ಶುಕ್ರವಾರ, ಜನವರಿ 28, 2022
25 °C
ಪ್ರವಾಸಿಗರು, ಸ್ಥಳೀಯರ ಬೇಸರ

ದ್ವಾರಸಮುದ್ರ ಕೆರೆ ಸುತ್ತಮುತ್ತ ಗಲೀಜು: ಕೋಡಿ ಬಿದ್ದರೂ ತ್ಯಾಜ್ಯದ ಕಿರಿಕಿರಿ

ಎಚ್.ಎಸ್.ಅನಿಲ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಹಳೇಬೀಡು: ಹೊಯ್ಸಳೇಶ್ವರ ದೇವಾಲಯ ಬಳಿ ಇರುವ ದ್ವಾರಸಮುದ್ರ ಕೆರೆಯ ಸುತ್ತಮುತ್ತ ಗಲೀಜು ವಾತಾವರಣ ನಿರ್ಮಾಣ ವಾಗಿದ್ದರಿಂದ ಪ್ರವಾಸಿಗರು ಹಾಗೂ ಸ್ಥಳೀಯರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ಕೋಡಿ ಬಿದ್ದಿರುವ ಕೆರೆಯನ್ನು ಜನರು ಗಲೀಜಿನ ನಡುವೆ ನಿಂತು ವೀಕ್ಷಣೆ ಮಾಡುವಂತಾಗಿದೆ. ಕೆರೆ ಒಡಲಿಗೆ ತ್ಯಾಜ್ಯ ಬೀಳುತ್ತಿರುವುದರಿಂದ ನೀರು ಮಲಿನವಾಗುತ್ತಿದೆ.

‘ಹಿಂದೆ ಕೆರೆ ನೀರು ಪರಿಶುದ್ಧವಾಗಿತ್ತು. ಹಳೇಬೀಡು ಹಾಗೂ ಬಸ್ತಿಹಳ್ಳಿಯ ಜನರು ನೀರು ತಂದು ಕುಡಿಯುವುದಕ್ಕೆ ತಾಮ್ರದ ಬಿಂದಿಗೆ ಉಪಯೋಗಿಸುತ್ತಿದ್ದರು. ಈಗ ಕೈಕಾಲು ತೊಳೆಯುವುಕ್ಕೂ ನೀರನ್ನು ಬಳಸದಂತಾಗಿದೆ’ ಎನ್ನುತ್ತಾರೆ ಬಸ್ತಿಹಳ್ಳಿ ನಿವಾಸಿ ಕೆಲ್ವತ್ತಿ ರವೀಶ್.

ದ್ವಾರಸಮುದ್ರ ಕೆರೆ ಕೋಡಿಯ ಲ್ಲಿಯೇ ಜನರು ಕಸದ ರಾಶಿ ತಂದು ಸುರಿಯುವ ಅಭ್ಯಾಸ ಮಾಡಿಕೊಂಡಿ ದ್ದಾರೆ. ಕಸ ಕೊಳೆತು ದುರ್ವಾಸನೆ ಬೀರುತ್ತಿದ್ದು, ಹೊಯ್ಸಳೇಶ್ವರ ದೇವಾಲಯದವರೆಗೂ ಹಬ್ಬಿದೆ. ಕೆರೆ ಏರಿಯ ಮೇಲೆ ಸಾಕಷ್ಟು ಜನರು ವಾಯುವಿಹಾರಕ್ಕೆ ಬರುತ್ತಿದ್ದರು. ವಾಸನೆ ಸಹಿಸಿಕೊಳ್ಳಲಾಗಿದೆ ಈಗ ಬೇಲೂರು ರಸ್ತೆಯತ್ತ ಹೋಗುತ್ತಿದ್ದಾರೆ.

ಕಬ್ಬಿನ ಸಿಪ್ಪೆ, ಮಾಂಸದ ಅಂಗಡಿ ಹಾಗೂ ಹೋಟೆಲ್‌ ತ್ಯಾಜ್ಯ ಸೇರಿದಂತೆ ಎಲ್ಲ ರೀತಿಯ ಕಸ ಸುರಿಯುವುದಕ್ಕೆ ದ್ವಾರಸಮುದ್ರ ಕೆರೆ ಬಳಕೆಯಾಗುತ್ತಿದೆ. ಕೆರೆ ಕೋಡಿ ಬಿದ್ದರೂ ಜನರು ಕೆರೆ ಬಳಿ ಕಸ ಹಾಕುವುದನ್ನು ಬಿಟ್ಟಿಲ್ಲ. ಹಳೇಬೀಡಿನ ಪ್ರತಿ ಬೀದಿಗೂ ಗ್ರಾಮ ಪಂಚಾಯಿತಿಯಿಂದ ಕಸ ಸಾಗಿಸುವ ವಾಹನ ತೆರಳುತ್ತಿದೆ. ಸಾಕಷ್ಟು ಮಂದಿ ವಾಹನಕ್ಕೆ ಕಸ ಹಾಕುತ್ತಿದ್ದಾರೆ. ಕೆಲವರು ಮಲ, ಮೂತ್ರ ವಿಸರ್ಜನೆಯ ತಾಣ ಮಾಡಿಕೊಂಡಿದ್ದಾರೆ.

‘ಹೊಯ್ಸಳ ಬೋಟಿಂಗ್ ಸಂಸ್ಥೆ ನಡೆಸುತ್ತಿ ರುವ ದೋಣಿ ವಿಹಾರಕ್ಕೆ ಹೋಗುವವರು ಮೂಗು ಮುಚ್ಚಿಕೊಂಡು ಹೋಗಬೇಕಾ ಗಿದೆ. ಸುತ್ತಲೂ ಬೇಲಿ ಹಾಕಿದ್ದರೂ ಮಲಮೂತ್ರ ವಿಸರ್ಜನೆ ಮಾಡುತ್ತಾರೆ.  ಕೆರೆಯ ಪರಿಸರ ಹಾಳಾಗುವುದರೊಂದಿಗೆ ನೀರೂ ಸಹ ಕಲುಷಿತವಾಗುತ್ತಿದೆ’ ಎಂದು ಹೊಟೇಲ್ ಉದ್ಯಮಿ ಶಿವನಾಗು ಅಸಮಾಧಾನ ವ್ಯಕ್ತಪಡಿಸಿದರು.

***

ಕೆರೆ ಬಳಿ ನಿಲ್ಲಿಸಿದ ಹಳೆಯ ಗೂಡಂಗಡಿಗಳಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ. ಅವುಗಳ ಕೆಳಗೆ ಕಸ ನಿಲ್ಲುತ್ತಿದೆ. ಗೂಡಂಗಡಿ ತೆರವಿಗೆ ಕ್ರಮ ಕೈಗೊಳ್ಳಬೇಕು.

- ಕೆಲ್ವತ್ತಿ ರವೀಶ್, ರೈತ

***

ಕೆರೆ ಸುತ್ತ ತ್ಯಾಜ್ಯ ಸುರಿದರೆ ದಂಡ ವಿಧಿಸುತ್ತೇವೆ ಎಂದು ಎಚ್ಚರಿಕೆ ನೀಡಿದರೂ ತಪ್ಪಿಲ್ಲ. ಕಸ ಸುರಿಯುವ ವಿಡಿಯೊ ಮಾಡಿ ಕಳುಹಿ ಸಿದರೆ, ಕ್ರಮ ಕೈಗೊಳ್ಳಲು ಅನುಕೂಲ.

- ರವಿಕುಮಾರ್, ಪಿಡಿಒ ಹಳೇಬೀಡು ಗ್ರಾ.ಪಂ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು