ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ: ಮಾಸ್ಕ್ ಧರಿಸದವರಿಂದ ಐದು ದಿನಕ್ಕೆ ₹75 ಸಾವಿರ ದಂಡ ವಸೂಲಿ

ನಗರಸಭೆ ಸಿಬ್ಬಂದಿ ಕಾರ್ಯಾಚರಣೆ: ದಂಡಕ್ಕೆ ಹೆದರಿ ಮಾಸ್ಕ್‌ ಧರಿಸುತ್ತಿರುವ ಜನರು
Last Updated 7 ಅಕ್ಟೋಬರ್ 2020, 20:15 IST
ಅಕ್ಷರ ಗಾತ್ರ

ಹಾಸನ: ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಯಲು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ ಧರಿಸಿದವರಿಗೆ ನಗರಸಭೆ ದಂಡ ವಿಧಿಸುತ್ತಿದ್ದು, ಐದು ದಿನಗಳಲ್ಲಿ ನಗರಸಭೆ ₹75 ಸಾವಿರ ದಂಡ ವಸೂಲಿ ಮಾಡಿದೆ.

ನಗರಸಭೆ ಪೌರಾಯುಕ್ತ ಆರ್. ಕೃಷ್ಣಮೂರ್ತಿ, ಆರೋಗ್ಯ ನಿರೀಕ್ಷಕ ಪ್ರಸಾದ್ ಹಾಗೂ ಸಿಬ್ಬಂದಿ ಕಾರ್ಯಾಚರಣೆಗೆ ಇಳಿದಿದ್ದು, ಮಾಸ್ಕ್ ಮರೆತು ರಸ್ತೆಗಿಳಿದರೆ ದಂಡ ಪಾವತಿಸಬೇಕು. ದುಬಾರಿ ದಂಡಕ್ಕೆ ಹೆದರಿ ಜನರು ಮಾಸ್ಕ್ ಧರಿಸುತ್ತಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ದುಬಾರಿ ದಂಡ ಪಾವತಿಸಲು ಹಲವರು ವಿರೋಧ ವ್ಯಕ್ತಪಡಿಸಿ, ಅಧಿಕಾರಿಗಳ ಜತೆ ವಾಗ್ವಾದ ನಡೆಸಿ, ಹಿಡಿಶಾಪ ಹಾಕುತ್ತಿದ್ದಾರೆ. ಕೆಲವರು ಕಡಿಮೆ ದಂಡ ವಸೂಲು ಮಾಡುವಂತೆ ಚೌಕಾಸಿ ಮಾಡುತ್ತಾರೆ. ಜನರನ್ನು ಸಮಾಧಾನಪಡಿಸಿ ಕಳುಹಿಸುವಷ್ಟರಲ್ಲಿ ಸಿಬ್ಬಂದಿಗೂ ಸಾಕಾಗಿ ಹೋಗಿದೆ.

‘ಮಾಸ್ಕ್ ಧರಿಸದಿದ್ದರೆ ನಗರ ಪ್ರದೇಶದಲ್ಲಿ ₹1000, ಗ್ರಾಮೀಣ ಪ್ರದೇಶದಲ್ಲಿ ₹500 ದಂಡ ವಿಧಿಸಲಾಗುತ್ತಿದೆ. ಎಲ್ಲರೂ ಇಷ್ಟೊಂದು ಹಣವನ್ನು ಇಟ್ಟುಕೊಂಡು ಬಂದಿರುವುದಿಲ್ಲ. ಸಾವಿರ ರೂಪಾಯಿ ಕೇಳಿದರೆ ₹200, ₹300 ಕೊಡಲು ಬರುತ್ತಾರೆ. ಜನರಿಗೆ ಮನವರಿಕೆ ಮಾಡುವಷ್ಟರಲ್ಲಿ ಸಾಕಾಗುತ್ತದೆ. ಹಾಗಾಗಿ ₹200, ₹300 ಪಡೆದು ರಸೀದಿ ನೀಡುತ್ತಿದ್ದೇವೆ. ಇದು ಸಿಬ್ಬಂದಿಗೂ ಸಂಕಷ್ಟ ತಂದೊಡ್ಡಿದೆ’
ಎನ್ನುತ್ತಾರೆ ನಗರಸಭೆ ಅಧಿಕಾರಿ.

ಸಾರ್ವಜನಿಕರ ವಿರೋಧ ಮತ್ತು ತಜ್ಞರ ಅಭಿಪ್ರಾಯ ಹಿನ್ನೆಲೆಯಲ್ಲಿ ದಂಡದ ಪ್ರಮಾಣವನ್ನು ನಗರ ಪ್ರದೇಶಗಳಲ್ಲಿ ₹250 ಹಾಗೂ ಗ್ರಾಮೀಣ ಭಾಗದಲ್ಲಿ ₹100ಕ್ಕೆ ಇಳಿಸಿ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.

ನಗರದ ಮುಖ್ಯ ರಸ್ತೆಗಳಲ್ಲಿ ನಗರಸಭೆ ಸಿಬ್ಬಂದಿ ದ್ವಿಚಕ್ರ ವಾಹನ, ಕಾರು, ಆಟೊ ಹಾಗೂ ಇತರ ವಾಹನ ತಡೆದು, ಮಾಸ್ಕ್ ಧರಿಸದವರಿಗೆ ದಂಡ ವಿಧಿಸುತ್ತಿದ್ದಾರೆ. ದಂಡದ ಕಟ್ಟಿಸಿಕೊಳ್ಳುವುದರ ಜತೆಗೆ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಲಾಗುತ್ತಿದೆ.

‘ದುಬಾರಿ ದಂಡಕ್ಕೆ ಹೆದರಿ ಜನರು ಮಾಸ್ಕ್‌ ಧರಿಸುವುದನ್ನು ಆರಂಭಿಸಿದ್ದಾರೆ. ಆದರೆ, ಇದರಿಂದ ಸಮಸ್ಯೆ ಉಂಟಾಗಿದೆ. ಎಲ್ಲರಿಂದಲೂ ಸಾವಿರ ರೂಪಾಯಿ ಪಡೆಯುವುದು ಅಸಾಧ್ಯವಾಗಿದೆ. ಜನರಿಗೆ ಮಾಸ್ಕ್‌ ಧರಿಸುವಂತೆ ಅರಿವು ಮೂಡಿಸಲಾಗುತ್ತಿದೆ. ಐದು ದಿನಗಳಲ್ಲಿ ₹75 ಸಾವಿರ ದಂಡ ವಸೂಲಾಗಿದೆ. ಸರ್ಕಾರ ದಂಡದ ಪ್ರಮಾಣವನ್ನು ಇಳಿಕೆ ಮಾಡಿದೆ. ಗುರುವಾರದಿಂದ ಹೊಸ ದರದಂತೆ ದಂಡ ವಸೂಲು ಮಾಡಲಾಗುವುದು’ ಎಂದು ನಗರಸಭೆ ಆಯುಕ್ತ ಆರ್. ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊರೊನಾ ಸೋಂಕು ಹರಡದಂತೆ ಮಾಸ್ಕ್‌ ಧರಿಸುವುದು ಪ್ರತಿಯೊಬ್ಬರ ಕರ್ತವ್ಯ. ಈ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಬೇಕು. ಕೇವಲ ದಂಡ ವಿಧಿಸುವುದರಿಂದ ಸೋಂಕು ನಿಯಂತ್ರಣಕ್ಕೆ ಬರುವುದಿಲ್ಲ. ಎಲ್ಲರ ಬಳಿಯೂ ಸಾವಿರ ರೂಪಾಯಿ ಇರುವುದಿಲ್ಲ. ಕೂಲಿ ಮಾಡಿ ಜೀವನ ಸಾಗಿಸುವವರು ಸಾಕಷ್ಟು ಜನರು ಇದ್ದಾರೆ. ಇಂತಹ ಸಂದರ್ಭದಲ್ಲಿ ಸಾವಿರ ರೂಪಾಯಿ ಎಲ್ಲಿಂದ ತರುವುದು. ಸರ್ಕಾರವೇ ಉಚಿತವಾಗಿ ಮಾಸ್ಕ್‌ ನೀಡಲಿ’ ಎಂದು ಕೂಲಿ ಕಾರ್ಮಿಕ ಗಿರೀಶ್‌ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT