ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ಉತ್ಪನ್ನ ಮಾರಾಟಕ್ಕೆ ಸಮಸ್ಯೆ, ಸಂಕಷ್ಟದಲ್ಲಿ ರೈತರು

ತೋಟಗಳಲ್ಲೇ ಕೊಳೆಯುತ್ತಿದೆ ಬೆಳೆ
Last Updated 8 ಏಪ್ರಿಲ್ 2020, 16:14 IST
ಅಕ್ಷರ ಗಾತ್ರ

ಹೆತ್ತೂರು: ಲಾಕ್‌ಡೌನ್‌ನಿಂದಾಗಿ ಕೃಷಿ ಉತ್ಪನ್ನಗಳನ್ನು ಸಾಗಿಸಲು ಸಾಧ್ಯವಾಗದೆ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೃಷಿ ಕಾರ್ಮಿಕರ ಕೊರತೆಯಿಂದಾಗಿಯೂ ತೊಂದರೆಗೆ ಸಿಲುಕಿದ್ದಾರೆ.

ಈ ಭಾಗದಲ್ಲಿ ಕಾಫಿ, ಏಲಕ್ಕಿ, ಮೆಣಸು, ಹಸಿಮೆಣಸಿನ ಕಾಯಿ ಹೆಚ್ಚಾಗಿ ಬೆಳೆಯುತ್ತಾರೆ. ಬೀನ್ಸ್‌, ಅನಾನಸ್‌, ಸಪೋಟವನ್ನೂ ಬೆಳೆಯುತ್ತಾರೆ. ಆದರೆ, ಇವುಗಳನ್ನು ಮಾರುಕಟ್ಟೆಗೆ ಕೊಂಡೊಯ್ಯಲು ಬಸ್‌ ಹಾಗೂ ವಾಹನ ಸೌಲಭ್ಯ ಇಲ್ಲ. ಅಲ್ಲದೆ, ಕಾಫಿ, ಏಲಕ್ಕಿ, ಮೆಣಸು ಖರೀದಿಸಲು ವ್ಯಾಪಾರಿಗಳು ಬರುತ್ತಿಲ್ಲ. ಕೆಲ ಮಧ್ಯವರ್ತಿಗಳು ಇದರ ಲಾಭ ಪಡೆಯುತ್ತಿದ್ದಾರೆ.

‘ಸೊಪ್ಪು ಮತ್ತು ಬೀನ್ಸ್ ಬೆಳೆದಿದ್ದೇವೆ. ವಣಗೂರು, ಹೆತ್ತೂರು, ಸಕಲೇಶಪುರಕ್ಕೆ ಸಾಗಿಸಿ ಮಾರಾಟ ಮಾಡುತ್ತಿದ್ದೆವು. ಈಗ ವಾಹನ ಸಂಚಾರ ಸ್ತಬ್ಧವಾಗಿರುವುದರಿಂದ ಮಾರುಕಟ್ಟೆಗೆ ಒಯ್ಯುಲು ಸಮಸ್ಯೆಯಾಗಿದೆ’ ಎಂದು ಬಿಸ್ಲೆ ಗ್ರಾಮ ರೈತ ಮಹಿಳೆ ಮಲ್ಲಮ್ಮ ಅಳಲು ತೋಡಿಕೊಂಡರು.

‘‌ಅನಾನಸ್, ಸಪೋಟ ಹಣ್ಣನ್ನು ಮಾರುಕಟ್ಟೆಗೆ ಸಾಗಿಸಲು ಸಾಧ್ಯವಾಗಿಲ್ಲ. ವ್ಯಾಪಾರಸ್ಥರು ಖರೀದಿಗೆ ಬರುತ್ತಿಲ್ಲ. ಹೀಗಾಗಿ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಮಳೆಗಾಲ ಪ್ರಾರಂಭವಾಗುವ ಮುನ್ನವೇ ಜಮೀನುಗಳಿಗೆ ಕೊಟ್ಟಿಗೆ ಗೊಬ್ಬರ ಹಾಕಬೇಕು. ಆದರೆ, ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ. ಇದರಿಂದ ಸಮಸ್ಯೆ ಆಗಿದೆ’ ಎಂದು ತಾಲ್ಲೂಕು ಯುವ ರೈತ ಸಂಘದ ಅಧ್ಯಕ್ಷ ಡಿಲಾಕ್ಸ್ ತಿಳಿಸಿದರು.

ಹೊರರಾಜ್ಯ ಜಿಲ್ಲೆಗಳಿಂದ ಕೂಲಿಗಾಗಿ ಕಾಫಿ ನಾಡಿಗೆ ಬಂದಿದ್ದ ಕಾರ್ಮಿಕರು ಊರುಗಳಿಗೆ ತೆರಳಿದ್ದಾರೆ. ಇದರಿಂದ ಕಾಫಿ ತೋಟಗಳಲ್ಲಿ ಕೆಲಸ ಕಾರ್ಯ ಸ್ಥಗಿತಗೊಂಡಿದೆ ಎಂದು ಹೋಬಳಿ ಬೆಳಗಾರರ ಸಂಘದ ಅಧ್ಯಕ್ಷ ಎಂ.ಜೆ.ಸಚಿನ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT