ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲೂರು: ಜನ ಸೇರಿಸಲು ರಾಜಕೀಯ ಪಕ್ಷಗಳ ಕಸರತ್ತು

ಚುನಾವಣೆ: ಆಲೂರಿನತ್ತ ನೋಡುತ್ತಿರುವ ಮುಖಂಡರು
Last Updated 4 ಮಾರ್ಚ್ 2023, 4:52 IST
ಅಕ್ಷರ ಗಾತ್ರ

ಆಲೂರು: ರಾಜಕೀಯ ಪಕ್ಷಗಳಿಂದ ಒಂದು ರೀತಿಯಲ್ಲಿ ನಿರ್ಲಕ್ಷ್ಯಕ್ಕೆ ಒಳಗಾದಂತಿದ್ದ ತಾಲ್ಲೂಕಿನಲ್ಲಿ ಇದೀಗ ರಾಜಕೀಯ ಪಕ್ಷಗಳು ಹೆಚ್ಚಿನ ಗಮನ ನೀಡುತ್ತಿವೆ. ಸಕಲೇಶಪುರ–ಆಲೂರು–ಕಟ್ಟಾಯ ವಿಧಾನಸಭಾ ಕ್ಷೇತ್ರವಾಗಿದ್ದರೂ, ಸಕಲೇಶಪುರಕ್ಕೆ ಸೀಮಿತವಾಗುತ್ತಿದ್ದ ರಾಜಕೀಯ ಕಾರ್ಯಕ್ರಮಗಳು ಇದೀಗ ಆಲೂರಿಗೂ ಬಂದಿವೆ.

ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ತಾಲ್ಲೂಕಿನಲ್ಲಿ ರಾಜಕೀಯ ಕಾರ್ಯಕ್ರಮಗಳು ಜೋರಾಗಿವೆ. ಇತ್ತೀಚೆಗೆ ತಾಲ್ಲೂಕಿನಲ್ಲಿ ನಡೆದ ಕಾಂಗ್ರೆಸ್ ಪ್ರಜಾಧ್ವನಿ ಸಮಾವೇಶ, ಬಿಜೆಪಿ ಮತ್ತು ಜೆಡಿಎಸ್ ಮುಖಂಡರ ನಿದ್ದೆಗೆಡಿಸಿದೆ. ಎರಡೂ ಪಕ್ಷದವರು ಅತಿ ಹೆಚ್ಚು ಜನರನ್ನು ಸೇರಿಸುವ ಚಿಂತನೆಯಲ್ಲಿ ತೊಡಗಿದ್ದಾರೆ.

ಸುಮಾರು ಮೂರು ದಶಕಗಳ ಇತಿಹಾಸವನ್ನು ಅವಲೋಕಿಸಿದರೆ, 2018 ರ ಚುನಾವಣೆ ಸಂದರ್ಭದಲ್ಲಿ ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಚುನಾವಣೆ ಪ್ರಚಾರಕ್ಕೆಂದು ಹೆಲಿಕಾಪ್ಟರ್ ಮೂಲಕ ಆಲೂರಿಗೆ ಬಂದಿದ್ದರು. ನಾರ್ವೆ ಸೋಮಶೇಖರ್ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆಗ ಸುಮಾರು 3ಸಾವಿರ ಜನರು ಸಭೆಯಲ್ಲಿ ಪಾಲ್ಗೊಂಡಿದ್ದರು. ಚುನಾವಣೆಯಲ್ಲಿ ನಾರ್ವೆ ಸೋಮಶೇಖರ್ ಅವರಿಗೆ ನಿರೀಕ್ಷಿತ ಮತಗಳು ಲಭ್ಯವಾಗಿದ್ದವು.

ಈ ವರ್ಷ ಫೆ. 28 ರಂದು ಕಾಂಗ್ರೆಸ್ ವತಿಯಿಂದ ನಡೆದ ಪ್ರಜಾಧ್ವನಿ ಸಮಾವೇಶದಲ್ಲಿ, ಮುಖಂಡ ಮುರಳಿಮೋಹನ್ ನೇತೃತ್ವದಲ್ಲಿ ಎಲ್ಲ ಮುಖಂಡರ ಸಹಕಾರದಿಂದ 10 ಸಾವಿರ ಜನರು ಪಾಲ್ಗೊಂಡಿದ್ದರು. ಈ ಜನಸಮೂಹ ಕಂಡ ಪಕ್ಷದ ನೇತಾರರೂ ಹಿಗ್ಗಿದರು. ಜನಸಾಮಾನ್ಯರು ಅದ್ಭುತ ಜನಸಾಗರ ನೋಡಿ ಪುಳಕಿತರಾದರು.

ಕಾಂಗ್ರೆಸ್‌ ಸಮಾವೇಶದ ನಂತರ ಬಿಜೆಪಿ, ಜೆಡಿಎಸ್ ಪಕ್ಷದವರು ಎಷ್ಟು ಜನರನ್ನು ಸೇರಿಸಿ ಸಮಾವೇಶ ಮಾಡಬೇಕು ಎನ್ನುವ ಚಿಂತನೆಯಲ್ಲಿ ಮುಳುಗಿದ್ದಾರೆ. ಜನರನ್ನು ಸಂಘಟಿಸಿ ಕರೆತಂದು, ಕಳಿಸುವುದು ಅಷ್ಟು ಸುಲಭದ ಕೆಲಸವಲ್ಲ. ಅವರ ಆಗುಹೋಗುಗಳಿಗೆ ಪಕ್ಷದ ಮುಖಂಡರು ಸ್ಪಂದಿಸಿದರೆ ಮಾತ್ರ ಜನಸಾಗರ ಹರಿದು ಬರುತ್ತದೆ ಎನ್ನುವುದು ಜನರ ಮಾತು.

ಯಾವುದೇ ಪಕ್ಷದ ಸಮಾವೇಶ ನಡೆದರೂ, ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳೇ ಆಗುಹೋಗುವ ಖರ್ಚು ವೆಚ್ಚ ಸೇರಿದಂತೆ ಪ್ರತಿಯೊಂದಕ್ಕೂ ಮುಂದಾಗಬೇಕಾಗಿದೆ. ಎಲ್ಲ ಪಕ್ಷಗಳಲ್ಲೂ ಇದೇ ಸ್ಥಿತಿ ಇದ್ದು, ಕೃಷಿ ಚಟುವಟಿಕೆ ಪೂರ್ಣಗೊಳಿಸಿರುವ ರೈತಾಪಿ ಜನರೂ ಹೆಚ್ಚಿನ ಸಂಖ್ಯೆಯಲ್ಲಿ ಸೇರುತ್ತಿದ್ದಾರೆ.

ಆಲೂರು ತಾಲ್ಲೂಕಿನ ಬಹುತೇಕ ಹಳ್ಳಿಗಳ ಜನರನ್ನು ಒಂದೆಡೆ ಸೇರಿಸುವ ಮೂಲಕ ಮತಗಳಾಗಿ ಪರಿವರ್ತಿಸಬಹುದು ಎನ್ನುವ ಯೋಚನೆ ವಿವಿಧ ಪಕ್ಷಗಳ ಮುಖಂಡರದ್ದಾಗಿದ್ದು, ಅದಕ್ಕಾಗಿಯೇ ಆಲೂರು ಕೇಂದ್ರವನ್ನಾಗಿಸಿ ಕಾರ್ಯಕ್ರಮ ಆಯೋಜನೆ ಮಾಡಲು ಮುಂದಾಗಿದ್ದಾರೆ ಎಂದು ಇಲ್ಲಿನ ಜನರು ಹೇಳುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT