ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿ

ಖರ್ಚು ಮಾಡದ ಅನುದಾನ: ದಲಿತ ಛಲವಾದಿ ಮಾದಿಗ ಸಂಘಟನೆಗಳ ಒಕ್ಕೂಟದ ಧರಣಿ
Last Updated 21 ಅಕ್ಟೋಬರ್ 2020, 14:32 IST
ಅಕ್ಷರ ಗಾತ್ರ

ಹಾಸನ: ಪರಿಶಿಷ್ಟ ಜಾತಿ ಮತ್ತು‌‌ ಪಂಗಡದ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಬಾರದು ಹಾಗೂ 2019-20ನೇ ಸಾಲಿನ ಬಜೆಟ್ ನಲ್ಲಿ ಮೀಸಲಿಟ್ಟ ಹಣ ಖರ್ಚು ಮಾಡದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸಬೇಕು ಎಂದು ಆಗ್ರಹಿಸಿ ದಲಿತ ಛಲವಾದಿ ಮಾದಿಗ ಸಂಘಟನೆಗಳ ಒಕ್ಕೂಟದ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ‌ಧರಣಿ ನಡೆಸಲಾಯಿತು.

ಪರಿಶಿಷ್ಟ ಜಾತಿ ಮತ್ತು ಪಂಗಡದ ಉಪಯೋಜನೆ ಕಾಯ್ದೆ -2013ರ ಪ್ರಕಾರ ಜನಸಂಖ್ಯೆಗೆ ಅನುಗುಣವಾಗಿ ಪ್ರಸಕ್ತ ಸಾಲಿನಲ್ಲಿ ಅಂದಾಜು ₹27,699 ಕೋಟಿ ಅನುದಾನವನ್ನು ಸಮುದಾಯದ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಇತ್ತೀಚೆಗೆ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಅನುದಾನದ ಶೇಕಡಾ 20 ರಷ್ಟನ್ನು ಮಾತ್ರ ಖರ್ಚು‌ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಕೋವಿಡ್ ನಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸಮುದಾಯಕ್ಕೆ ಶೇಕಡಾ 20 ರಷ್ಟು ಅನುದಾನ ಬಳಕೆ ಮಾಡಿರುವುದರಿಂದ ಸಮುದಾಯ ಆರ್ಥಿಕವಾಗಿ ‌ಮತ್ತಷ್ಟು ಅಪಾಯಕ್ಕೆ ಸಿಲುಕಿದಂತಾಗಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದರು.

ಅಧಿಕಾರಿಗಳ ಬೇಜವಾಬ್ದಾರಿ ಮತ್ತು‌ ನಿರ್ಲಕ್ಷ್ಯದಿಂದ ಎಸ್‌ಸಿ, ಎಸ್‌ಟಿ ಉಪಯೋಜನೆ ಕಾಯ್ದೆ ಕಲಂ 7ಅನ್ನು ದುರುಪಯೋಗ ಮಾಡಿಕೊಂಡು ಮೀಸಲಿಟ್ಟಿರುವ ಅನುದಾನ ಖರ್ಚು ಮಾಡದೇ ಅನ್ಯ ಉದ್ದೇಶಕ್ಕೆ ಬಳಸುವ ಹುನ್ನಾರವನ್ನು ಅಧಿಕಾರಿ‌ಶಾಹಿ ವ್ಯವಸ್ಥೆ ಮಾಡುತ್ತಿದೆ. ಅನ್ಯ ಉದ್ದೇಶಗಳಿಗೆ ಬಳಸದಂತೆ ಸಿ.ಎಂ ಯಡಿಯೂರಪ್ಪ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ಅನುದಾನವನ್ನು ಸಮುದಾಯದ ಆರ್ಥಿಕ‌ ಮತ್ತು ಶೈಕ್ಷಣಿಕ ಅಭಿವೃದ್ಧಿಗೆ‌ ಬಳಸಲು ಆದೇಶಿಸಬೇಕು ಎಂದು ಒತ್ತಾಯಿಸಿದರು.

ಕೋವಿಡ್ ಸಂಕಷ್ಟದಲ್ಲಿರುವ ಸಮುದಾದಯ ಪ್ರತಿ ಕುಟುಂಬಕ್ಕೂ ಹತ್ತು ಸಾವಿರ ರೂಪಾಯಿ ಪರಿಹಾರ ನೀಡಬೇಕು.ಕೋವಿಡ್ ಕಾರಣದಿಂದ ಆನ್ ಲೈನ್ ಶಿಕ್ಷಣ ಜಾರಿಗೊಳಿಸಿರುವ ಸರ್ಕಾರ ವಿದ್ಯಾಭ್ಯಾಸದಿಂದ ವಂಚಿತ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಮೊಬೈಲ್, ಲ್ಯಾಪ್ ಟಾಪ್ ಉಚಿತವಾಗಿ ವಿತರಿಸಬೇಕು. ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು ಎಂದು ಒತ್ತಾಯಿಸಿ‌ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ದಲಿತ ಸಂಘರ್ಷ ಸಮಿತಿ ಮುಖಂಡರಾದ ಅಂಬುಗ ಮಲ್ಲೇಶ್, ಕೃಷ್ಣದಾಸ್, ಎಚ್.ಪಿ. ಶಂಕರ್ ರಾಜ್, ನಾರಾಯಣದಾಸ್, ರಾಜಶೇಖರ್ ಹುಲಿಕಲ್, ರಮೇಶ್ ಸಾತೇನಹಳ್ಳಿ ಹಾಗೂ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT