ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲೆನಾಡು ಭಾಗದಲ್ಲಿ ನಿಲ್ಲದ ಆನೆಗಳ ಉಪಟಳ: ಎಚ್‌.ಕೆ. ಕುಮಾರಸ್ವಾಮಿ

Last Updated 31 ಜನವರಿ 2020, 12:27 IST
ಅಕ್ಷರ ಗಾತ್ರ

ಹಾಸನ: ಮಲೆನಾಡು ಭಾಗದಲ್ಲಿ ಆನೆಗಳ ಉಪಟಳ ಹೆಚ್ಚಾಗಿದ್ದು, ಆನೆ ಕಾರಿಡಾರ್‌ ನಿರ್ಮಿಸಬೇಕು ಎಂದು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ ಆಗ್ರಹಿಸಿದರು.

‘ಆನೆ ದಾಳಿಯಿಂದ ವಾರದಲ್ಲಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಟಾವಿಗೆ ಬಂದ ಬೆಳೆಗಳನ್ನು ನಾಶ ಮಾಡುತ್ತಿವೆ. ಆರು ವರ್ಷದಲ್ಲಿ ಎರಡು ಬಾರಿ ಸಲ್ಲಿಸಿದ ಪ್ರಸ್ತಾವಕ್ಕೆ ಕೇಂದ್ರ ಪರಿಸರ ಇಲಾಖೆ ಸ್ಪಂದಿಸಿಲ್ಲ. ₹ 272 ಕೋಟಿ ಅನುದಾನ ನೀಡಲು ಕೇಂದ್ರ ಹಿಂದೇಟು ಹಾಕುತ್ತಿದೆ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ರೈಲ್ವೆ ಕಂಬಿ ಅಳವಡಿಕೆಗಾಗಿ ₹ 100 ಕೋಟಿ ಬಿಡುಗಡೆ ಮಾಡಲಾಗಿದೆ. ಆದರೆ ಇದು ಶಾಶ್ವತ ಪರಿಹಾರ ಅಲ್ಲ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕೇಂದ್ರ ಸರ್ಕಾರ ಆರ್ಥಿಕ ಪರಿಸ್ಥಿತಿ ಸುಧಾರಿಸುವತ್ತ ಗಮನ ಹರಿಸಬೇಕು. ಕಾಫಿ, ಸಂಬಾರ ಪದಾರ್ಥಗಳಿಗೆ ಬೆಂಬಲ ಬೆಲೆ ಘೋಷಿಸಬೇಕು. ಖರ್ಚು ವೆಚ್ಚ ಹೆಚ್ಚಾಗಿ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ. ಈಗಾಘಲೇ ಕೇಂದ್ರಕ್ಕೆ ಪತ್ರ ಸಹ ಬರೆಯಲಾಗಿದೆ ಎಂದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ವರ್ಷಕ್ಕೆ ಎರಡು ಕೋಟಿ ಜನರಿಗೆ ಉದ್ಯೋಗ ಸೃಷ್ಟಿಸುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಗೆ ಕ್ರಮ ಕೈಗೊಂಡಿಲ್ಲ. ಅಂದಾಜು ಹತ್ತು ಕೋಟಿ ನಿರುದ್ಯೋಗಿಗಳು ಇದ್ದಾರೆ. ವಿವಧ ಇಲಾಖೆಗಳಲ್ಲಿ ದೇಶದಲ್ಲಿ ಏಳು ಲಕ್ಷ ಹಾಗೂ‌ ರಾಜ್ಯದಲ್ಲಿ 3 ಲಕ್ಷ ಹುದ್ದೆಗಳು ಖಾಲಿ ಇದೆ ಎಂದು ವಿವರಿಸಿದರು.

ಕೇಂದ್ರ ಸರ್ಕಾರದ ಸಂಸ್ಥೆಗಳು ನಷ್ಟದಲ್ಲಿವೆ ಎಂಬ ಕಾರಣಕ್ಕೆ ಎಲ್ಲವನ್ನು ಖಾಸಗೀಕರಣ ಮಾಡುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಸರ್ಕಾರವೇ ಖಾಸಗೀಕರಣವಾದರೂ ಅಚ್ಚರಿ ಇಲ್ಲ. ಹಾಗಾಗಿ ನಷ್ಟದಲ್ಲಿದ್ದರೂ ಸಂಸ್ಥೆಗಳನ್ನು ನಡೆಸಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ರೈಲ್ವೆ ಯೋಜನೆಗಳಿಗೆ ಒತ್ತು ನೀಡಬೇಕು. ಹಾಸನ– ಶೃಂಗೇರಿ ನಡುವೆ ರೈಲು ಸಂಚರಿಸಬೇಕು. ಸಕಲೇಶಪುರ–ಬೇಲೂರು ರೈಲು ಓಡಿಸಬೇಕು. ಈ ಮಾರ್ಗದ ಸರ್ವೆ ಸಹ ಆಗಿದೆ. ಆಲೂರಿನಲ್ಲಿ ರೈಲು ನಿಲ್ದಾಣ, ಸಿಬ್ಬಂದಿ ಇದ್ದರೂ ರೈಲು ನಿಲ್ಲುತ್ತಿಲ್ಲ. ತಾಲ್ಲೂಕು ಕೇಂದ್ರವಾಗಿರುವ ಕಾರಣ ನಿಲುಗಡೆ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

‘ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) ಪರವಾಗಿ 1.15 ಕೋಟಿ ಜನರಿದ್ದಾರೆ ಎಂದು ಬಿಜೆಪಿ ಹೇಳಿದೆ. ಹಾಗಾದರೆ ಉಳಿದ 4.50 ಕೋಟಿ ಜನರ ವಿರೋಧ ಇದ್ದ ಹಾಗೆ. ದೇಶದಲ್ಲಿ ಅರಾಜಕತೆ ಉಂಟಾಗಿದೆ. ರಾಜ್ಯ ಮತ್ತು ಕೇಂದ್ರದ ಕೇಂದ್ರ ಮಂತ್ರಿಗಳು ಗುಂಡಿಕ್ಕಿ ಕೊಲ್ಲಲು ಪ್ರಚೋದಿಸುತ್ತಿದ್ದಾರೆ. ಇಂತಹ ಸಂಸದರು ಹಾಗೂ ಸಚಿವರನ್ನು ವಜಾ ಮಾಡಬೇಕು. ಪ್ರಧಾನಿ ಮೌನ ವಹಿಸಿದ್ದರೆ ಅದಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎಂಬ ಅರ್ಥ ಬರುತ್ತದೆ’ ಎಂದು ನುಡಿದರು.

ಗೋಷ್ಠಿಯಲ್ಲಿ ಮುಖಂಡರಾದ ದೇವೇಗೌಡ, ರಘು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT