ಬುಧವಾರ, ಜನವರಿ 22, 2020
28 °C
ನಂಬಿದ ಭಕ್ತರ ಮನೆ, ಮನ ಬೆಳಗುವ ಮುಡೀನಹಳ್ಳಿ ಕರಿತಿಮ್ಮಪ್ಪ

ಭಾರತೀನಗರ: ಮುಡೀನಹಳ್ಳಿ ಕರಿತಿಮ್ಮಪ್ಪನಿಗೆ ಪ್ರಥಮ ಏಕಾದಶಿ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಭಾರತೀನಗರ: ‘ಸಂಕಟ ಬಂದಾಗ ವೆಂಕಟರಮಣ’ ಎಂಬ ನಾಣ್ಣುಡಿಯಂತೆ ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಕೂಡ ಮುಡೀನಹಳ್ಳಿಯ ಕರಿತಿಮ್ಮಪ್ಪನನ್ನು ಮನದಲ್ಲಿ ಸ್ಮರಿಸಿದರೆ ಸಾಕು ಇಷ್ಟಾರ್ಥಗಳು ಈಡೇರುತ್ತವೆ ಎಂದು ಹಲವು ಭಕ್ತರು ಹೇಳುತ್ತಾರೆ.

ಪಟ್ಟಣ ಸಮೀಪದ ಮುಡೀನಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಕರಿತಿಮ್ಮಪ್ಪ ಸ್ವಾಮಿಯ ಮಹಿಮೆಯೇ ಹೀಗೆ. ಆತನನ್ನು ನಂಬಿ ಬಂದವರ ಮನೆಯಲ್ಲಿ ತುಂಬಿ ತುಳುಕಾಡುವ ದೇವರೆಂದು ಪ್ರಸಿದ್ಧಿ ಪಡೆದಿದ್ದಾನೆ. ಆತನನ್ನು ಪೂಜಿಸುವ ಹಲವರು ಇಂದು ಹಣಕಾಸಿನಲ್ಲಿ ಉತ್ತಮ ಸ್ಥಿತಿಯಲ್ಲಿ ಇದ್ದು ಕುಬೇರರಾಗಿದ್ದಾರೆ. ಸಮಾಜದಲ್ಲಿ ಉತ್ತಮ ಗೌರವಕ್ಕೆ ಪಾತ್ರರಾಗಿದ್ದಾರೆ. ಉತ್ತಮ ಹುದ್ದೆಗಳನ್ನು ಅಲಂಕರಿಸಿದ್ದಾರೆಂದು ಕರಿತಿಮ್ಮಪ್ಪನ ಭಕ್ತ ದಲಿತ ಮುಖಂಡ ತಿಮ್ಮಯ್ಯ ಹೇಳುವಾಗ ಮೈ ರೋಮಾಂಚನವಾಗುತ್ತದೆ.


ಕರಿತಿಮ್ಮಪ್ಪ ಸ್ವಾಮಿ

ಗ್ರಾಮದ ಕರಿತಿಮ್ಮಪ್ಪನ ದೇವಾಲಯಕ್ಕೆ ಸಾವಿರಾರು ವರುಷಗಳ ಇತಿಹಾಸವಿದೆ. ಅನಾದಿ ಕಾಲದಿಂದಲೂ ಭಕ್ತರ ಅಭೀಷ್ಟೆಗಳನ್ನು ಈಡೇರಿಸಿ ಹೆಸರುವಾಸಿಯಾಗಿದೆ. ರಾಜ್ಯದಾದ್ಯಂತ ಸಾವಿರಾರು ಭಕ್ತರನ್ನು ಹೊಂದಿರುವ ದೇವಾಲಯವು ಆಗಿದೆ. ನಂಬಿದವರ ಯಾರನ್ನು ಸ್ವಾಮಿಯು ಕೈಬಿಟ್ಟಿಲ್ಲ ಎಂದು ಪ್ರದಾನ ಅರ್ಚಕ ರಂಗರಾಜು ಸ್ವಾಮಿಯ ಮಹಿಮೆಯನ್ನು ವರ್ಣಿಸುತ್ತಾರೆ.

ಶಿಥಿಲಗೊಂಡಿದ್ದ ದೇವಾಲಯ ವನ್ನು ಈಚೆಗೆ ಕೆಡುವಿ ಸುಮಾರು ₹ 2 ಕೋಟಿ ವೆಚ್ಚದಲ್ಲಿ ನೂತನ ದೇವಾಲಯ ನಿರ್ಮಾಣ ಮಾಡಲಾಗಿದೆ. ಆಕರ್ಷಕ ವಾಸ್ತುಶಿಲ್ಪ, ಕೆತ್ತನೆಗಳಿಂದ ಭಕ್ತಾದಿಗಳನ್ನು ತನ್ನತ್ತ ಸೆಳೆಯುತ್ತಿದೆ. ಗರ್ಭಗುಡಿಯೊಳಗೆ ಭೂನೀಳಾ ಮಹಾಲಕ್ಷ್ಮಿ ಸಮೇತ ವೆಂಕಟರಮಣ ಸ್ವಾಮಿ ರಾರಾಜಿಸುತ್ತಾನೆ. ವೆಂಕಟರಮಣನ ಎಡಬಲದಲ್ಲಿ ಶ್ರೀದೇವಿ, ಭೂದೇವಿ ವಿರಾಜ ಮಾನರಾಗಿದ್ದಾರೆ. ದೇವಾಲಯದ ಸುಕನಾಸಿಯಲ್ಲಿ ಮಹಾಲಕ್ಷ್ಮಿ ವಿಗ್ರಹ, ಪ್ರಾಂಗಣದಲ್ಲಿ ಜಯವಿಜಯರ ಮೂರ್ತಿ ಪ್ರತಿಷ್ಟಾಪಿಸಲಾಗಿದೆ. ಅಂಗಳದಲ್ಲಿ ಗರುಡಗಂಬ ನಿಲ್ಲಿಸಲಾಗಿದೆ.

ವರ್ಷಕ್ಕೊಂದು ಬಾರಿ ವಿಜೃಂಬಣೆಯಿಂದ ಶ್ರೀನಿವಾಸ ಕಲ್ಯಾಣೋತ್ಸವ ನಡೆಯುತ್ತದೆ. ನವರಾತ್ರಿಯ 9 ದಿನಗಳು ಕೂಡ ವಿಶಿಷ್ಟ ಪೂಜಾ ವಿಧಿವಿಧಾನಗಳು ಜರುಗುತ್ತವೆ. ವಿಜಯದಶಮಿಯಂದು ಕರಿತಿಮ್ಮಪ್ಪನ ಉತ್ಸವ ಮೂರ್ತಿಯನ್ನು ಗ್ರಾಮದಲ್ಲಿ ಮೆರವಣಿಗೆ ಮಾಡಿ, ಬನ್ನಿ ಪೂಜೆ ನೆರವೇರಿಸಲಾಗುತ್ತದೆ. ಧನುರ್ಮಾಸ ಅವಧಿಯಲ್ಲಿ ಮುಂಜಾನೆಯಿಂದಲೇ ಪೂಜಾ ಕೈಂಕರ್ಯಗಳು ನಡೆಯುತ್ತವೆ. ಆಗಾಗ್ಗೆ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಸ್ವಾಮಿಯ ಬಳಿ ಹೂ ಪ್ರಸಾದ ಕೇಳುವ ಪದ್ಧತಿಯೂ ಇದೆ. ಅನತಿ ದೂರದಲ್ಲೇ ಆಂಜನೇಯ ಹಾಗೂ ಗರುಡ ದೇವಾಲಯಗಳಿವೆ.

ವೈಕುಂಠ ಏಕಾದಶಿಯ ಸಂಭ್ರಮ ಇಂದು: ದೇವಾಲಯ ಜೀರ್ಣೀದ್ಧಾರಗೊಂಡ ನಂತರ ನಡೆಯುತ್ತಿರುವ ಮೊದಲನೇ ವರ್ಷದ ಸಂಭ್ರಮದ ವೈಕುಂಠ ಏಕಾದಶಿಗೆ ದೇವಾಲಯವನ್ನು ಮದುವಣ ಗಿತ್ತಿಯಂತೆ ಅಲಂಕರಿಸಲಾಗಿದೆ. ವೆಂಕಟರಮಣಸ್ವಾಮಿ ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳು ತಿಮ್ಮಪ್ಪನ ಏಕಾದಶಿಯ ಯಶಸ್ಸಿಗೆ ಹಗಲಿರುಳು ಶ್ರಮಿಸಿದ್ದಾರೆ.

ರಾತ್ರಿ 3 ಗಂಟೆಯಿಂದ ರಾತ್ರಿ 10ರವರೆಗೆ ವಿವಿಧ ಪೂಜಾ ವಿಧಿ ವಿಧಾನಗಳು ನಡೆಯುತ್ತಿವೆ. ಬೆಳಿಗ್ಗೆ 8ರಿಂದ 9ರವರೆಗೆ ಜರುಗುವ ಭಕ್ತರ ವೈಕುಂಠದ್ವಾರ ಪ್ರವೇಶ ದೇವಾಲಯದ ವೈಶಿಷ್ಟ್ಯವಾಗಿದೆ. ನಾದಸ್ವರ, ವೇದಘೋಷ, ಪಾರಾಯಣ ಜರುಗಲಿದೆ.

3 ಸಾವಿರ ಭಕ್ತರಿಗೆ ಪ್ರಸಾದ ವಿತರಣೆ: ಅಂದಾಜು 3 ಸಾವಿರ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ. ಅವಲಕ್ಕಿ ಉಪ್ಪಿಟ್ಟು, ರವೆ ಉಪ್ಪಿಟ್ಟು, ಪಂಚಾಮೃತ, ಲಾಡುಗಳನ್ನು ವಿತರಿಸಲು ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು