ಜಾವಗಲ್: ಗ್ರಾಮದಲ್ಲಿ ಕಳೆದೊಂದು ವಾರದಿಂದ ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗಳು ಗರಿಗೆದರಿವೆ. ರಾಗಿ ಬಿತ್ತನೆ ಬೀಜಕ್ಕೆ ಭಾರಿ ಬೇಡಿಕೆ ಉಂಟಾಗಿದೆ. ರೈತರು ಬೆಳಿಗ್ಗೆಯಿಂದಲೇ ಗ್ರಾಮದ ರೈತ ಸಂಪರ್ಕ ಕೇಂದ್ರದ ಮುಂದೆ ಸರತಿ ಸಾಲಿನಲ್ಲಿ ನಿಂತು ರಾಗಿ ಬಿತ್ತನೆ ಬೀಜಗಳನ್ನು ಖರೀದಿ ಮಾಡುತ್ತಿದ್ದಾರೆ.
ರೈತ ಸಂಪರ್ಕ ಕೇಂದ್ರದ ಮೂಲಕ ಹೋಬಳಿಯಲ್ಲಿ ಇಲ್ಲಿಯವರೆಗೂ 46 ಟನ್ ರಾಗಿ ಬಿತ್ತನೆ ಬೀಜವನ್ನು ವಿತರಿಸಲಾಗಿದ್ದು, ಎಲ್ಲ ವರ್ಗದ ರೈತರಿಗೂ ರಾಗಿ ಬಿತ್ತನೆ ಬೀಜಗಳ ಮೇಲೆ ಸಹಾಯಧನ ದೊರೆಯುತ್ತಿದೆ. ಇದರಿಂದಾಗಿ ರೈತರು ರಾಗಿ ಬಿತ್ತನೆಗೆ ಆಸಕ್ತಿ ತೋರುತ್ತಿದ್ದಾರೆ.
ಈಗಾಗಲೇ ಬಿತ್ತನೆ ಮಾಡಿರುವ ಮುಸುಕಿನ ಜೋಳ, ಅಲಸಂದೆ, ಉದ್ದು, ಮೊದಲಾದ ಬೆಳೆಗಳಿಗೆ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿದ್ದು, ಈ ತೇವಾಂಶ ಶಮನಕ್ಕೆ ಯೂರಿಯ ಗೊಬ್ಬರ ಅಗತ್ಯವೆಂಬುದು ರೈತರ ನಂಬಿಕೆ. ಹೀಗಾಗಿ ಯೂರಿಯ ಖರೀದಿಗೆ ರೈತರು ಗೊಬ್ಬರದ ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ.
ಆದರೆ, ಗ್ರಾಮದಲ್ಲಿ ಮಾತ್ರ ಯೂರಿಯಾ ಗೊಬ್ಬರವನ್ನು ಪಡೆಯಬೇಕಾದರೆ ಯೂರಿಯಾ ಜೊತೆಗೆ ಮತ್ತೊಂದು ಗೊಬ್ಬರವನ್ನು ಖರೀದಿ ಮಾಡಬೇಕೆಂಬ ನಿಯಮವನ್ನು ಕೆಲ ಗೊಬ್ಬರದ ಅಂಗಡಿ ಮಾಲೀಕರು ಮಾಡುತ್ತಿದ್ದಾರೆ. ಇದರಿಂದಾಗಿ ರೈತರು ತಮಗೆ ಅಗತ್ಯವಿಲ್ಲದಿದ್ದರೂ ಕೂಡ ಯೂರಿಯ ಪಡೆಯುವುದಕ್ಕಾಗಿ ಮತ್ತೊಂದು ಗೊಬ್ಬರವನ್ನು ಖರೀದಿ ಮಾಡುವ ಅನಿವಾರ್ಯತೆ ನಿರ್ಮಾಣವಾಗಿದೆ. ಗೊಬ್ಬರದ ಅಂಗಡಿ ಮಾಲೀಕರ ಈ ನಿಯಮ ರೈತರಿಗೆ ಹೊರೆಯಾಗಿ ಪರಿಣಮಿಸಿದೆ.
ಯೂರಿಯಾ ಗೊಬ್ಬರದ ಬೆಲೆಯು ₹ 300 ಇದ್ದು, ಈ ಗೊಬ್ಬರವನ್ನು ಪಡೆದುಕೊಳ್ಳಬೇಕಾದರೆ ಇದರ ಜೊತೆಗೆ 20-20 ಎಂಬ ₹ 1,200 ಮತ್ತೊಂದು ಗೊಬ್ಬರವನ್ನು ಖರೀದಿ ಮಾಡುವಂತೆ ಅಂಗಡಿ ಮಾಲೀಕರು ನಿಯಮ ಮಾಡಿದ್ದಾರೆ ಎಂದು ಗ್ರಾಮದ ರೈತ ನಾಗರಾಜ್ ಹೇಳಿದರು.
ಇದರಿಂದ ಸಣ್ಣ ಪ್ರಮಾಣದ ಇಳುವಳಿದಾರರಿಗೆ ತೀವ್ರ ತೊಂದರೆ ಉಂಟಾಗುತ್ತಿದ್ದು ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದರು.
ಗ್ರಾಮದ ಕೆಲ ಅಂಗಡಿ ಮಾಲೀಕರು ಪ್ರತ್ಯೇಕವಾಗಿ ಯೂರಿಯಾ ನೀಡಲು ನಿರಾಕರಿಸುತ್ತಿದ್ದು ಯೂರಿಯಾ ಬೇಕೆಂದಲ್ಲಿ ಇದರ ಜೊತೆಗೆ 20-20 ಗೊಬ್ಬರವನ್ನು ಕೊಂಡುಕೊಳ್ಳುವಂತೆ ತಿಳಿಸುತ್ತಿದ್ದಾರೆ.ನಾಗರಾಜ್ ಗ್ರಾಮದ ರೈತ
ಹೋಬಳಿಯಲ್ಲಿ 76 ಟನ್ ಯೂರಿಯಾ ದಾಸ್ತಾನಿದ್ದು ರೈತರ ಅಗತ್ಯತೆಗೆ ತಕ್ಕಂತೆ ವಿತರಣೆ ಮಾಡಲು ಅಂಗಡಿ ಮಾಲೀಕರಿಗೆ ತಿಳಿಸಿದ್ದೇವೆ. ತಪ್ಪಿದಲ್ಲಿ ಸೂಕ್ರ ಕ್ರಮ ಕೈಗೊಳ್ಳಲಾಗುವುದು.ಸುಬ್ರಹ್ಮಣ್ಯ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.