ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ರಕ್‌ ಟರ್ಮಿನಲ್‌ ನಿಲ್ಲಿಸದಿದ್ದರೆ ಹೋರಾಟ: ಶಾಸಕ ಎಚ್‌.ಡಿ. ರೇವಣ್ಣ ಎಚ್ಚರಿಕೆ

‘ಜಿಲ್ಲೆಯಲ್ಲಿ ಅಶಾಂತಿ ಉಂಟಾದರೆ ಜಿಲ್ಲಾಡಳಿತವೇ ಹೊಣೆ’
Last Updated 25 ಏಪ್ರಿಲ್ 2022, 4:02 IST
ಅಕ್ಷರ ಗಾತ್ರ

ಹಾಸನ: ‘ಹೇಮಗಂಗೋತ್ರಿ ಸಮೀಪ ಜನರ ವಿರೋಧದ ನಡುವೆಯೂ ಟ್ರಕ್‌ ಟರ್ಮಿನಲ್‌ ನಿರ್ಮಿಸುವುದು ಬೇಡ. ಒಂದು ವೇಳೆ ಪೊಲೀಸ್‌ ಬಂದೋಬಸ್ತ್‌ನಲ್ಲಿ ಕಾಮಗಾರಿಮಾಡಲು ಮುಂದಾದರೆ ನಾನೇ ಮುಂದೆ ನಿಂತು ಹೋರಾಟ ಮಾಡುತ್ತೇನೆ’ ಎಂದು ಶಾಸಕ ಎಚ್‌.ಡಿ.ರೇವಣ್ಣ ಎಚ್ಚರಿಕೆ ನೀಡಿದರು.

‘ಟ್ರಕ್‌ ಟರ್ಮಿನಲ್‌ ನಿರ್ಮಾಣಕ್ಕೆ ದೊಡ್ಡಗೇಣಿಗೆರೆ ಗ್ರಾಮ ಪಂಚಾಯಿತಿ ಯಿಂದ ಅನುಮತಿಯನ್ನೇ ಪಡೆದಿಲ್ಲ. ಒಂದು ವೇಳೆ ಒತ್ತಡ ಹಾಕಿ ಅನುಮತಿ ಪಡೆದರೆ ಮುಂದೆ ಪರಿಣಾಮ ಎದುರಿಸಬೇಕಾಗುತ್ತದೆ. ಕಾಮಗಾರಿ ನಿಲ್ಲಿಸುವುದಾಗಿ ಜಿಲ್ಲಾಧಿಕಾರಿ ಈಗಾಗಲೇ ಹೇಳಿದ್ದಾರೆ’ ಎಂದು ಭಾನು ವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಟ್ರಕ್‌ ಟರ್ಮಿನಲ್‌ ನಿರ್ಮಿಸಲು ಉದ್ದೇಶಿಸಿರುವ ಜಾಗದ ಸಮೀಪವೇ ಹೇಮಗಂಗೋತ್ರಿ ಮಹಿಳಾ ವಿದ್ಯಾರ್ಥಿನಿಲಯ ಇದೆ. ಹೀಗಾಗಿ, ಟ್ರಕ್‌ ಟರ್ಮಿನಲ್ ಬೇರೆಡೆಗೆ ಸ್ಥಳಾಂತರ ಮಾಡಲಿ. ಒಂದು ವೇಳೆ ಅಲ್ಲಿಯೇ ಮಾಡುವುದಾದರೆ ನಾನೇ ಜನ ಸೇರಿಸಿ ಹೋರಾಟ ಮಾಡುತ್ತೇನೆ. ಮುಂದೆ ನಿಲ್ಲುತ್ತೇನೆ. ಪೊಲೀಸರು ಬೇಕಾದರೆ ನನಗೆ ಗುಂಡು ಹಾರಿಸಲಿ. ಹಿಂದೆ ನಡೆದ ದೊಡ್ಡಳ್ಳಿ ಗೋಲಿಬಾರ್‌ ಘಟನೆ ಯಾರೂ ಮರೆತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳು ಜಿಲ್ಲೆಯಲ್ಲಿ ಶಾಂತಿ ಕದಡದಂತೆ ಕರ್ತವ್ಯ ನಿರ್ವಹಿಸಬೇಕು’ ಎಂದು ರೇವಣ್ಣ ಆಗ್ರಹಿಸಿದರು.

‘ಹಾಸನ ತಾಲ್ಲೂಕಿನ ಎರಡು ಹೋಬಳಿ ನನ್ನ ವಿಧಾನಸಭಾ ಕ್ಷೇತ್ರಕ್ಕೆ ಸೇರುತ್ತವೆ. ಕಟ್ಟಾಯ ಹೋಬಳಿ ಎಚ್‌.ಕೆ. ಕುಮಾರಸ್ವಾಮಿ ಅವರ ಕ್ಷೇತ್ರಕ್ಕೆ ಸೇರುತ್ತದೆ. ಹಾಸನ ತಾಲ್ಲೂಕು ಕಚೇರಿ ನಿರ್ಮಾಣಕ್ಕೆ ಇಲ್ಲಿನ ಶಾಸಕರ ತೀರ್ಮಾನವೇ ಅಂತಿಮವಲ್ಲ. ತಾಲ್ಲೂಕು ಕಚೇರಿ ನಿರ್ಮಾಣಕ್ಕೆ ಹಣ ಕೊಟ್ಟವನು ನಾನು. ಆ ಕಟ್ಟಡ ಇನ್ನೂ 50 ವರ್ಷ ಗಟ್ಟಿಯಾಗಿ ಇರಲಿದೆ. ಹಾಸನ ಶಾಸಕರೊಬ್ಬರ ಸೊತ್ತಲ್ಲ. ಜಿಲ್ಲೆಯಲ್ಲಿ ನಾವು ಇದುವರೆಗೂ ಶಾಂತಿಯಿಂದ ಇದ್ದೇವೆ. ಮುಂದೆ ಏನಾದರೂ ಹೆಚ್ಚುಕಡಿಮೆ ಆದರೆ ಜಿಲ್ಲಾಡಳಿತವೇ ಹೊಣೆ’ ಎಂದು ಎಚ್ಚರಿಕೆ ನೀಡಿದರು.

‘ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ? ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ₹200 ಕೋಟಿ ಅನುದಾನ ತಂದು ಆಸ್ಪತ್ರೆ ನಿರ್ಮಿಸಲಾಗುತ್ತಿದೆ. ಶಾಸಕ ಪ್ರೀತಂ ಅನುದಾನ ತಂದುಆಸ್ಪತ್ರೆ ನಿರ್ಮಿಸಲಿ, ಯಾರು ಬೇಡ ಎಂದಿದ್ದಾರೆ. ಜಿಲ್ಲೆಗೆ ಬಿಜೆಪಿ ಅನ್ಯಾಯ ಮಾಡಿರುವಷ್ಟು ಯಾರೂ ಮಾಡಿಲ್ಲ. ಯಾವ ಮುಖ ಇಟ್ಟುಕೊಂಡು ಜನರ ಮತ ಕೇಳುತ್ತಾರೆ’ ಎಂದು ಕಿಡಿಕಾರಿದರು.

‘ಹಾಸನ ಕ್ಷೇತ್ರದಲ್ಲಿ ಇನ್ನೂ ಎಷ್ಟು ದಿನ ಇವರ ಆಟ ನಡೆಯುತ್ತದೆ ನೋಡುತ್ತೇನೆ. ಕಾಂಗ್ರೆಸ್‌ ಮಾಡಿದ ತಪ್ಪಿನಿಂದ ಸಮ್ಮಿಶ್ರ ಸರ್ಕಾರ ಹೋಗಿ ಬಿಜೆಪಿ ಅಧಿಕಾರಕ್ಕೆ ಬರಬೇಕಾಯಿತು. ಇಲ್ಲದಿದ್ದರೆ ಈ ಗಿರಾಕಿ ಎಲ್ಲಿ ಇರುತ್ತಿತ್ತು ಎಂಬುದು ಗೊತ್ತಾಗುತ್ತಿತ್ತು. ಯಡಿಯೂರಪ್ಪ ನೇತೃತ್ವದ ಸರ್ಕಾರ ಬಂದಿದ್ದಕ್ಕೆ ಜೀವ ಉಳಿಸ್ಕಂಡಿದೆ. ನಾನು ಅವನನ್ನು ಲೆಕ್ಕಕ್ಕೇ ಇಟ್ಟಿಲ್ಲ’ ಎಂದು ಶಾಸಕ ಪ್ರೀತಂ ಗೌಡರ ವಿರುದ್ಧ ಏಕವಚನದಲ್ಲಿಯೇ ವಾಗ್ದಾಳಿ ನಡೆಸಿದರು.

‘ಭವಾನಿ ಶಾಸಕಿ ಆಗುವುದು ಖಚಿತ’

‘ಹಾಸನ ವಿಧಾನಸಭಾ ಕ್ಷೇತ್ರದಿಂದ ಯಾರನ್ನು ಅಭ್ಯರ್ಥಿ ಮಾಡಬೇಕು ಎಂಬುದು ಪಕ್ಷಕ್ಕೆ ಬಿಟ್ಟ ವಿಚಾರ. ಅಭ್ಯರ್ಥಿ ಆಯ್ಕೆಯನ್ನು ಹಾಸನ ಕ್ಷೇತ್ರದ ಶಾಸಕರನ್ನು ಕೇಳಿ ಮಾಡಬೇಕಿಲ್ಲ. ಪದೇ ಪದೇ ಆಹ್ವಾನ ಮಾಡುವುದು ಬಿಡಲಿ. ಭವಾನಿ ಒಂದಲ್ಲಾ ಒಂದು ದಿನ ಶಾಸಕಿ ಆಗುವುದುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ಅದು ಐದು ವರ್ಷ ಆಗಬಹುದು, ಇಲ್ಲಾ ಹತ್ತು ವರ್ಷ ಆಗಬಹುದು. ಭವಾನಿ ಅವರಿಗೆ ಹೊಳೆನರಸೀಪುರದಿಂದಟಿಕೆಟ್‌ ನೀಡಿದರೂ ನಾನು ಕೆಲಸ ಮಾಡುತ್ತೇನೆ’ ಎಂದು ಎಚ್‌.ಡಿ.ರೇವಣ್ಣ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಕೆ.ಎಂ.ಶಿವಲಿಂಗೇಗೌಡ ಜೆಡಿಎಸ್‌ ತೊರೆಯುವುದಿಲ್ಲ’

‘ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ ಜೆಡಿಎಸ್ ತೊರೆಯುವುದಿಲ್ಲ. ಜೆಡಿಎಸ್‌ ಸಮಾವೇಶದ ಮಾರನೇ ದಿನವೇ ನನಗೆ ಕರೆ ಮಾಡಿ ಮಾತನಾಡಿದ್ದಾರೆ. ‘ನಮ್ಮ ತಾಯಿ ಆಣೆ ದೇವೇಗೌಡರು ಇರುವವರೆಗೂ ಜೆಡಿಎಸ್‌ ಬಿಡುವುದಿಲ್ಲ’ ಎಂದು ಹೇಳಿದ್ದಾರೆ. ಕುಮಾರಸ್ವಾಮಿ ಹಾಗೂ ದೇವೇಗೌಡರುಗೊಂದಲದಲ್ಲಿ ಶಿವಲಿಂಗೇಗೌಡರ ಬಗ್ಗೆ ಹಾಗೆ ಮಾತನಾಡಿದ್ದಾರೆ ಅಷ್ಟೆ. 2023ರ ಚುನಾವಣೆಯಲ್ಲಿ ಎಲ್ಲರೂ ಒಟ್ಟಿಗೆ ಪಕ್ಷ ಸಂಘಟನೆ ಮಾಡಲಿದ್ದೇವೆ’ ಎಂದು ಎಚ್‌.ಡಿ.ರೇವಣ್ಣ ಸ್ಪಷ್ಟಪಡಿಸಿದರು.

ಇಂದಿನಿಂದ ರಾಗಿ ಖರೀದಿ ಆರಂಭ

‘ಜೆಡಿಎಸ್‌ ಹೋರಾಟ ಹಾಗೂ ರಾಜ್ಯಸಭೆಯಲ್ಲಿ ದೇವೇಗೌಡರ ಹೋರಾಟದ ಫಲವಾಗಿ ರಾಗಿ ಖರೀದಿಗೆ ಅನುಮೋದನೆ ನೀಡಲಾಗಿದೆ. ಅದಕ್ಕಾಗಿ ₹900 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, 1.16 ಲಕ್ಷ ಟನ್‌ ರಾಗಿ ಖರೀದಿ ಗುರಿ ಹೊಂದಲಾಗಿದೆ. ದುದ್ದ, ಶಾಂತಿಗ್ರಾಮ, ಮೊಸಳೆಹೊಸಳ್ಳಿ, ಉದಯಪುರ ಸೇರಿದಂತೆ ವಿವಿಧೆಡೆ ರಾಗಿ ಖರೀದಿಗೆ ಸೋಮವಾರದಿಂದಲೇ ನೋಂದಣಿ ಆರಂಭವಾಗಲಿದೆ. ರೈತರು ಇದರ ಲಾಭ ಪಡೆದುಕೊಳ್ಳಬೇಕು’ ಎಂದು ಎಚ್‌.ಡಿ.ರೇವಣ್ಣ ಸಲಹೆ ನೀಡಿದರು.

***
ಇವರಿಗೆಲ್ಲಾ ಉತ್ತರ ಹೇಳುತ್ತಾ ನಾನು ಪೊಳ್ಳಾಗಲಾರೆ. 2023ಕ್ಕೆ ಬಡ್ಡಿ ಸಮೇತ ಉತ್ತರ ನೀಡದಿದ್ದರೆ ನಾನು ದೇವೇಗೌಡರ ಮಗನೇ ಅಲ್ಲ.

–ಎಚ್‌.ಡಿ.ರೇವಣ್ಣ, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT