ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಕಲೇಶಪುರ: ಪಿಂಚಣಿಗಾಗಿ ಮಾಜಿ ಶಾಸಕರ ಪತ್ನಿ ಪರದಾಟ

ಅಧಿಕಾರಿಗಳ ತಪ್ಪಿನಿಂದ 25 ತಿಂಗಳಾದರೂ ಜಮೆಯಾಗದ ಹಣ
Last Updated 6 ಫೆಬ್ರುವರಿ 2023, 7:17 IST
ಅಕ್ಷರ ಗಾತ್ರ

ಸಕಲೇಶಪುರ: ಇಲ್ಲಿಯ ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದ ಜೆ.ಡಿ. ಸೋಮಪ್ಪ ಪತ್ನಿಗೆ ನೀಡುವ ಪಿಂಚಣಿಯನ್ನು 25 ತಿಂಗಳಿಂದ ತಡೆ ಹಿಡಿಯಲಾಗಿದ್ದು, ವಿವಿಧ ಕಾಯಿಲೆಗಳಿಂದ ನರಳುತ್ತಿರುವ ಇವರ ಚಿಕಿತ್ಸೆಗೆ ಆರ್ಥಿಕ ಸಮಸ್ಯೆ ಉಂಟಾಗಿದೆ.

ಬೆನ್ನುಹುರಿ ಶಸ್ತ್ರಚಿಕಿತ್ಸೆಗೆ ಇವರೆಗೆ ಸುಮಾರು ₹ 7 ಲಕ್ಷ ಖರ್ಚಾಗಿದ್ದು, ಈ ಹಣವನ್ನೂ ಸರ್ಕಾರ ನಾಲ್ಕು ವರ್ಷಗಳಿಂದ ನೀಡದೇ ನಿರ್ಲಕ್ಷಿಸಿದೆ. ಪಟ್ಟಣದ ಲಕ್ಷ್ಮಿಪುರ ಬಡಾವಣೆಯಲ್ಲಿ ವಾಸವಿರುವ ಜೆ.ಡಿ. ಸೋಮಪ್ಪ ಪತ್ನಿ, 79 ವರ್ಷದ ಜಯಮ್ಮ ಎದ್ದು ನಡೆದಾಡುವುದಕ್ಕೂ ಸಾಧ್ಯವಾಗುತ್ತಿಲ್ಲ.

ಮನೆ, ಆಸ್ತಿ ಮಾರಿ ರಾಜಕಾರಣ ಮಾಡಿದ್ರು: ‘ನಾನು ಎದುರಿಸುತ್ತಿರುವ ಸಮಸ್ಯೆ ಹೇಳಿಕೊಳ್ಳುವುದಕ್ಕೆ ನೋವಾಗುತ್ತದೆ. ಆಲೂರು–ಸಕಲೇಶಪುರ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ರು. ಪುರಸಭೆ ಅಧ್ಯಕ್ಷರಾಗಿದ್ರು. ಅವರು ಶಾಸಕರಾಗಿದ್ದಾಗ ಒಂದು ಹೆಂಚಿನ ಮನೆಯಲ್ಲಿ ಬಾಡಿಗೆಗೆ ಇದ್ವಿ. ಮನೆ ಆಸ್ತಿ ಮಾರಾಟ ಮಾಡಿ ರಾಜಕಾರಣ ಮಾಡಿದ್ರು’ ಎಂದು ಜಯಮ್ಮ ಹೇಳುತ್ತಾರೆ.

‘ಬೆಂಗಳೂರಿಗೆ ಬಸ್‌ನಲ್ಲೇ ಹೋಗಿ ಬರ್ತಾ ಇದ್ರು. ಜನರಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ರೆ, ಹೊರತು ಆಸ್ತಿ ಮಾಡಲಿಲ್ಲ. ಆ ಬಗ್ಗೆ ನನಗೇನು ಬೇಸರ ಇಲ್ಲ. ಅವರ ಪಿಂಚಣಿ ಹಣದಲ್ಲಿ ಬದುಕುತ್ತಿದ್ದೇನೆ. ಆದರೆ 2021ರ ಜನವರಿಯಿಂದ ಪಿಂಚಣಿ ನಿಲ್ಲಿಸಿರುವುದರಿಂದ ಆಸ್ಪತ್ರೆ ಹಾಗೂ ಇತರ ವೆಚ್ಚಕ್ಕಾಗಿ ಸಂಬಂಧಿಕರ ಬಳಿ ಸಾಲ ಮಾಡಿದ್ದೇನೆ. ಕೈಯಲ್ಲಿ ಒಂದು ರೂಪಾಯಿ ದುಡ್ಡಿಲ್ಲ’ ಎಂದು ನೊಂದು ನುಡಿದರು.

‘ಪಿಂಚಣಿ ಹಣ ಕೆನರಾ ಬ್ಯಾಂಕ್‌ ಖಾತೆಗೆ ಬರುತ್ತಿತ್ತು. ಬ್ಯಾಂಕ್‌, ಖಜಾನೆ ಇಲಾಖೆ, ವಿಧಾನಸೌಧ ಸುತ್ತಾಡಿ ಸುಸ್ತಾಗಿದ್ದೇನೆ. ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಸಹ ಅಧಿಕಾರಿಗಳಿಗೆ ಪೋನ್‌ ಮಾಡಿ ತಡೆ ಹಿಡಿದಿರುವ ಪಿಂಚಣಿ ಕೂಡಲೇ ಬಿಡುಗಡೆ ಮಾಡಬೇಕು ಎಂದು ಸೂಚನೆ ನೀಡಿದ್ದರು. ಆದರೂ ಅಧಿಕಾರಿಗಳು ಸತಾಯಿಸುತ್ತಿದ್ದಾರೆ. ನನಗೆ ಯಾರೂ ಸಹಾಯ ಮಾಡೋರಿಲ್ಲ. ತುಂಬಾ ಕಷ್ಟವಾಗಿದೆ’ ಎಂದು ಭಾವುಕರಾಗಿ ‘ಪ್ರಜಾವಾಣಿ’ ಜೊತೆ ತಮ್ಮ ನೋವು ತೋಡಿಕೊಂಡರು.

‘ಈ ಬಗ್ಗೆ ನಾನೂ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯೊಂದಿಗೆ ಈಗಾಗಲೇ ಮಾತನಾಡಿದ್ದೇನೆ. ತಾಂತ್ರಿಕ ಕಾರಣಗಳನ್ನು ಹೇಳಿಕೊಂಡು ಇಷ್ಟೊಂದು ತಡ ಮಾಡಿದ್ದು ಸರಿಯಲ್ಲ. ಮಾಜಿ ಶಾಸಕ ಜೆ.ಡಿ. ಸೋಮಪ್ಪ ಅವರು ನನಗೆ ಗುರುಗಳಿದ್ದಂತೆ. ಅವರ ಕೊಡುಗೆ ನಮ್ಮ ಕ್ಷೇತ್ರಕ್ಕೆ ಸಾಕಷ್ಟಿದೆ. ಇವತ್ತಿನ ರಾಜಕಾರಣಿಗಳು ಅವರಿಂದ ಕಲಿಯುವುದು ಬಹಳಷ್ಟಿದೆ. ಪಿಂಚಣಿ ತಡೆಹಿಡಿದಿರುವ ವಿಷಯದಲ್ಲಿ ನಾನು ಅವರಿಗೆ ಸಹಾಯ ಮಾಡುತ್ತೇನೆ’ ಎಂದು ಮಾಜಿ ಶಾಸಕ ಎಚ್‌.ಎಂ. ವಿಶ್ವನಾಥ ತಿಳಿಸಿದ್ದಾರೆ.

ಅಧಿಕಾರಿಗಳ ತಪ್ಪಿನಿಂದ ಅಮ್ಮನಿಗೆ ಬರೆ

‘2018 ರಿಂದ 2020ರ ನಡುವೆ ಸರ್ಕಾರ ನಿಗದಿಗೊಳಿಸಿರುವ ಪಿಂಚಣಿ ಮೊತ್ತಕ್ಕಿಂತ ಪ್ರತಿ ತಿಂಗಳು ₹ 10 ರಿಂದ ₹ 11 ಸಾವಿರದಷ್ಟು ಹೆಚ್ಚುವರಿ ಹಣವನ್ನು ಅಧಿಕಾರಿಗಳು ಬ್ಯಾಂಕ್ ಖಾತೆಗೆ ಜಮಾ ಮಾಡಿದ್ದಾರೆ. ಅದೇ ಸಮಯದಲ್ಲಿ ಅಮ್ಮ ಸ್ಪೈನಲ್‌ ಕಾರ್ಡ್‌ ಚಿಕಿತ್ಸೆಗಾಗಿ ವರ್ಷವೆಲ್ಲಾ ಬೆಂಗಳೂರಿನ ಆಸ್ಪತ್ರೆ, ವಿಶ್ರಾಂತಿಯಲ್ಲಿಯೇ ಇದ್ದರು. ಅವರಿಗೂ ಆ ಬಗ್ಗೆ ಅಷ್ಟಾಗಿ ಗೊತ್ತಾಗಿಲ್ಲ. 2021ರ ಜನವರಿಯಿಂದ ಪಿಂಚಣಿಯನ್ನು ಸಂಪೂರ್ಣ ತಡೆಹಿಡಿದಿದ್ದಾರೆ’ ಎಂದು ಸೋಮಪ್ಪ ಅವರ ಪುತ್ರ ಹೇಮಂತಕುಮಾರ್‌ ಜೆ.ಡಿ. ತಿಳಿಸಿದರು.

‘ಅದು ಅಧಿಕಾರಿಗಳ ಕಣ್ತಪ್ಪಿನಿಂದ ಆಗಿರುವ ತಾಂತ್ರಿಕ ದೋಷ. 25 ತಿಂಗಳಿಂದ ಸುಮಾರು ₹ 7.5 ಲಕ್ಷಕ್ಕೂ ಹೆಚ್ಚು ಪಿಂಚಣಿ ಹಣ ಬರಬೇಕು. ಇವರ ಖಾತೆಗೆ ಹಾಕಿರುವ ಹೆಚ್ಚುವರಿ ಕಳೆದರೂ ಇನ್ನೂ ಸುಮಾರು ₹ 2 ಲಕ್ಷ ಬಾಕಿ ಬರಬೇಕಿದೆ. ತಪ್ಪು ಮಾಡಿರುವ ಅಧಿಕಾರಿಗಳ ಬಗ್ಗೆ ಸರ್ಕಾರ ತನಿಖೆ ನಡೆಸಲಿ. ಇಲಾಖೆ ಅಧಿಕಾರಿಗಳು ಮಾಡಿರುವ ತಪ್ಪಿಗೆ, ಹಾಸಿಗೆ ಹಿಡಿದಿರುವ ಅಮ್ಮನಿಗೆ ಸಮಸ್ಯೆ ಉಂಟಾಗಿದೆ. ಸರ್ಕಾರ ಕೂಡಲೆ ತಡೆಹಿಡಿದಿರುವ ಪಿಂಚಣಿ ಹಣ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT