ಗುರುವಾರ , ಸೆಪ್ಟೆಂಬರ್ 23, 2021
25 °C
'ಬರ ನಿರ್ವಹಣೆಗೆ ಅನುದಾನದ ಕೊರತೆ ಇಲ್ಲ'

ಎಲ್ಲಾ ಗ್ರಾಮಗಳಿಗೂ ಶಾಶ್ವತ ಕುಡಿಯುವ ನೀರು: ಸಚಿವ ರೇವಣ್ಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಾಸನ: ಯಾವುದೇ ಲೋಪಗಳಿಲ್ಲದಂತೆ ಬರ ಹಾಗೂ ಅತಿವೃಷ್ಟಿ ನಿರ್ವಹಣೆಗೆ ವ್ಯವಸ್ಥಿತ ಕ್ರಮ ಹಾಗೂ ಮುಂಜಾಗ್ರತೆ ವಹಿಸಬೇಕು ಎಂದು ಸಚಿವ ಎಚ್.ಡಿ ರೇವಣ್ಣ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬರ ನಿರ್ವಹಣೆ ಹಾಗೂ ಮುಂಗಾರು ಸಿದ್ಧತೆ ಬಗ್ಗೆ ಅಧಿಕಾರಿಗಳ ಸಭೆ ನಡೆಸಿದ ಅವರು, ಕುಡಿಯುವ ನೀರಿನ ಅಭಾವ ಎದುರಿಸುತ್ತಿರುವ ಗ್ರಾಮಗಳ ಬಗ್ಗೆ ಹೆಚ್ಚಿನ ನಿಗಾವಹಿಸಬೇಕು. ಬರ ನಿರ್ವಹಣೆಗೆ ಅನುದಾನದ ಕೊರತೆಯಿಲ್ಲ. ಅರಸೀಕೆರೆ ತಾಲ್ಲೂಕು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕಾರ್ಯಾರಂಭ ಮಾಡಿ ಬರದ ಬವಣೆ ನೀಗಿಸಬೇಕಿದೆ ಎಂದು ಹೇಳಿದರು.

ಟ್ಯಾಂಕರ್‌ಗಳಲ್ಲಿ ನೀರು ಪೂರೈಕೆ ಆಗುತ್ತಿರುವ ಅರಸೀಕೆರೆ ಮತ್ತು ಬೇಲೂರು ಗ್ರಾಮಗಳಿಗೆ ಸಮೀಪದ ಜಲಮೂಲ ಹುಡುಕಿ ಶಾಶ್ವತ ಪರಿಹಾರ ಒದಗಿಸಲು ಪ್ರಯತ್ನಿಸಬೇಕು. ಜಿಲ್ಲೆಯಲ್ಲಿ ಕಾವೇರಿ, ಹೇಮಾವತಿ, ಯಗಚಿ, ವಾಟೆಹೊಳೆ ಹರಿಯುತ್ತಿದ್ದರೂ ಸಂಪೂರ್ಣ ನೀರಿನ ಬವಣೆ ತಪ್ಪಿಲ್ಲ. ಜಲಮೂಲಗಳನ್ನು ಬಳಸಿ ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಶಾಶ್ವತ ಕುಡಿಯುವ ನೀರು ಪೂರೈಸುವ ವಿಸ್ತ್ರೃತ ಯೋಜನೆ ಜಾರಿಗೆ ಪ್ರಯತ್ನಿಸಬೇಕು ಎಂದು ಹೇಳಿದರು.

ಹಾಸನ ನಗರದ ಕುಡಿಯುವ ನೀರು ಪೂರೈಕೆ ಉದ್ದೇಶದ ಅಮೃತ್‌ ಯೋಜನೆ ತ್ವರಿತವಾಗಿ ಮುಕ್ತಾಯಗೊಳಿಸಬೇಕು. ಲೋಕೋಪಯೋಗಿ ಇಲಾಖೆ ಮೂಲಕ ಕಾಂಕ್ರೀಟ್ ರಸ್ತೆ ಕಾಮಗಾರಿಗಳು ನಡೆಯುತ್ತಿದ್ದು, ಈಗಲೇ ಪೈಪ್‍ಲೈನ್‍ ಅಳವಡಿಕೆ ಕಾರ್ಯ ಪೂರ್ಣಗೊಳಿಸಿಕೊಳ್ಳುವಂತೆ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಲೂಗಡ್ಡೆ ಬಿತ್ತನೆ ಬೀಜ ವಿತರಣೆಯಲ್ಲಿ ಮುಂಜಾಗ್ರತಾ ಕ್ರಮ ವಹಿಸಬೇಕು, ಶೇಕಡಾ 50 ರಷ್ಟು ಸಬ್ಸಿಡಿ ರೈತರ ಖಾತೆಗೆ ನೇರವಾಗಿ ಜಮೆಯಾಗಬೇಕು. ಮಾರಾಟಗಾರರು ರೈತರಿಗೆ ಬಿಲ್‌ ನೀಡಬೇಕು ಮತ್ತು ಗ್ರಾಮ ಲೆಕ್ಕಿಗಳು ಆಲೂ ಬಿತ್ತನೆ ಮಾಡಿರುವ ಬಗ್ಗೆ ದೃಢೀಕರಣ ನೀಡಬೇಕು ಎಂದು ನಿರ್ದೇಶನ ನೀಡಿದರು.

ಬಿತ್ತನೆ ಬೀಜ, ರಸಗೊಬ್ಬರ ಸಾಕಷ್ಟು ದಾಸ್ತಾನು ಮಾಡಿ, ಅಗತ್ಯವಿದ್ದಾಗ ವಿತರಣೆ ಮಾಡಲು ಜಂಟಿ ಕೃಷಿ ನಿರ್ದೇಶಕರು ಜವಾಬ್ದಾರಿ ವಹಿಸಬೇಕು ಎಂದು ಹೇಳಿದರು.

ಸಕಲೇಶಪುರ-ಮಾಗೇರಿ, ಸೋಮವಾರಪೇಟೆ ರಸ್ತೆ ಪುನರ್ ನಿರ್ಮಾಣವಾಗಬೇಕು. ಮಳೆ ಪ್ರಾರಂಭಕ್ಕೂ ಮುನ್ನ ಅಪಾಯಕಾರಿ ಮಾರ್ಗಗಳನ್ನು ಸರಿಪಡಿಸುವಂತೆ ಲೋಕೋಪಯೋಗಿ ಹಾಗೂ ಪಂಚಾಯತ್‍ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗಳಿಗೆ ಸೂಚಿಸಿದರು.

ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಮುಂಜಾಗ್ರತೆ ವಹಿಸಬೇಕು. ಪಶು ಪಾಲನಾ ಇಲಾಖೆ ಹಾಗೂ ಹಾಸನ ಹಾಲು ಉತ್ಪಾದಕರ ಒಕ್ಕೂಟದ ವತಿಯಿಂದ ಮೇವಿನ ಬೀಜದ ಮಿನಿಕಿಟ್‍ಗಳನ್ನು ವಿತರಿಸಿ ಮೇವು ಉತ್ಪಾದನೆಗೆ ಅಗತ್ಯ ಕ್ರಮ ವಹಿಸಬೇಕು ಎಂದು ಹೇಳಿದರು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರು ಬರ ಹಾಗೂ ಕುಡಿಯುವ ನೀರಿನ ಬಗ್ಗೆ ಪೂರೈಕೆ ಬಗ್ಗೆ ವಿವರಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು