ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‌ಜಮೀನು ಕಬಳಿಸಲು ನಕಲಿ ದಾಖಲೆ ಸೃಷ್ಟಿ

ವಿಶೇಷ ಭೂ ಸ್ವಾಧೀನಾಧಿಕಾರಿ, ಡಿವೈಎಸ್‌ಪಿ ವಿರುದ್ಧ ಆರೋಪ
Last Updated 23 ಫೆಬ್ರುವರಿ 2021, 14:12 IST
ಅಕ್ಷರ ಗಾತ್ರ

ಹಾಸನ: ‘ಮಾಜಿ ಸೈನಿಕರ ಕೋಟಾದಡಿ ಸರ್ಕಾರದ ಜಮೀನು ಪಡೆಯಲುನಕಲಿ ದಾಖಲೆ ಸೃಷ್ಟಿಸಿ ಜಿಲ್ಲಾಡಳಿತಕ್ಕೆ ಮೋಸ ಮಾಡಿರುವಜಿಲ್ಲೆಯ ಇಬ್ಬರು ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು’ ಎಂದು ಮಲೆನಾಡು ಮೂಲ ನಿವಾಸಿಗಳ ಹೋರಾಟ ಸಮಿತಿ ಅಧ್ಯಕ್ಷ ಅಣ್ಣೇಗೌಡ ಆಗ್ರಹಿಸಿದರು.

‘ಹಾಸನ ವಿಶೇಷ ಭೂ ಸ್ವಾಧೀನಾಧಿಕಾರಿ ಮಂಜುನಾಥ್ ಹಾಗೂ ಸಕಲೇಶಪುರ ಡಿವೈಎಸ್ಪಿ ಬಿ.ಆರ್. ಗೋಪಿ
ನಕಲಿ ದಾಖಲೆ ಸೃಷ್ಟಿಸಿ ಜಮೀನು ಮಂಜೂರು ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಜಿಲ್ಲಾಧಿಕಾರಿ ಸಹಿ ಬಳಿಕ
ಜಮೀನು ಅವರ ಹೆಸರಿಗೆ ಖಾತೆಯಾಗಲಿದ್ದು, ಸೂಕ್ಷ್ಮಪರಿಶೀಲನೆ ಮೂಲಕ ಇಬ್ಬರ ಮನವಿ ತಿರಸ್ಕರಿಸಬೇಕು.
ಇಲ್ಲವಾದರೆ ಕಾನೂನು ಹೋರಾಟ ಪ್ರಾರಂಭಿಸುತ್ತೇನೆ’ ಎಂದು ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಎಚ್ಚರಿಕೆ
ನೀಡಿದರು.

‘2011 ರಿಂದ ಜಿಲ್ಲಾದಾದ್ಯಂತ ಸರ್ಕಾರದಿಂದ ಜಮೀನು ಕೋರಿ 118 ಮಾಜಿ ಸೈನಿಕರು ಅರ್ಜಿ
ಸಲ್ಲಿಸಿದ್ದಾರೆ. ಇದುವರೆಗೆ 30 ಜನರಿಗೆ ಮಾತ್ರ ಭೂಮಿ ದೊರೆತಿದೆ. 2018ರಲ್ಲಿ ಅರ್ಜಿ ಸಲ್ಲಿಸಿದ ಈ ಇಬ್ಬರಿಗೆ
ಜಮೀನು ನೀಡಲು ನಿರ್ಧರಿಸಿರುವುದು ಸರಿಯಲ್ಲ. ಸಕಲೇಶಪುರ ತಹಶೀಲ್ದಾರ್ ಆಗಿದ್ದ ಮಂಜುನಾಥ್
ಬಾಚೀಹಳ್ಳಿ ಗ್ರಾಮದ ಸರ್ವೇ ನಂ. 51 ರಲ್ಲಿ 2 ಎಕರೆ ಜಮೀನು ಪಡೆಯಲು ಮುಂದಾಗಿದ್ದಾರೆ. ಸರ್ವೇ
ಅಧಿಕಾರಿಗಳನ್ನು ತಮ್ಮ ಬಲೆಗೆ ಬೀಳಿಸಿಕೊಂಡು ತಹಶೀಲ್ದಾರ್ ಆಗಿ ತಾವೇ ದಾಖಲೆಗಳಿಗೆ ಸಹಿ ಹಾಕಿದ್ದಾರೆ.
ಸಕಲೇಶಪುರ ಉಪವಿಭಾಗಾಧಿಕಾರಿ ಸುದೀರ್ಘ ರಜೆಯಲ್ಲಿದ್ದಾಗ ಹೆಚ್ಚುವರಿಯಾಗಿ ಆ ಸ್ಥಾನದಲ್ಲಿದ್ದ
ಸಂದರ್ಭದಲ್ಲಿಯೂ ತಾವೇ ಸಹಿ ಹಾಕಿಕೊಂಡಿದ್ದಾರೆ’ ಎಂದರು.

‘ಮಾಜಿ ಸೈನಿಕ ಸರ್ಕಾರಿ ಲಾಭ ಪಡೆಯಬೇಕೆಂದರೆ ಮೇಲಧಿಕಾರಿಗಳಿಗೆ ಮಾಹಿತಿ ತಿಳಿಸಬೇಕು. ವಾರ್ಷಿಕ
ಇವರ ಆದಾಯ ₹8 ಲಕ್ಷ ಕ್ಕಿಂತ ಕಡಿಮೆ ಇರಬೇಕು. ಭೂಮಿಗಾಗಿ ಆದಾಯ ಪ್ರಮಾಣ ಪತ್ರವನ್ನು ₹5.95
ಲಕ್ಷ ಮಾಡಿಕೊಂಡಿರುವ ಮಂಜುನಾಥ್ ತಮ್ಮ ಆಸ್ತಿಯ ವಿವರ ಮುಚ್ಚಿಟ್ಟಿದ್ದಾರೆ. ಸ್ಥಳೀಯ ಮಾಜಿ ಸೈನಿಕರಿಗೆ
ಆದ್ಯತೆ ಮೇರೆಗೆ ಮೊದಲು ನೀಡಿ ನಂತರ ಹೊರ ಜಿಲ್ಲೆಯರಿಗೆ ಕೊಡಬೇಕಾಗುತ್ತದೆ. ತುಮಕೂರು ಜಿಲ್ಲೆಯ
ಅಧಿಕಾರಿ ಹಾಸನ ಜಿಲ್ಲೆಯಲ್ಲಿ ಭೂಮಿ ಪಡೆಯಲು ಹೇಗೆ ಅರ್ಹರಾಗುತ್ತಾರೆ’ ಎಂದು ಪ್ರಶ್ನಿಸಿದರು.

‘ಬಾಚಿಹಳ್ಳಿ ಗ್ರಾಮದಲ್ಲಿ ರೆಸಾರ್ಟ್ ನಿರ್ಮಿಸಿ ಹಣ ಸಂಪಾದನೆಗೆ ಮುಂದಾಗಿರುವ ಮಂಜುನಾಥ್ ಅವರಿಗೆ
ಅನುಕೂಲ ಮಾಡಿಕೊಡುವುದು ಸರಿಯಲ್ಲ’ ಎಂದು ಪ್ರತಿಪಾದಿಸಿದರು.

‘ಮತ್ತೊಬ್ಬ ಮಾಜಿ ಸೈನಿಕ ಸಕಲೇಶಪುರ ಡಿವೈಎಸ್ಪಿ ಬಿ.ಆರ್. ಗೋಪಿ ಸಹ ತಾಲ್ಲೂಕಿನ ಮಕ್ಕಿಹಳ್ಳಿ ಗ್ರಾಮದ
ಸರ್ವೇ ನಂ. 12/1 ರಲ್ಲಿ 3 ಎಕರೆ ಜಮೀನು ಮಂಜೂರು ಮಾಡಿಸಿಕೊಳ್ಳಲು ಮುಂದಾಗಿದ್ದಾರೆ. ಅರ್ಜಿದಾರರ
ವಾರ್ಷಿಕ ಆದಾಯ ₹7.49 ಲಕ್ಷ ಎಂದು ದಾಖಲೆಗಳ ಸಲ್ಲಿಸಿದ್ದಾರೆ. ಆದರೆ ವಾಸ್ತವವಾಗಿ ಅವರ ಆದಾಯ
ಹೆಚ್ಚಿದೆ’ ಎಂದರು.

ಈ ಇಬ್ಬರು ಅಧಿಕಾರಿಗಳು ನಡೆಸುತ್ತಿರುವ ಅಕ್ರಮದ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು.
ಭೂಮಿ ಮಂಜೂರಾತಿ ಪ್ರಕ್ರಿಯೆಗೆ ತಡೆ ನೀಡದಿದ್ದರೆ ಕಾನೂನು ಹೋರಾಟ ಕೈಗೊಳ್ಳಲಾಗುವುದು ಎಂದು
ಹೇಳಿದರು.

ಗೋಷ್ಠಿಯಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ವಳಲಹಳ್ಳಿ ವಿರೇಶ್, ಹಸಿರು ಸೇನೆ ರಾಜ್ಯ
ಸಂಚಾಲಕ ಎಸ್. ಮೊಹಮ್ಮದ್ ಸಾದಿಕ್, ನಾಗರಾಜ್ ಜೋ. ಕೃಷ್ಣಾಪುರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT