ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಮಿನಲ್‌ ಪ್ರಕರಣ ದಾಖಲಿಸಿ: ಶಾಸಕ ಎಚ್‌.ಡಿ.ರೇವಣ್ಣ

ಜಾತಿ ಮರೆ ಮಾಚಿ ಗೆದ್ದಿರುವ 34ನೇ ವಾರ್ಡ್‌ ಸದಸ್ಯ: ಶಾಸಕ ರೇವಣ್ಣ ಆರೋಪ
Last Updated 15 ಅಕ್ಟೋಬರ್ 2020, 15:07 IST
ಅಕ್ಷರ ಗಾತ್ರ

ಹಾಸನ: ಜಾತಿ ಮರೆ ಮಾಚಿ ಗೆದ್ದಿರುವ ನಗರಸಭೆಯ 34 ನೇ ವಾರ್ಡ್ ಸದಸ್ಯ ಆರ್‌. ಮೋಹನ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಶಾಸಕ ಎಚ್‌.ಡಿ.ರೇವಣ್ಣ ಆರೋಪಿಸಿದರು.

ಮೋಹನ್‌ ಅವರ ತಂದೆ ರಘುಪತಿ ರಾವ್ ಅವರು 1962ರಲ್ಲಿ ಸಿದ್ಧಗಂಗಾ ಮಠದ ಬಸವೇಶ್ವರ ಡಿಇಡಿ ಕಾಲೇಜಿನಲ್ಲಿ
ವಿದ್ಯಾಭ್ಯಾಸ ಮಾಡಿದ್ದಾರೆ. ಕಾಲೇಜು ದಾಖಲಾತಿ ಪುಸ್ತಕದಲ್ಲಿ ಮರಾಠ ಜಾತಿ ಎಂದು ನಮೂದಿಸಲಾಗಿದೆ. ಇದರ ಪ್ರಕಾರ 3 ಬಿ ವರ್ಗಕ್ಕೆ ಬರಲಿದೆ. ಶಿಕ್ಷಕ ಹುದ್ದೆಗೆ ಸೇರಿದ ಬಳಿಕ ಸೇವಾ ದಾಖಲೆಗಳಲ್ಲಿ ಗೋಂಡ ಎಂದು ಬದಲಾಗಿದೆ.
ಮೋಹನ್ ಅವರು ಪರಿಶಿಷ್ಟ ಪಂಗಡಕ್ಕೆ ಸೇರಿದವರಲ್ಲ ಎಂದು ಎರಡು ವರ್ಷದ ಹಿಂದೆಯೇ ದೂರು ನೀಡಿದ್ದರೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.‌

ಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ರಘುಪತಿ ರಾವ್ ಅವರು ತಮ್ಮ ಮಕ್ಕಳಾದ ಆರ್‌.ಮೋಹನ್‌, ಆರ್‌.ಅರವಿಂದ ಅವರನ್ನು ಹಾಸನದ ಚನ್ನಪಟ್ಟಣ ಸರ್ಕಾರಿ ಶಾಲೆಯಲ್ಲಿ ದಾಖಲಿಸಿದಾಗ, ಜಾತಿಯಲ್ಲಿ ಮರಾಠ ಎಂದು ನಮೂದಿಸಿ, ನಂತರ ಅಧಿಕಾರ ದುರುಪಯೋಗಿಸಿಕೊಂಡು ಗೋಂಡ ಎಂದು ಬದಲಾಯಿಸಿದ್ದಾರೆ. ಸರ್ಕಾರಿ ಸವಲತ್ತು ಕಬಳಿಸುವ ಉದ್ದೇಶದಿಂದ ಎಸ್‌ಟಿ ಸಮುದಾಯಕ್ಕೆ ಸೇರಬೇಕಾದ ಸವಲತ್ತುಗಳನ್ನು ಪಡೆದು ವಂಚಿಸಿದ್ದಾರೆ.
ಕಾನೂನು ಪ್ರಕಾರ ಮೋಹನ್ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿ, ಸದಸ್ಯ ಸ್ಥಾನದಿಂದ ಅನರ್ಹಗೊಳಿಸಬೇಕಿತ್ತು.

ಇವರನ್ನೇ ಎಸ್ಟಿ ಮೀಸಲು ಅಡಿ ನಗರಸಭೆ ಅಧ್ಯಕ್ಷರಾಗಿ ಮಾಡಲು ಬಿಜೆಪಿ ಹೊರಟಿದೆ. ಇದರಿಂದ ನಿಜವಾಗಿ ಪರಿಶಿಷ್ಟ ಪಂಗಡದವರಿಗೆ ಅನ್ಯಾಯ ಮಾಡಲಾಗುತ್ತಿದೆ. ಚುನಾವಣೆಗಾಗಿಯೇ ರಾತ್ರೋರಾತ್ರಿ ಹಾಸನ ಉಪವಿಭಾಗಾಧಿಕಾರಿ ಅವರನ್ನು ಬದಲಾವಣೆ ಮಾಡಲಾಗಿದೆ ಎಂದು ದೂರಿದರು.

ನಗರಸಭೆ ಸದಸ್ಯ ಮೋಹನ್ ಅವರ ಜಾತಿ ಪ್ರಮಾಣ ಪತ್ರ ಪರಿಶೀಲಿಸಬೇಕೆಂದು ವಾಲ್ಮೀಕಿ ಸಮುದಾಯ ಮುಖಂಡರು 2018ರ ಜುಲೈ 30 ರಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರು ಸಹ ಸಿಂಧುತ್ವ ಪ್ರಮಾಣ ಪತ್ರ ಕೋರಿ ಯಾವುದೇ ಅಭ್ಯರ್ಥಿ ಅರ್ಜಿ ಸಲ್ಲಿಸಿಲ್ಲ ಎಂದು ವರದಿ ನೀಡಿದ್ದಾರೆ. ಹೀಗಿರುವಾಗ ಮೋಹನ್ ಯಾವ ಸಮುದಾಯಕ್ಕೆ ಸೇರಿದ್ದಾರೆಂಬುದನ್ನು ಬಿಡಿಸಿ ಹೇಳಬೇಕಿಲ್ಲ ಎಂದರು.

‘ಸುಳ್ಳು ಜಾತಿ ಪ್ರಮಾಣ ಪತ್ರಗಳಿಗೆ ಮನ್ನಣೆ ನೀಡಿರುವ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ ಸೇರಿದಂತೆ ಎಲ್ಲರ ವಿರುದ್ಧವೂ ಎಫ್‍ಐಆರ್ ದಾಖಲಿಸಬೇಕಾಗುತ್ತದೆ. ಸರ್ಕಾರದ ಮುಖ್ಯಕಾರ್ಯದರ್ಶಿ ಜತೆಗೆ ಮಾತನಾಡಿದಾಗ ತಮಗೇನು ಗೊತ್ತಿಲ್ಲ ಎಂಬಂತೆ ವರ್ತಿಸಿದ್ದಾರೆ’ ಎಂದರು.

‘ಹೇಮಾವತಿ ಜಲಾಶಯ ಯೋಜನೆಯ ಮುಳುಗಡೆ ಸಂತ್ರಸ್ತರಿಗೆ ಮಂಜೂರು ಮಾಡಲು ಕಾಯ್ದಿರಿಸುವ ಪ್ರದೇಶವನ್ನು
ಅಕ್ರಮವಾಗಿ ವಿಲೇವಾರಿ ಮಾಡಿರುವುದು ಮೇಲ್ನೋಟಕ್ಕೆ ಸಾಬೀತಾಗಿರುವುದು ಕಂಡು ಬಂದಿದೆ. ಭವಿಷ್ಯದಲ್ಲಿ ಇಂತಹ
ಪ್ರಕರಣಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲು ಸರ್ಕಾರದ ಮಟ್ಟದಲ್ಲಿ ಉನ್ನತ ಮಟ್ಟದ ತನಿಖೆ ನಡೆಸಲು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ’ ಎಂದು ವಿವರಿಸಿದರು.

‘ಆರು ತಿಂಗಳ ಹಿಂದೆಯೇ ಗ್ರಾಮ ಪಂಚಾಯಿತಿ ಚುನಾವಣೆ ನಡೆಸಬೇಕಿದ್ದ ಚುನಾವಣೆ ಆಯೋಗ ರಬ್ಬರ್ ಸ್ಟಾಂಪ್‍ನಂತೆ ಕಾರ್ಯ ನಿರ್ವಹಿಸುತ್ತಿದೆ. ಪಂಚಾಯಿತಿಗಳಿಗೆ ಆಡಳಿತಾಧಿಕಾರಿ ನೇಮಿಸಲಾಗಿದೆ’ ಎಂದರು.

ಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT