ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲ್ವೆ ಕಂಬಿ ಬ್ಯಾರಿಕೇಡ್‌ ನಿರ್ಮಿಸಿ ಆನೆ ಸ್ಥಳಾಂತರ

ಸದ್ಯಕ್ಕೆ ಅರಣ್ಯ ಪ್ರದೇಶ ವಿಸ್ತರಣೆಯಿಲ್ಲ, ಶೀಘ್ರ ಕೇಂದ್ರಕ್ಕೆ ನಿಯೋಗ: ಸಚಿವ ಅರವಿಂದ ಲಿಂಬಾವಳಿ
Last Updated 16 ಫೆಬ್ರುವರಿ 2021, 14:01 IST
ಅಕ್ಷರ ಗಾತ್ರ

ಹಾಸನ: ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಸರಿಯಿಲ್ಲದ ಕಾರಣ ಮುಂದಿನ ಒಂದೆರೆಡು ವರ್ಷ ಅರಣ್ಯ ವಿಸ್ತರಣೆ ಮೂಲಕ ಆನೆ ಕಾರಿಡಾರ್ ಸ್ಥಾಪನೆ ಅಸಾಧ್ಯ. ಪರಿಸ್ಥಿತಿ ಸುಧಾರಣೆಗೊಂಡ ನಂತರ ಈ ಬಗ್ಗೆ ಪ್ರಯತ್ನ ಮಂದುವೆರಸಬಹುದು ಎಂದು ಅರಣ್ಯ ಸಚಿವ ಅರವಿಂದ ಲಿಂಬಾವಳಿ ಹೇಳಿದರು.

ಸಕಲೇಶಪುರ ಪಟ್ಟಣದ ಪುರಭವನದಲ್ಲಿ ಮಂಗಳವಾರ ಅರಣ್ಯ ಇಲಾಖೆ ಆಯೋಜಿಸಿದ್ದ ಕಾಡಾನೆ ಸಮಸ್ಯೆ ಬಗ್ಗೆ ಸಾರ್ವಜನಿಕರೊಂದಿಗೆ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳ ಪರಿಶ್ರಮದಿಂದ ರಾಜ್ಯದಲ್ಲಿ ಅರಣ್ಯ ಪ್ರದೇಶ ಶೇಕಡಾ 18ರಿಂದ 23ಕ್ಕೇ ಏರಿಕೆಯಾಗಿದೆ. ಸ್ಥಳೀಯ ಸಮಸ್ಯೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವುಗಳ ಬಗ್ಗೆ ಗಮನ ಹರಿಸಿ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುವುದು ಎಂದರು.

ಆನೆ ಹಾವಳಿ ತಡೆಗೆ ರಾಜ್ಯದಲ್ಲಿ ನಿರಂತರ ಪ್ರಯತ್ನ ನಡೆಯುತ್ತಿದೆ. ಕೇಂದ್ರದಿಂದ ಹೆಚ್ಚಿನ ಅನುದಾನ ಹಾಗೂ ಕಡಿಮೆ ಹಣದಲ್ಲಿ ರೈಲ್ವೆ ಹಳಿಗಳನ್ನು ನೀಡುವಂತೆ ಮನವಿ ಮಾಡಲಾಗುವುದು. ಗಣಿಗಾರಿಕೆ ಸೇರಿದಂತೆ ಹಲವು ಯೋಜನೆಗಳ ಅನುಷ್ಟಾನ ದಿಂದ ಆನೆ ಸೇರಿದಂತೆ ಹಲವು ಕಾಡು ಪ್ರಾಣಿಗಳು ತಮ್ಮ ಆವಾಸ ಸ್ಥಾನ ಬದಲಿಸುತ್ತಿವೆ. ವನ್ಯ ಜೀವಿಗಳು ಹಾಗೂ ಮಾನವ ಸಂಘರ್ಷ ತಡೆಗೆ ಇಲಾಖೆ ವತಿಯಿಂದ ಗಂಭೀರ ಪ್ರಯತ್ನವನ್ನು ವೈಜ್ಞಾನಿಕವಾಗಿ ಮಾಡಲಾಗುವುದು. ಫೆ. 25 ರಂದು ರಾಜ್ಯದ ಅರಣ್ಯ ಪ್ರದೇಶಗಳ ಶಾಸಕರ ಸಭೆ ಕರೆಯಲಾಗಿದೆ. ಅಲ್ಲಿ ಬರುವ ಅಭಿಪ್ರಾಯ ಕ್ರೋಢೀಕರಿಸಿ ಕೇಂದ್ರಕ್ಕೆ ಪ್ರಸ್ತಾವನೆ ಮಂಡಿಸಲಾಗುವುದು ಎಂದು ವಿವರಿಸಿದರು.

