ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಯುವ ಜನರು ಬೀದಿಪಾಲು

ಕೇಂದ್ರ ಸರ್ಕಾರ ವಿರುದ್ಧ ಸಿಐಟಿಯು ಉಪಾಧ್ಯಕ್ಷ ವಿಜೆಕೆ ನಾಯರ್‌ ಆಕ್ರೋಶ
Last Updated 13 ಜುಲೈ 2019, 13:43 IST
ಅಕ್ಷರ ಗಾತ್ರ

ಹಾಸನ: ‘ಕಾರ್ಮಿಕ ಸಂಘಟನೆಗಳ ನಿರಂತರ ಹೋರಾಟದಿಂದ ಹಲವು ಕಾನೂನು ಜಾರಿಗೆ ತರಲಾಯಿತು. ಆದರೆ, ಸ್ವಾತಂತ್ರ್ಯ ನಂತರ ಈ ಕಾನೂನುಗಳು ಸಮರ್ಪಕವಾಗಿ ಜಾರಿಯಾಗುತ್ತಿಲ್ಲ’ ಎಂದು ಸಿಐಟಿಯು ಉಪಾಧ್ಯಕ್ಷ ವಿಜೆಕೆ ನಾಯರ್ ಬೇಸರ ವ್ಯಕ್ತಪಡಿಸಿದರು.

ಅಖಿಲ ಭಾರತ ಜನರಲ್ ಕೌನ್ಸಿಲ್ ಸಭೆ ಪೂರ್ವಭಾವಿಯಾಗಿ ನಗರದ ಅಂಬೇಡ್ಕರ್‌ ಭವನದಲ್ಲಿ ಹಮ್ಮಿಕೊಂಡಿದ್ದ “ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಮತ್ತು ಕಾರ್ಮಿಕ ಕಾನೂನುಗಳ ಬದಲಾವಣೆ” ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಅಸಂಘಟಿತ ವಲಯದ ಕಾರ್ಮಿಕರಿಗೆ ಅನುಕೂಲ ಕಲ್ಪಿಸಲು 1919ರಲ್ಲಿ ಐಎಲ್ಒ ಸ್ಥಾಪಿಸಿ, ಅಂತರರಾಷ್ಟ್ರೀಯ ಮಟ್ಟದಲ್ಲಿ ಕಾರ್ಮಿಕರ ಕುರಿತು ಹಕ್ಕುಗಳನ್ನು ನೀಡಲು ತೀರ್ಮಾನ ಮಾಡಲಾಯಿತು. ಈ ವಿಚಾರದಲ್ಲಿ ಹೆಚ್ಚು ಶ್ರಮ ಹಾಕಿದವರಲ್ಲಿ ಬಿ.ಆರ್ ಅಂಬೇಡ್ಕರ್ ಅವರ ಪಾತ್ರ ಬಹಳ ಮುಖ್ಯವಾಗಿದೆ ಎಂದರು.

‘ಸಮಾನ ಕೆಲಸಕ್ಕೆ ಸಮಾನ ವೇತನ’ ನೀಡುತ್ತಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಕಾರ್ಪೊರೇಟ್ ಕಂಪನಿಗಳಿಗೆ ತೆರಿಗೆ ವಿನಾಯಿತಿ, ಮುಕ್ತ ಅವಕಾಶ ನೀಡುವ ಮೂಲಕ ದೇಶದ ದುಡಿಯುವ ಜನರನ್ನು ಬೀದಿಪಾಲು ಮಾಡಲು ಹೊರಟಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಖಿಲ ಭಾರತ ವಿಮಾ ನೌಕರರ ಸಂಘದ ಜಂಟಿ ಕಾರ್ಯದರ್ಶಿ ಜೆ.ಸುರೇಶ್‌ ಮಾತನಾಡಿ, ‘ದೇಶದ ಶ್ರೀಮಂತರ ಆಸ್ತಿ ದುಪ್ಪಟ್ಟಾಗಲು ಹೊಸ ಕೈಗಾರಿಕಾ ನೀತಿಗಳೇ ಕಾರಣ. ವಿದೇಶಿ ಬಂಡವಾಳ ಹೂಡಿಕೆಗೆ ಮುಕ್ತ ಅವಕಾಶ ನೀಡಲಾಗಿದ್ದು, ಪ್ರಸ್ತುತ ಮೋದಿ ಸರ್ಕಾರ ಖಾಸಗಿ ಕಂಪನಿಗಳಿಗೆ ಸಾರ್ವಜನಿಕ ಉದ್ದಿಮೆಗಳನ್ನು ಮಾರಾಟ ಮಾಡಲು ಹೊರಟಿದೆ. ಬಿಎಸ್‍ಎನ್‍ಎಲ್ ಮುಚ್ಚುವ ಹಂತಕ್ಕೆ ತಲುಪಿದ್ದು, 45 ಸಾವಿರ ನೌಕರರು ಕೆಲಸ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ’ ಎಂದರು.

‘ರೈಲ್ವೆ ಇಲಾಖೆ ಖಾಸಗೀಕರಣ ಮಾಡಲು ಹೊರಟಿದೆ. ಈ ಮೂಲಕ ದೇಶದ ಸಾರ್ವಜನಿಕ ಉದ್ದಿಮೆಗಳಿಗೆ ಬೀಗ ಹಾಕಲಾಗುತ್ತಿದೆ. ಖಾಸಗಿ ಒಡೆತನದ ಕಂಪನಿಗಳು ತಮ್ಮ ಆದಾಯ ಹೆಚ್ಚಿಸಿಕೊಂಡಿವೆ. ಆದರೆ ಕಾರ್ಮಿಕರ ವೇತನ ಮಾತ್ರ ಜಾಸ್ತಿಯಾಗಿಲ್ಲ, ಕೆಲಸದ ಭದ್ರತೆ ಇಲ್ಲವಾಗಿದೆ. ಇದಕ್ಕೆ ಕಾರಣ ಆಳುವ ಪಕ್ಷಗಳು ಉದಾರೀಕರಣ, ಖಾಸಗೀಕರಣ ನೀತಿ ಅನುಸರಿಸಿರುವುದು’ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್‌, ಎನ್‍ಪಿಎಸ್ ನೌಕರರ ಮುಖಂಡ ವೇಣುಗೋಪಾಲ್, ಕೆಎಸ್ಆರ್‌ಟಿಸಿಟಿಸಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಎಚ್.ಎಸ್ ಮಂಜುನಾಥ್, ಬ್ಯಾಂಕ್ ನೌಕರರ ಸಂಘದ ಪರಮಶಿವಯ್ಯ, ಸಿಐಟಿಯು ಗೌರವಾಧ್ಯಕ್ಷ ವಿ.ಸುಕುಮಾರ್ ಹಾಜರಿದ್ದರು.

ಅಖಿಲ ಭಾರತ ವಿಮಾ ನೌಕರರ ಸಂಘದ ವಿಜಯ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು, ಸರ್ಕಾರಿ ನೌಕರರ ಒಕ್ಕೂಟದ ಡಿ.ಟಿ. ಶಿವಣ್ಣ ನಿರೂಪಿಸಿದರು, ಮಂಜುನಾಥ್ ಸ್ವಾಗತಿಸಿದರು, ಜಯಪ್ರಕಾಶ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT