕಾಂತಮ್ಮ ಮಹಿಳಾ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕವಿ ದೊಡ್ಡರಂಗೇಗೌಡ ಆವರನ್ನು ಸನ್ಮಾನಿಸಲಾಯಿತು

ಹಾಸನ: ‘ರಾಜ್ಯದಲ್ಲಿ ಖಾಸಗಿ ಶಾಲೆಗಳ ಹಾವಳಿ ಹೆಚ್ಚಿದ್ದು, ಸರ್ಕಾರಿ ಶಾಲೆ ಮುಚ್ಚಲು ಬಿಟ್ಟರೆ ತಾಯಿಗೆ ನಾವೇ ಮೋಸ ಮಾಡಿದಂತೆ’ ಎಂದು ಖ್ಯಾತ ಕವಿ ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು.

ನಗರದ ಎ.ವಿ.ಕಾಂತಮ್ಮ ಮಹಿಳಾ ಕಾಲೇಜು ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷತ್, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ವೇದಭಾರತಿ ಮತ್ತು ಪತಂಜಲಿ ಯೋಗ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ದೊಡ್ಡರಂಗೇಗೌಡರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

‘ವೈಜ್ಞಾನಿಕ ಮತ್ತು ವೈಚಾರಿಕವಾಗಿ ನಾವು ಎಷ್ಟೆ ಬೆಳೆದಿದ್ದರೂ ಕನ್ನಡ ತಾಯಿಗೆ ಮತ್ತು ನಮ್ಮ ನಾಡ ಧ್ವಜಕ್ಕೆ ಗೌರವ ಕೊಡದಿದ್ದರೆ ಮನುಷ್ಯರಾಗಿ ಬದುಕಿದ್ದರೂ ಪ್ರಯೋಜನವಿಲ್ಲ. ನಾಡಿನ ಬಾವುಟಕ್ಕೆ ಅಪಮಾನ ಮಾಡುವಂತಹ ಕಾರ್ಯವನ್ನು ಕೆಲವು ಕಿಡಿಗೇಡಿ ತರುಣರು ಮಾಡುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಕಾನ್ವೆಂಟ್‌ ಪ್ರಭಾವದಿಂದ ನಾನು ಭಾರತೀಯ ಎಂದು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ. ಇಂಗ್ಲಿಷ್‌ನಲ್ಲಿ ಮಾತನಾಡಿದ ಕೂಡಲೇ ಘನತೆ ಹೆಚ್ಚಾಗುವುದಿಲ್ಲ. ಪ್ರಾದೇಶಿಕ ಭಾಷೆಗಳಲ್ಲಿ ವ್ಯವಹಾರ ಮಾಡುವ ಮೂಲಕ ನಿಮ್ಮತನ ತಿಳಿಯುತ್ತ ಹೋಗುತ್ತದೆ. ಪೊಷಕರಲ್ಲಿಯೂ ಇಂಗ್ಲಿಷ್‌ ವ್ಯಾಮೋಹ ಹೆಚ್ಚಾಗಿದೆ ಎಂದು ಹೇಳಿದರು.

‘ಖಾಸಗಿಯಾಗಿ ಶಿಕ್ಷಣ ಮಸೂದೆಯನ್ನು ಮಂಡಿಸಲೇಬೇಕು ಎಂದು ಆರು ನಿರಂತರವಾಗಿ ಪ್ರಯತ್ನಿಸಿದೆ. ಆದರೆ, ರಾಜ್ಯದಲ್ಲಿ ನನ್ನದೇ ಆದ ಮಸೂದೆಯನ್ನು ಮಂಡಿಸಲು ಅವಕಾಶ ಕೊಡಲಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳ ಪಟ್ಟಭದ್ರ ಹಿತಾಸಕ್ತಿಗಳು ಅವಕಾಶ ಕೊಡಲಿಲ್ಲ’ ಎಂದು ಬೇಸರವ್ಯಕ್ತಪಡಿಸಿದರು.

‘ಖಾಸಗಿ ಶಾಲೆಗಳಲ್ಲಿ ಸಾಕಷ್ಟು ವಸೂಲಿ ಮಾಡಲಾಗುತ್ತಿದೆ. ಇದಕ್ಕಾಗಿಯೇ ಸರ್ಕಾರಿ ಶಾಲೆಗಳು ಬಡವಾಗಿವೆ. ನಮಗೆಲ್ಲಾ ತಾಯಿ ಭುವನೇಶ್ವರಿ ಆಗಿದ್ದರೇ ಸರ್ಕಾರಿ ಶಾಲೆಯನ್ನು ಮುಚ್ಚಲು ಬಿಡಬಾರದು’ ಎಂದು ಎಚ್ಚರಿಸಿದರು.

‘ಮಾತೃಭಾಷೆ ಕನ್ನಡಕ್ಕೆ ತನ್ನದೆ ಆದ ಇತಿಹಾಸವಿದೆ. ಕನ್ನಡಿಗರ ಬಳಿ ಯಾರೇ ಬಂದರೂ ಯಾರನ್ನು ದ್ವೇಷಿಸದೇ ಪ್ರೀತಿಸುವ ಗುಣ ಹೊಂದಿದ್ದೇವೆ. ರಾಜ್ಯದ 7 ಕೋಟಿ ಜನರು ಒಟ್ಟಾಗಿ ಕನ್ನಡ ಉಳಿವಿಗೆ ಆಂದೋಲನ ಮಾಡಬೇಕಾಗಿದೆ. ಸರ್ಕಾರಿ ಶಾಲೆ ಮುಚ್ಚಿದರೇ ಪ್ರತಿಭಟನೆ ಮಾಡುವುದಾಗಿ ಎಲ್ಲಾರು ಸರ್ಕಾರಕ್ಕೆ ಪತ್ರ ಬರೆದು ಎಚ್ಚರಿಸಬೇಕು’ ಎಂದರು.

‘ಮಕ್ಕಳಿಗೆ ಡ್ಯಾಡಿ, ಮಮ್ಮಿ ಎಂದು ಕಲಿಸುವುದನ್ನು ಬಿಟ್ಟು ಪ್ರೀತಿಯಿಂದ ಅಪ್ಪ-ಅಮ್ಮ ಎಂದು ಕಲಿಸಿಬೇಕು. ಕನ್ನಡ ನಾಡಿನಲ್ಲಿ ಕಲೆ, ಸಂಸ್ಕತಿ, ಪ್ರತಿಭೆಗಳಿಗೆ ಕೊರತೆಗಳಿಲ್ಲ. ಯಾರೂ ಪ್ರತಿಭೆ ಕೊಲ್ಲಲು ಸಾಧ್ಯವಿಲ್ಲ’ ಎಂದು ಹೇಳಿದರು.

ಖ್ಯಾತ ಕವಿ ದೊಡ್ಡರಂಗೇಗೌಡ ಅವರನ್ನು ಸನ್ಮಾನಿಸಲಾಯಿತು. ಸಾಹಿತಿಗಳಾದ ಚಂದ್ರಕಾಂತ್ ಪಡೆಸೂರು, ಪ್ರಭಾಮಣಿ ನಾಗರಾಜು, ಎಸ್.ಲಲಿತಾ, ರವಿಕುಮಾರ್ ಜನಿವಾರ, ಹೊ.ರ.ಪರಮೇಶ್, ಶೈಲಜಾ ಹಾಸನ, ಕೃಷ್ಣಪ್ಪ ಅಂಚೆನಹಳ್ಳಿ ಕವಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು.

ದೊಡ್ಡರಂಗೇಗೌಡ ವಿರಚಿತ ಗೀತೆಗಳ ಗಾಯನವನ್ನು ಸುರಭಿ ಕಲಾತಂಡದ ಸುಕನ್ಯಾ ಪ್ರಭಾಕರ್ ಮತ್ತು ಶ್ರೀನಿಧಿ ಕಲಾತಂಡದ ಭಾನಶ್ರೀ, ರಾಣಿ, ಪುತ್ರಿ ಸಿರಿ ಹಾಗೂ ಪದ್ಮಶ್ರೀ ಪ್ರಸಾದ್, ಪಲ್ಗುಣಿ ಹಾಡಿದರು.

ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆ ಉಪಾಧ್ಯಕ್ಷ ಎಚ್.ಡಿ.ಪಾರ್ಶ್ವನಾಥ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಪತ್ರಕರ್ತ ರವಿನಾಲಗೂಡು, ಅಖಿಲ ಭಾರತ ಸಾಹಿತ್ಯ ಪರಿಷತ್ತು ಪ್ರಾಂತ ಕಾರ್ಯಕಾರಣಿ ಕ.ವೆಂ.ನಾಗರಾಜು ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)