ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡಾನೆ ಸಮಸ್ಯೆ: ಹೈಕೋರ್ಟ್‌ ಮೊರೆ

ಸಕಲೇಶಪುರದಲ್ಲಿ ನಡೆದ ಸಭೆಯಲ್ಲಿ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಹೇಳಿಕೆ
Last Updated 13 ಜನವರಿ 2021, 4:22 IST
ಅಕ್ಷರ ಗಾತ್ರ

ಸಕಲೇಶಪುರ: ‘ತಾಲ್ಲೂಕಿನ ಕಾಡಾನೆ ಸಮಸ್ಯೆಯನ್ನು ತಳಹಂತದಿಂದ ಅಧ್ಯಯನ ಮಾಡಿ ಪರಿಹಾರೋಪಾಯ ಕ್ರಮಗಳನ್ನು ಕೈಗೊಳ್ಳಲು ಹಾಗೂ ರೈತರ ದನಿಯಾಗಿ ಸರ್ಕಾರದ ಗಮನ ಸೆಳೆಯಲಾಗುವುದು’ ಎಂದು ನೂತನ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಕೆ.ಎನ್‌. ಬಸವರಾಜು ಹೇಳಿದರು.

ಇಲ್ಲಿಯ ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಶಾಸಕ ಎಚ್‌.ಕೆ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಕಾಡಾನೆ ಹಾಗೂ ಮಾನವ ಸಂಘರ್ಷ ಕುರಿತು ವಿವಿಧ ಸಂಘಟನೆಗಳು, ಕಾಡಾನೆ ಸಮಸ್ಯೆ ಇರುವ ಗ್ರಾಮಗಳ ರೈತರ ಸಭೆಯಲ್ಲಿ ಮಾತನಾಡಿದರು.

‘ಕಾಡಾನೆಗಳು ರೈತರ ಜಮೀನುಗಳಲ್ಲಿಯೇ ವಾಸ್ತವ್ಯ ಹೂಡಿ ಬೆಳೆ, ಆಸ್ತಿ ಹಾಗೂ ಪ್ರಾಣ ಹಾನಿ ಮಾಡುತ್ತಿರುವುದು ತುಂಬಾ ನೋವಿನ ಸಂಗತಿ. ಗಂಭೀರವಾಗಿರುವ ಈ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲು ರೈತರು, ಸಂಘಟನೆಗಳು ಹಾಗೂ ಅರಣ್ಯ ಇಲಾಖೆ ಒಟ್ಟಿಗೆ ಚಿಂತನೆ ಮಾಡುವ ಅಗತ್ಯವಿದೆ’ ಎಂದರು.

‘ತೋಟ, ಗದ್ದೆಗಳಲ್ಲಿ ಕಾಡಾನೆಗಳು ಬೆಳೆ ಜೊತೆ ಪ‍ಂ‍ಪ್ ಸೆಟ್‌ಗಳು, ನೀರು ಹಾಯಿಸುವ ಪೈಪುಗಳನ್ನು ಸಹ ನಾಶ ಮಾಡುತ್ತಿವೆ. ಈ ನಷ್ಟಕ್ಕೂ ವೈಜ್ಞಾನಿಕ ಪರಿಹಾರ ನೀಡುವ ನಿಟ್ಟಿನಲ್ಲಿ ಸರ್ಕಾರಕ್ಕೆ ವರದಿ ಕಳಿಸಲಾಗುವುದು’
ಎಂದರು.

ಶಾಸಕ ಎಚ್‌.ಕೆ. ಕುಮಾರಸ್ವಾಮಿ ಮಾತನಾಡಿ, ‘15 ವರ್ಷಗಳಿಂದ ಈ ಭಾಗದಲ್ಲಿ ಕಾಡಾನೆಗಳ ನಿರಂತರ ದಾಳಿಯಿಂದ ಹತ್ತಾರು ಜೀವ ಹಾನಿಯಾಗಿವೆ. ಅವರ ಕುಟುಂಬಗಳು ಬೀದಿಗೆ ಬಂದಿವೆ. ಹೆತ್ತೂರು, ವಣಗೂರು, ಕಾಡಮನೆ ಭಾಗದಲ್ಲಿ ಕಾಡಾನೆ, ಕಾಟಿ ದಾಳಿಯಿಂದಾಗಿ ಹಲವು ವರ್ಷಗಳಿಂದ ರೈತರು ಭತ್ತ ಬೆಳೆಯುವುದನ್ನೇ ಕೈಬಿಟ್ಟಿದ್ದಾರೆ. ಹಿಂದೆ ಕಾಡಂಚಿನ ಗ್ರಾಮಗಳಲ್ಲಿ ಇದ್ದ ವನ್ಯಜೀವಿ ಸಂಘರ್ಷ ಇದೀಗ ತಾಲ್ಲೂಕು ಕೇಂದ್ರದವರೆಗೂ ವಿಸ್ತರಣೆ ಆಗಿದೆ. ಕಾಡಾನೆಗಳು ಸಕಲೇಶಪುರ ಪಟ್ಟಣಕ್ಕೂ ಬಂದು ಇನ್ನಷ್ಟು ಆತಂಕ ಹೆಚ್ಚಾಗಿದೆ. ಸಮಸ್ಯೆಗೆ ಸರ್ಕಾರ ಈವರೆಗೂ ಸಕಾರಾತ್ಮಕ ಕ್ರಮ ಕೈಗೊಂಡಿಲ್ಲ. ಶಾಶ್ವತ ಪರಿಹಾರಕ್ಕಾಗಿ ಹೈಕೋರ್ಟ್‌ನಲ್ಲಿ ದಾವೆ ಹೂಡುವ ನಿರ್ಧಾರಕ್ಕೆ ಬರಲಾಗಿದೆ’ ಎಂದರು.

ರಾಜ್ಯ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಎಚ್‌.ಟಿ. ಮೋಹನ್‌ ಕುಮಾರ್‌, ಕಾಡಾನೆ ಸಮಸ್ಯೆಯಿಂದ ಮಲೆನಾಡಿನ ರೈತರ ಬದುಕು ಮೂರಾಬಟ್ಟೆಯಾಗಿದೆ. ಅತಿವೃಷ್ಟಿ, ಅನಾವೃಷ್ಟಿ, ರೋಗ ಬಾಧೆ ಜೊತೆಗೆ ಕಾಡಾನೆ ಸಮಸ್ಯೆಯೂ ಸೇರಿಕೊಂಡು ಬದುಕೇ ನಾಶವಾಗುತ್ತಿದೆ’ ಎಂದು ಆತಂಕ ವ್ಯಕ್ತಪಡಿಸಿದರು.

ಎಪಿಎಂಸಿ ಅಧ್ಯಕ್ಷ ಕವನ್‌ಗೌಡ, ಕೆಜಿಎಫ್‌ ಪ್ರಧಾನ ಕಾರ್ಯದರ್ಶಿ ಕೆ.ಬಿ. ಕೃಷ್ಣಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಬಾಳ್ಳು ದಿನೇಶ್‌, ಟಿಎಪಿಸಿಎಂಎಸ್‌ ಅಧ್ಯಕ್ಷ ಕೌಡಹಳ್ಳಿ ಲೋಹಿತ್‌, ಹಲಸುಲಿಗೆ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ವಿ. ನಂದನ್‌, ಸುರೇಶ್ ಆಳ್ವ, ಯುವ ಜನತಾದಳ ಅಧ್ಯಕ್ಷ ಸ.ಬ. ಭಾಸ್ಕರ್, ಬಿಳಿಸಾರೆ ವಿನಯ್‌, ರೋಹಿತ್‌ ಬಾಳ್ಳು, ಕೋಗರವಳ್ಳಿ ಸಂತೋಷ್‌, ಎಚ್‌.ವಿ.ಗಿರೀಶ್‌, ಸುಂಡೇಕೆರೆ ಕುಮಾರ್, ದೇವಾಲದಕೆರೆ ಕೃಷ್ಣೇಗೌಡ ಕಾಡಾನೆ ಸಮಸ್ಯೆ ಬಗ್ಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT