ಶುಕ್ರವಾರ, ಅಕ್ಟೋಬರ್ 18, 2019
23 °C

ದುಮ್ಮೇನಹಳ್ಳಿಯಲ್ಲಿ ಬೆಂಕಿ ಅವಘಡ | ಮೂರು ಗುಡಿಸಲು ಭಸ್ಮ, ನಾಲ್ಕು ಹಸು ಸಜೀವ ದಹನ

Published:
Updated:
Prajavani

ಅರಸೀಕೆರೆ: ಸೀಮೆಎಣ್ಣೆಯ ಲಾಟಿನ್ ಉರುಳಿ ತಾಲ್ಲೂಕಿನ ದುಮ್ಮೇನಹಳ್ಳಿ ಗ್ರಾಮದ ದಲಿತರ ಕಾಲೊನಿಯಲ್ಲಿ ಶುಕ್ರವಾರ ರಾತ್ರಿ ಮೂರು ಗುಡಿಸಲು ಭಸ್ಮವಾಗಿದ್ದು, ನಾಲ್ಕು ಹಸುಗಳು ಸಜೀವ ದಹನವಾಗಿವೆ.

ಮಲ್ಲಪ್ಪ, ಗಂಗಾಧರ್ ಹಾಗೂ ಶಿವಲಿಂಗಪ್ಪ ಅವರ ಗುಡಿಸಲು ಭಸ್ಮವಾಗಿದ್ದು, ಮಲ್ಲಪ್ಪ ಅವರ ಗುಡಿಸಲಿನಲ್ಲಿದ್ದ ನಾಲ್ಕು ಹಸುಗಳು ಸತ್ತಿವೆ.

ಮಲ್ಲಪ್ಪ ಮನೆಯ ಪಕ್ಕದ ಗುಡಿಸಲಿನ ದೊಡ್ಡಿಯಲ್ಲಿ ಹಸುಗಳನ್ನು ಕಟ್ಟಿದ್ದರು. ರಾತ್ರಿ ವಿದ್ಯುತ್ ಇಲ್ಲದ ಕಾರಣ ಸೀಮೆಎಣ್ಣೆ  ದೀಪದ ಲಾಟಿನ್‌ ಅನ್ನು ಹಚ್ಚಿಟ್ಟು ಹೊರ ಹೋಗಿದ್ದರು. ಆಗ ಲಾಟಿನ್‌ ಉರುಳಿರಬಹುದು. ಅಥವಾ ದೀಪದ ಸಮೀಪವಿದ್ದ ಹಸು ಒದ್ದಿದ್ದರಿಂದ ದೀಪ ಉರುಳಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.

ಮಲ್ಲಪ್ಪ ಅವರ ಗುಡಿಸಲಿಗೆ ತಾಗಿದ ಬೆಂಕಿಯ ಜ್ವಾಲೆ ನೋಡ ನೋಡುತ್ತಿದ್ದಂತೆ ಪಕ್ಕದ ಮನೆಯ ಶಿವಲಿಂಗಪ್ಪ ಹಾಗೂ ಗಂಗಾಧರ್ ಅವರ ಗುಡಿಸಲುಗಳಿಗೂ ತಾಗಿದೆ. ಇದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಘಟನಾ ಸ್ಥಳಕ್ಕೆ ಅರಸೀಕೆರೆ ತಹಶೀಲ್ದಾರ್ ಸಂತೋಷ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು. ನಂತರ ಮಾತನಾಡಿ,‘ಈ ಅವಘಡ ತುಂಬಾ ನೋವು ತಂದಿದೆ. ಶೀಘ್ರವೇ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು ಜತೆಗೆ ಸುಟ್ಟು ಹೋಗಿರುವ ಗುಡಿಸಲುಗಳ ಜಾಗದಲ್ಲಿ ಆಶ್ರಯ ಯೋಜನೆ ಅಡಿಯಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು‘ ಎಂದು ಭರವಸೆ ನೀಡಿದರು.

ಸ್ಥಳಕ್ಕೆ ಬಂದ ಅಗ್ಗುಂದ ಪಶು ವೈದ್ಯ ಹನುಮಂತಪ್ಪ ಸ್ಥಳ ಪರಿಶೀಲಿಸಿ, ಸರ್ಕಾರಕ್ಕೆ ಮಾಹಿತಿ ನೀಡುವುದಾಗಿ ಹೇಳಿದರು.

Post Comments (+)