ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖೆಡ್ಡಾಕ್ಕೆ ಬಿದ್ದ ಪುಂಡಾನೆ: ಜೀವಭಯದಿಂದ ಬದುಕುತ್ತಿದ್ದ ಜನರು ನಿರಾತಂಕ

Last Updated 28 ಜುಲೈ 2019, 11:34 IST
ಅಕ್ಷರ ಗಾತ್ರ

ಹಾಸನ: ತಿಂಗಳ ಅಂತರದಲ್ಲಿ ಇಬ್ಬರು ಅಮಾಯಕರನ್ನು ಬಲಿ ಪಡೆದಿದ್ದಲ್ಲದೇ, ಹಾಸನ ಹಾಗೂ ಬೇಲೂರು ಜನರ ನಿದ್ದೆಗೆಡಿಸಿದ್ದ ಒಂಟಿ ಸಲಗ ಕೊನೆಗೂ ಅರಣ್ಯ ಇಲಾಖೆ ಖೆಡ್ಡಾಕ್ಕೆ ಬಿದ್ದಿದೆ.

ಹಾಸನ ತಾಲ್ಲೂಕಿನ ಸೀಗೆಗುಡ್ಡ ಬಳಿಯ ವೀರಾಪುರದಲ್ಲಿ ಕ್ಯಾಂಪ್ ಹಾಕಿದ ಅರಣ್ಯ ಇಲಾಖೆ, ಪಳಗಿದಆನೆಗಳ ಜೊತೆಗೆ ಸುಮಾರು 50 ಸಿಬ್ಬಂದಿ ಬೆಳಗ್ಗೆ 10 ಗಂಟೆಗೆ ಕಾರ್ಯಾಚರಣೆ ಆರಂಭಿಸಿದರು.ಬೇಲೂರು ತಾಲ್ಲೂಕು ಆಲದಹಳ್ಳಿ ಬಳಿ ಆನೆ ಹೆಜ್ಜೆ ಗುರುತು ಹಿಡಿದು ಹೊರಟ ತಂಡ, ಸಲಗ ಕಾಣುತ್ತಿದ್ದಂತೆಯೇ ವನ್ಯಜೀವಿ ವೈದ್ಯರು ಅರವಳಿಕೆ ಚುಚ್ಚುಮದ್ದು ನೀಡಿದರು.

ಅದಾದ ನಂತರ ಕೆಲ ದೂರ ಹೋದ ಸಲಗ ಕುಸಿದು ಬಿತ್ತು.ಸೆರೆ ಸಿಕ್ಕುವ ಭೀತಿಯಲ್ಲಿ ಪಳಗಿದ ಆನೆಗಳೊಂದಿಗೆ ಒಂಟಿಯಾನೆ ಕಾಳಕ್ಕೆ ಇಳಿಯಿತಾದರೂ, ಬಲಿಷ್ಟ ಆನೆಗಳ ಮುಂದೆ ಸಲಗನ ಆಟ ನಡೆಯಲಿಲ್ಲ. ಕೂಡಲೇ ಸುತ್ತುವರಿದ ಅಭಿಮನ್ಯು ಹಾಗೂ ಉಳಿದ ಆನೆಗಳ ಎಗರಾಡುತ್ತಿದ್ದ ಸಲಗ ಬಾಲ ಮುದುರುವಂತೆ ಮಾಡಿದವು.

ಕಾರ್ಯಾಚರಣೆ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಆನೆಯ ಹೆಡೆಮುರಿ ಕಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು.

ಜೂನ್ 19 ಮತ್ತು ಜುಲೈ 23 ರಂದು ಅರಣ್ಯ ಇಲಾಖೆ ವಾಚರ್ ಸೇರಿ ಇಬ್ಬರನ್ನು ಸಲಗ ಬಲಿ ಪಡೆದಿತ್ತು. ಅಷ್ಟೇ ಅಲ್ಲದೆ, ಜುಲೈ 6 ರಂದು ಹಾಸನ ಹೊರವಲಯದ ಹುಣಸಿನಕೆರೆ ಹಾಗೂ ಜುಲೈ 23 ರ ಮುಂಜಾನೆ ಹಾಸನ ನಗರದ ಪಿ ಎನ್ ಟಿ ಕಾಲೋನಿ, ಪೆನ್ಷನ್‌ ಮೊಹಲ್ಲಾ ಬಡಾವಣೆಯ ರಸ್ತೆಗಳಲ್ಲಿ ಸಂಚರಿಸಿತ್ತು. ಇದರಿಂದ ರೈತರು ಹಾಗೂ ಜನರು ಸಾರ್ವಜನಿಕರು ಆತಂಕಗೊಂಡಿದ್ದರು.

ಇದಾದ ಬಳಿಕ ಪುಂಡಾನೆ ಸೆರೆಗೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿತ್ತು. ಅನುಮತಿ ಸಿಕ್ಕ ಕೂಡಲೇ ಶನಿವಾರ ಅಭಿಮನ್ಯು ನೇತೃತ್ವದಲ್ಲಿ ಕೃಷ್ಣ, ಅಜೇಯ್, ವಿಕ್ರಂ ಮತ್ತು ಹರ್ಷ ಸೇರಿ 5 ಪಳಗಿದ ಆನೆಗಳನ್ನು ಮತ್ತಿಗೋಡು ದುಬಾರೆ ಆನೆ ಶಿಬಿರದಿಂದ ಕರೆಸಿಕೊಳ್ಳಲಾಗಿತ್ತು.

ಆನೆ ಭಯದಿಂದ ದಿಗಿಲು ಗೊಂಡಿದ್ದ ಜನರಲ್ಲಿ ತುಸು ನೆಮ್ಮದಿ ಮೂಡಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೂ ಸಲಗನ ವಿಷಯದಲ್ಲಿ ತಲೆ ಬಿಸಿ ತಪ್ಪಿದಂತಾಗಿದೆ.

‘30 ವರ್ಷದ ಸಲಗ ದಷ್ಟಪುಷ್ಟವಾಗಿದ್ದು, ಸೆರೆ ಸಿಕ್ಕಿರುವುದರಿಂದ ಕೊಂಚ ಆಘಾತಗೊಂಡಿದೆ. ತುಸು ಆರೈಕೆ ಮಾಡಿ, ಕುಶಾಲನಗರ ಬಳಿ ಇರುವ ದುಬಾರೆ ಆನೆ ಶಿಬಿರಕ್ಕೆ ಬಿಟ್ಟು ಪಳಗಿಸಲಾಗುವುದು’ ಎಂದು ವನ್ಯಜೀವಿ ವೈದ್ಯ ನಾಗರಾಜ್ ತಿಳಿಸಿದರು.

ಚಿಕ್ಕಮಗಳೂರಿನ ಭದ್ರಾ ಅಭಯಾರಣ್ಯ ಭಾಗದಿಂದ ಬಂದು ಹಾಸನ ಹಾಗೂ ಬೇಲೂರು ಜನರ ನಿದ್ದೆಗೆಡಿಸಿದ್ದ ಒಂಟಿ ಸಲಗ ಕೊನೆಗೂ ಸೆರೆ ಸಿಕ್ಕಿರುವುದರಿಂದ ಹಗಲು-ರಾತ್ರಿ ಆತಂಕದಲ್ಲೇ ದಿನ ದೂಡುತ್ತಿದ್ದ ಜನರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT