ಹಾಸನ: ರೈತ ಸಂಘಟನೆಗಳು ಸಮಾಜವಾದಿ ಸಿದ್ಧಾಂತದ ಜತೆಗೆ ಗ್ರಾಮ ಸ್ವರಾಜ್ಯದ ಕಲ್ಪನೆ ಇಟ್ಟುಕೊಂಡು ಮುನ್ನಡೆಯಬೇಕಾದ ಅವಶ್ಯಕತೆ ಇದೆ ಎಂದು ಕೃಷಿ ಆರ್ಥಿಕ ತಜ್ಞ ಡಾ. ಟಿ.ಎನ್. ಪ್ರಕಾಶ್ಕಮ್ಮರಡಿ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಬೆಂಗಳೂರಿನ ಸಮಾಜವಾದಿ ಅಧ್ಯಯನ ಕೇಂದ್ರ ಮತ್ತು ಹಸಿರು ಭೂಮಿ ಪ್ರತಿಷ್ಠಾನದ ಆಶ್ರಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಲೋಹಿಯಾ ನೆನಪಿನ ದಿನ, ‘ರೈತ ಚಳವಳಿಗಳು ಗ್ರಾಮ ಸ್ವರಾಜ್ಯದತ್ತ’ ಗಾಂಧಿ, ಜೆಪಿ ಮತ್ತು ಲೋಹಿಯಾ ಚಿಂತನೆಗಳ ಬೆಳಕಿನಲ್ಲಿ ವಿಚಾರ - ಸಂವಾದ - ನಿರ್ಧಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೇಂದ್ರ ಸರ್ಕಾರ ರೈತರ ಜೊತೆ ಯಾವ ಚರ್ಚೆ ಮಾಡದೇ ಕೃಷಿ ಕಾಯ್ದೆ ಜಾರಿಗೊಳಿಸಿದೆ. ಯಾವುದೇ ಕಾಯ್ದೆ ಜಾರಿಗೆ ತರುವ ಮುನ್ನ ಜನರ ಸಹಮತ ಪಡೆದು ಜಾರಿಗೆ ತಂದರೆ ಮಾತ್ರ ಯಶಸ್ವಿಯಾಗುತ್ತದೆ. ರೈತ ಚಳವಳಿಗಳು ಕೇವಲ ಹೋರಾಟಕ್ಕಷ್ಟೆ ಸೀಮಿತವಾಗದೆ ಗ್ರಾಮ ಸ್ವರಾಜ್ಯದ ಕಡೆಯೂ ಗಮನ ಹರಿಸಬೇಕು. ರೈತರ ಸಮಸ್ಯೆ ಜತೆಗೆ ಇಡೀ ಗ್ರಾಮದ ಸಮಸ್ಯೆ ಕುರಿತು ಧ್ವನಿ ಎತ್ತಿದರೆ ರೈತ ಚಳವಳಿಗೆ ನಿಜವಾದ ಅರ್ಥ ಬರುತ್ತದೆ ಎಂದರು.
ರಂಗಕರ್ಮಿ ಪ್ರಸನ್ನ ಮಾತನಾಡಿ,ಉದ್ಯೋಗ ಸೃಷ್ಟಿ ಮಾಡುವ ಸರ್ಕಾರ ಸುಳ್ಳು ಹೇಳುವ ಕೆಲಸ ಮಾಡುತ್ತಿದೆ. ಗ್ರಾಮದಪ್ರತಿಯೊಬ್ಬರಿಗೂ ಪರ್ಯಾಯದ ಉದ್ಯೋಗದ ಅವಶ್ಯಕತೆ ಇದೆ. ಗಾಂಧೀಜಿ ಅವರ ಪ್ರಕಾರ ಪ್ರಾಥಮಿಕ ಶಾಲೆಮಗು ಕೂಡ ತನ್ನ ಶಿಕ್ಷಣಕ್ಕಾಗಿ ದುಡಿಮೆ ಮಾಡಬೇಕು. ಉದ್ಯೋಗ ಖಾತ್ರಿ ಎಂಬುದು ಒಂದು ಕೆಟ್ಟ ಕಾರ್ಯಕ್ರಮ. ಭ್ರಷ್ಟಚಾರದಿಂದ ಕೂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರೈತ ಮುಖಂಡರಾದ ಪ್ರಸನ್ನ ಕೆರಗೂಡು, ಕಾಡಶೆಟ್ಟಿಹಳ್ಳಿ ಸತೀಶ್, ಶಾರದ ಗೋಪಾಲ್,
ರೈತ ಸಂಘದ ಬಡಗಲಪುರ ನಾಗೇಂದ್ರ, ಕೆ.ಟಿ. ಗಂಗಾಧರ್, ತೇಜಸ್ವಿ ಪಟೇಲ್, ಸಾಹಿತಿ ರೂಪ ಹಾಸನ, ಸ್ವಾಮೀಗೌಡ, ಕಣಗಾಲ್ ಮೂರ್ತಿ, ಶಾಂತಿ ಗ್ರಾಮದ ಸುರೇಶ್ ಬಾಬು, ಅರಸು, ವೆಂಕಟೇಶ್ ಮೂರ್ತಿ, ಮಂಜುನಾಥ್ ದತ್ತ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.