ಅರಣ್ಯ ಇಲಾಖೆಗೆ ಸಿಬ್ಬಂದಿ ನೇಮಕ ಸೇರಿದಂತೆ ಮೂಲಭೂತ ಸೌಕರ್ಯ ಒದಗಿಸಲಾಗುವುದು. ಈಗಾಗಾಲೇ ಇಲಾಖೆಯಲ್ಲಿನ ಸಮಸ್ಯೆಗಳ ಬಗ್ಗೆ ಅರಿತಿದ್ದೇನೆ. ಮುಂದೆ ಪರಿಹಾರ ಕಂಡುಕೊಳ್ಳಲು ಪ್ರಯತ್ನ ನಡೆಸಲಾಗುವುದು.
ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರದ ಅನುಮತಿ ಬೇಕು. ಮೊದಲು ರೈಲ್ವೆ ಕಂಬಿ ಬ್ಯಾರಿಕೇಡ್‌ ಅಳವಡಿಕೆ ಕಾರ್ಯ ಪೂರ್ಣಗೊಳ್ಳಬೇಕು, ನಂತರ ಆನೆಗಳ ಸ್ಥಳಾಂತರ ಮಾಡಬೇಕು. ಪುಂಡಾನೆಗಳನ್ನ ಹಿಡಿದು ಅನೆ ಕ್ಯಾಂಪ್‌ಗಳಿಗೆ ಸ್ಥಳಾಂತರಿಸುವ ಬಗ್ಗೆಯೂ ಚಿಂತನೆ ನಡೆಸಲಾಗುವುದು. ಆನೆಗಳನ್ನು ಸಾಕುವುದಾಗಿ ಅನೇಕ ಮಠಗಳು ಕೋರಿಕೆ ಸಲ್ಲಿಸಿವೆ ಎಂದರು.

ಸಾಕು ಪ್ರಾಣಿಗಳ ಸಾವಿಗೆ ಪರಿಹಾರ ಇನ್ನೂ ಹೆಚ್ಚು ನೀಡಲು ಕ್ರಮ ಕೈಗೊಳ್ಳಲಾಗುವುದು.ಹಾಸನ ಜಿಲ್ಲೆಯಲ್ಲಿ ರೈತರಿಗೆ ನೀಡಬೇಕಾಗಿರುವ ಹಿಂದಿನ ಬೆಳೆ ನಷ್ಟ ಪರಿಹಾರ ₹1.20 ಕೋಟಿ ಹಣವನ್ನು 15 ದಿನಗಳಲ್ಲಿ ನೀಡಲಾಗುವುದು. ಮಾರ್ಚ್‌ 8 ರಿಂದ ಲೋಕಸಭಾ ಅಧಿವೇಶನ ನಡೆಯಲಿದ್ದು, ಆಗ ರಾಜ್ಯದ ನಿಯೋಗದೊಂದಿಗೆ ಕೇಂದ್ರ ಪರಿಸರ, ರೈಲ್ವೆ ಹಾಗೂ ಹಣಕಾಸು ಸಚಿವರು ಮತ್ತು ಅಧಿಕಾರಿಗಳನ್ನು ಭೇಟಿ ಮಾಡಿ, ಸಮಸ್ಯೆಗಳ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದು ಎಂದು ತಿಳಿಸಿದರು.

ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಮಾತನಾಡಿ, ಎರಡು ದಶಕಗಳಿಂದ ಆನೆ ದಾಳಿಗೆ ಮೃತಪಟ್ಟವರು ಹಾಗೂ ಬೆಳೆ ನಾಶದ ವರದಿಯನ್ನು ಕೇಂದ್ರದ ಗಮನಕ್ಕೆ ತಂದು, ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗುವುದು ಎಂದರು.

ಪಿಸಿಸಿಎಫ್‌ (ವನ್ಯಜೀವಿ) ವಿಜಯ್‌ ಕುಮಾರ್ ಗೋಗಿ, ಹಾಸನ ವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪಿ.ಶಂಕರ್‌, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಬಸವರಾಜ್, ಅನುಪಮಾ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್‌, ಜಿಲ್ಲಾಧಿಕಾರಿ ಆರ್.ಗಿರೀಶ್, ಪೊಲೀಸ್‌ ವರಿಷ್ಠಾಧಿಕಾರಿ ಆರ್‌.ಶ್ರೀನಿವಾಸ್‌ ಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT