ಬುಧವಾರ, ಫೆಬ್ರವರಿ 1, 2023
16 °C
ಡಾ. ಅಂಬೇಡ್ಕರ್ ಪರಿನಿರ್ವಾಣ ದಿನಾಚರಣೆಯಲ್ಲಿ ಶಾಸಕ ಎಚ್‌.ಕೆ. ಕುಮಾರಸ್ವಾಮಿ

ದಲಿತರ ಮೇಲೆ ನಿಲ್ಲದ ದೌರ್ಜನ್ಯ: ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಸಂವಿಧಾನದ ಆಶಯಗಳಿಗೆ ಅಣಕು ಮಾಡುವ ಘಟನೆಗಳು ನಡೆಯುತ್ತಿವೆ. ದೌರ್ಜನ್ಯ, ದಬ್ಬಾಳಿಕೆ ಇನ್ನೂ ಜೀವಂತವಾಗಿದ್ದು, ದೇಶದ ಸಂವಿಧಾನದಡಿ ಕಾನೂನನ್ನು ಜಾರಿಗೆ ತಂದರೂ ಪರಿಸ್ಥಿತಿ ಸುಧಾರಿಸಿಲ್ಲ ಎಂದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.

ಸಮಾಜ ಕಲ್ಯಾಣ ಇಲಾಖೆ ಹಾಗೂ‌ ಜಿಲ್ಲಾಡಳಿತದ ಆಶ್ರಯದಲ್ಲಿ ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಡಾ.ಬಿ.ಆರ್. ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ಅವರ ಪ್ರತಿಮೆಗೆ ಪುಷ್ಪಾರ್ಚನೆ ನೆರವೇರಿಸುವ ಮೂಲಕ ಉದ್ಘಾಟಿಸಿ ಅವರು ‌ಮಾತನಾಡಿದರು.

ಇಂದಿಗೂ ನಿತ್ಯ ದೇಶದಲ್ಲಿ ಮಹಿಳೆಯ‌‌ರು, ಮಕ್ಕಳು ಹಾಗೂ ದಲಿತರ ಮೇಲೆ‌ ದೌರ್ಜನ್ಯಗಳು‌‌, ಶೋಷಣೆ, ದಬ್ಬಾಳಿಕೆ ನಡೆಯುತ್ತಿರುವುದು ಇಡೀ ಸಮಾಜವೇ ತಲೆ ‌ತಗ್ಗಿಸುವಂತಾಗಿದೆ. ಇದಕ್ಕೆ ಸುಧಾರಣೆ ಹಾಗೂ ಬದಲಾವಣೆ ‌ಮೂಲಕ‌ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಅಭಿಪ್ರಾಯಪಟ್ಟರು.

ಪ್ರತಿಯೊಬ್ಬ ಶೋಷಿತರಿಗೆ ಏ.14. ಹಾಗೂ ಡಿ.6‌ ಸ್ಮರಣೀಯ ದಿನಗಳಾಗಿವೆ. ಆದರೆ ಇಂದು ದೇಶದಲ್ಲಿ ಅವರು ಪ್ರತಿಪಾದಿಸಿದ ತತ್ವ‌, ಸಿದ್ಧಾಂತಕ್ಕೆ ವಿರೋಧವಾಗಿ‌ ಘಟನೆಗಳು ನಡೆಯುತ್ತಿರುವುದು ಡಾ.ಅಂಬೇಡ್ಕರ್‌ ಅವರಿಗೆ ಮಾಡಿದ ಅವಮಾನವಾಗಿದೆ‌ ಎಂದು ವಿಷಾದಿಸಿದರು.

ಹಕ್ಕನ್ನು ಪಡೆಯಲು ಡಾ.ಅಂಬೇಡ್ಕರ್ ಅವರು ಹೋರಾಟದ ಮಾರ್ಗ ಹಿಡಿದರು. ಶೋಷಿತರು, ಕಾರ್ಮಿಕರು, ಮಹಿಳೆಯರ ಪರವಾಗಿ ಧ್ವನಿ ಎತ್ತಿ ಹೋರಾಟ ಮಾಡಿದ್ದರಿಂದ ಇಂದಿಗೂ ಅವರಿಗೆ ಸಮಾಜದಲ್ಲಿ ಮನ್ನಣೆ ದೊರೆಯುತ್ತಿದೆ. ಕನಿಷ್ಠ ಅವರ ಆಶಯಕ್ಕೆ ಅನುಗುಣವಾಗಿ ನಡೆದುಕೊಳ್ಳಬೇಕು. ಅವರ ತತ್ವಾದರ್ಶಗಳನ್ನು ಅಳವಡಿಸಿಕೊಳ್ಳುವುದು‌ ಪ್ರಸ್ತುತ ಸಮಾಜಕ್ಕೆ ಹೆಚ್ಚು ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ದಲಿತ ಮುಖಂಡ ಸಂದೇಶ್ ಮಾತನಾಡಿ, ಪ್ರಸ್ತುತ‌ ದಿನಗಳಲ್ಲಿ ಜನಸಾಮಾನ್ಯರು ಒಳ್ಳೆಯ ಜೀವನ‌ ನಡೆಸಲು ಡಾ.ಅಂಬೇಡ್ಕರ್‌ ಅವರ ಸಂವಿಧಾನ ಹಾಗೂ ಮಾರ್ಗದರ್ಶನ ಕಾರಣ. ಡಾ.ಅಂಬೇಡ್ಕರ್ ಬರೀ ವ್ಯಕ್ತಿಯಲ್ಲ‌ ಶಕ್ತಿಯಾಗಿದ್ದರು. ಅವರ ತತ್ವ ಸಿದ್ಧಾಂತಗಳನ್ನು ‌ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು‌ ತಿಳಿಸಿದರು.

ಡಾ. ಅಂಬೇಡ್ಕರ್ ಅವರು ತಳಮಟ್ಟದ ಸಮಾಜ ಸೇರಿದಂತೆ, ಪ್ರತಿಯೊಬ್ಬರಿಗೂ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಂವಿಧಾನ ರಚನೆ ಮಾಡಿದರು. ಆದರೆ ಇಂದಿಗೂ ಅವರ ಆಶಯಕ್ಕೆ ವಿರುದ್ಧವಾಗಿ ಸಂವಿಧಾನದ ಮೇಲೆ ಪ್ರಹಾರ ನಡೆಯುತ್ತಲೇ ಇದೆ ಎಂದು ವಿಷಾದಿಸಿದರು.

ಎಸ್ಪಿ ಹರಿರಾಂ ಶಂಕರ್, ಸ್ವಾತಂತ್ರ್ಯ ಹೋರಾಟಗಾರರಾದ ಎಚ್.ಎಂ, ಶಿವಣ್ಣ, ನಗರಸಭೆ ಅಧ್ಯಕ್ಷ ಮೋಹನ್, ಕಾಂಗ್ರೆಸ್ ಮುಖಂಡ ಬನವಾಸೆ ರಂಗಸ್ವಾಮಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣ್, ಶಂಕರ್ ರಾಜ್, ಅಧಿಕಾರಿಗಳು, ನಾಗರಿಕರು ಭಾಗವಹಿಸಿದ್ದರು.

ಕಣ್ಣೀರಿಟ್ಟ ಕುಮಾರಸ್ವಾಮಿ

ಕಾರ್ಯಕ್ರಮದಲ್ಲಿ ಮಾತನಾಡುವ ಸಂದರ್ಭದಲ್ಲಿ, ಸಮಾಜದಲ್ಲಿ ದಲಿತರ ಮೇಲಿನ ದೌರ್ಜನ್ಯ, ದಬ್ಬಾಳಿಕೆಯನ್ನು ನೆನೆದು ಶಾಸಕ ಎಚ್ ಕೆ ಕುಮಾರಸ್ವಾಮಿ ಗದ್ಗದಿತರಾದರು.

ಇಂದಿಗೂ ಸಮಾಜದಲ್ಲಿ ಶೋಷಣೆ ಮುಂದುವರಿದಿದ್ದು, ಹೋರಾಟ ಮೂಲಕವೇ ಹಕ್ಕನ್ನು ಪಡೆಯಬೇಕಾಗಿದ್ದು, ಸದ್ಯದ ಪರಿಸ್ಥಿತಿಯಾಗಿದೆ ಎಂದು ವಿಷಾದಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.