ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ಸಮಸ್ಯೆ: ದೆಹಲಿಗೆ ನಿಯೋಗ

ಶಾಸಕ ಎಚ್‌.ಕೆ. ಕುಮಾರಸ್ವಾಮಿ ಹೇಳಿಕೆ; ಶಾಶ್ವತ ಪರಿಹಾರಕ್ಕೆ ಆಗ್ರಹ
Last Updated 23 ಮೇ 2022, 4:31 IST
ಅಕ್ಷರ ಗಾತ್ರ

ಸಕಲೇಶಪುರ: ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಆಗ್ರಹಿಸಿ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ, ಸಂಸದ ಪ್ರಜ್ವಲ್‌ ರೇವಣ್ಣ ನೇತೃತ್ವದಲ್ಲಿ ಕಾಡಾನೆ ಸಮಸ್ಯೆ ಇರುವ ವಿಧಾನಸಭಾ ಕ್ಷೇತ್ರಗಳ ಶಾಸಕರ ನಿಯೋಗವನ್ನು ನವದೆಹಲಿಗೆ ಕರೆದೊಯ್ದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು’ ಎಂದು ಶಾಸಕ ಎಚ್‌.ಕೆ. ಕುಮಾರಸ್ವಾಮಿ ಹೇಳಿದರು.

‘ಎರಡು ದಶಕಗಳಿಂದ ಆಲೂರು, ಸಕಲೇಶಪುರ, ಬೇಲೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ 50ಕ್ಕೂ ಹೆಚ್ಚು ಮಂದಿ ಜೀವ ಕಳೆದು ಕೊಂಡಿದ್ದಾರೆ. ನೂರಾರು ಮಂದಿ ಶಾಶ್ವತ ಅಂಗವಿಕಲರಾಗಿದ್ದಾರೆ. ಪ್ರತಿದಿನ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಮಾಡುತ್ತಿವೆ. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

‘ಪಟ್ಟಣ ಪ್ರದೇಶಗಳಿಗೂ ಕಾಡಾನೆ ಗಳು ನುಗ್ಗುತ್ತಿವೆ. ಗ್ರಾಮಗಳಲ್ಲಿ ಮನೆ ಬಾಗಿಲು, ಕಿಟಕಿ ಮುರಿದು ಭತ್ತವನ್ನು ತಿನ್ನುತ್ತಿವೆ. ಮುಂದಿನ ವಾರ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದಲ್ಲಿ ಉನ್ನತ ಅಧಿಕಾರಿಗಳ ಸಭೆ ಕರೆದಿದ್ದು, ಇಲ್ಲಿ ಕಾಡಾನೆ ಸಮಸ್ಯೆಗೆ ಸೂಕ್ತ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.

‘ಈ ಕ್ಷೇತ್ರ ಹಾಗೂ ನನ್ನ ಬಗ್ಗೆ ತಿಳಿದು ಕೊಳ್ಳದೆ ವ್ಯಕ್ತಿಯೊಬ್ಬರು ಆರೋಪ ಮಾಡಿದ್ದಾರೆ. ಶಾಸಕರು ಕಾಡಾನೆ ಸಮಸ್ಯೆ ಬಗ್ಗೆ ಯಾವುದೇ ಹೋರಾಟ ಮಾಡಿಲ್ಲ ಎಂದು ಆರೋಪಿಸಿದ್ದಾರೆ. ವಿಧಾನ ಸಭೆಯಲ್ಲಿ ಕಾಡಾನೆ ಸಮಸ್ಯೆ ಬಗ್ಗೆ ಹೆಚ್ಚು ಪ್ರಶ್ನೆಗಳನ್ನು ಕೇಳಿರುವುದೇ ನಾನು’ ಎಂದು ತಿರುಗೇಟು ನೀಡಿದರು.

ಪುರಸಭಾ ಅಧ್ಯಕ್ಷ ಕಾಡಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುಪ್ರದೀಪ್ತ ಯಜಮಾನ್‌, ಜೆಡಿಎಸ್‌ ತಾಲ್ಲೂಕು ಅಧ್ಯಕ್ಷ ಸ.ಬ.ಭಾಸ್ಕರ್, ಎಪಿಎಂಸಿ ಮಾಜಿ ಅಧ್ಯಕ್ಷ ಕವನ್‌ಗೌಡ, ಪುರಸಭಾ ಸದಸ್ಯ ಸಮೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT