ಗುರುವಾರ , ನವೆಂಬರ್ 21, 2019
20 °C
ಕೆಡಿಪಿ ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಶ್ವೇತಾ ಆರೋಪ

ನೆರೆ: ಸಮರ್ಪಕ ವರದಿ ನೀಡಲು ವಿಫಲ

Published:
Updated:
Prajavani

ಬೇಲೂರು: ‘ಕಳೆದ ನಾಲ್ಕು ತಿಂಗಳಿನಲ್ಲಿ ಜಿಲ್ಲೆಯ ನಾಲ್ಕು ತಾಲ್ಲೂಕುಗಳಲ್ಲಿ ಸುರಿದ ಭಾರಿ ಮಳೆಯಿಂದಾಗಿ ತೀವ್ರ ನಷ್ಟ ಉಂಟಾಗಿದೆ. ಆದರೆ ಅಧಿಕಾರಿಗಳು ಈ ಬಗ್ಗೆ ಸರ್ಕಾರಕ್ಕೆ ಸಮರ್ಪಕ ವರದಿ ನೀಡಲು ವಿಫಲರಾಗಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌.ಶ್ವೇತಾ ಆರೋಪಿಸಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ತಾಲ್ಲೂಕು ಮಟ್ಟದ ಅಭಿವೃದ್ಧಿ ಕಾರ್ಯಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

‘ಅಧಿಕಾರಿಗಳು ಮುಂದಿನ ಜಿಲ್ಲಾ ಪಂಚಾಯಿತಿ ಸಭೆಗೆ ಸಮರ್ಪಕ ವರದಿ ನೀಡುವಂತೆ ಸೂಚಿಸಲಾಗಿದೆ. ಹಳೇಬೀಡು ಭಾಗದ ಕೆಲ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಬಗ್ಗೆ ದೂರುಗಳಿದ್ದು ಜನರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ತಾಲ್ಲೂಕಿನಲ್ಲಿ ಮೊದಲ ಹಂತದಲ್ಲಿ ಅತಿವೃಷ್ಟಿಯಿಂದ ₹ 13.44 ಕೋಟಿ ಹಾನಿಯಾಗಿದೆ. ಜಿ.ಪಂ. ವ್ಯಾಪ್ತಿಯಲ್ಲಿ 70 ಕಿ.ಮೀ. ರಸ್ತೆ ಹಾಳಾಗಿದೆ. ಹಣ ಬಂದ ನಂತರ ಕಾಮಗಾರಿ ಆರಂಭಿಸಲಾಗುವುದು. 75 ಶಾಲೆಗಳ ದುರಸ್ತೆಗೆ ₹ 1.13 ಕೋಟಿ ಹಣ ಬಿಡುಗಡೆಯಾಗಿದೆ. ಕ್ರಿಯಾ ಯೋಜನೆ ಬಳಿಕ ಆದ್ಯತೆಯ ಮೇರೆಗೆ ಕಾಮಗಾರಿ ಮಾಡಲಾಗುವುದು’ ಎಂದು ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಎನ್‌.ಎಂ. ಬಸವರಾಜು ತಿಳಿಸಿದರು.

‘ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಗರ್ಭಿಣಿಯ ಹಂತದಲ್ಲಿಯೇ ಮಹಿಳೆಯರಿಗೆ ಹೆಚ್ಚಿನ ಪೌಷ್ಠಿಕಾಂಶ ನೀಡುತ್ತಿರುವುದರಿಂದ ಮಕ್ಕಳಲ್ಲಿನ ಅಪೌಷ್ಠಿಕತೆ ಕಡಿಮೆಯಾಗಬೇಕು. ಅಂಗನವಾಡಿಯಲ್ಲಿ ಮಕ್ಕಳಿಗೆ ಆಹಾರ ಪದಾರ್ಥಗಳನ್ನು ಸಮರ್ಪಕವಾಗಿ ವಿತರಿಸಬೇಕು. ಸಿಡಿಪಿಓ ಅವರು ಅಂಗನವಾಡಿಗಳಿಗೆ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಬೇಕು’ ಎಂದು ಅಧ್ಯಕ್ಷೆ ಶ್ವೇತಾ ಸೂಚಿಸಿದರು.

‘ಕಳೆದ ವರ್ಷ ಎಸ್ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನ ಗಳಿಸಿದರೂ ಬೇಲೂರು ತಾಲ್ಲೂಕು ಜಿಲ್ಲೆಯಲ್ಲಿ ಕೊನೆಯ ಸ್ಥಾನಗಳಿಸಿತ್ತು. ಈ ಬಾರಿ ಹಾಗಾಗದಂತೆ ಎಚ್ಚರವಹಿಸಿ ಪ್ರಥಮ ಸ್ಥಾನ ಬರಲು ವಿಶೇಷ ಕಾಳಜಿ ವಹಿಸುವಂತೆ’ ಜಿ.ಪಂ. ಸದಸ್ಯರಾದ ಸೈಯ್ಯದ್‌ ತೌಫಿಕ್‌ ಮತ್ತು ಎಚ್‌.ಎಂ.ಮಂಜಪ್ಪ ಬಿಇಓ ಶಾಕಿರ್‌ ಅಲಿಖಾನ್‌ ಅವರಿಗೆ ಸಲಹೆ ನೀಡಿದರು.

ಜಿ.ಪಂ. ಸದಸ್ಯೆ ಲತಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ.ಬಿ.ರಂಗೇಗೌಡ, ಉಪಾಧ್ಯಕ್ಷೆ ಜಮುನಾಪ, ಇಓ ರವಿಕುಮಾರ್‌ ಇದ್ದರು.

ಕುಡಿಯುವ ನೀರಿಗೆ ತೊಂದರೆ ಆಗದಿರಲಿ: ‘ನರೇಗ ಯೋಜನೆಯಡಿ ಕೈಗೊಳ್ಳುವ ಕಾಮಗಾರಿಗಳನ್ನು ಕಡ್ಡಾಯವಾಗಿ ಶೇ 60ರಷ್ಟು ಹಣವನ್ನು ಕೂಲಿ ಕಾರ್ಮಿಕರಿಗೆ ಮತ್ತು ಶೇ. 40ರಷ್ಟು ಹಣವನ್ನು ಸಾಮಾಗ್ರಿಗಳ ಖರೀದಿಗೆ ಬಳಸ ಬೇಕೆಂದು’ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಬಿ.ಎಸ್‌.ಶ್ವೇತಾ ಸೂಚಿಸಿದರು.

ಕೆಡಿಪಿ ಸಭೆಯ ಬಳಿಕ ಪಿಡಿಓಗಳ ಸಭೆಯಲ್ಲಿ ಮಾತನಾಡಿದ ಅವರು ‘60X40 ಯೋಜನೆಯನ್ನು ಗ್ರಾ.ಪಂ. ಗಳಲ್ಲಿಯೇ ಅನುಷ್ಠಾನಗೊಳಿಸಿದರೆ ಹಾಸನ ಜಿಲ್ಲಾ ಪಂಚಾಯಿತಿಗೆ ಉತ್ತಮ ಹೆಸರು ಬರಲಿದೆ ಎಂದು ಹೇಳಿದ ಅವರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಿರು ನೀರು ಸರಬರಾಜು ಘಟಕಗಳನ್ನು ಪ್ರತಿ ಮೂರು ತಿಂಗಳಿಗೊಮ್ಮೆ ಸ್ವಚ್ಛಗೊಳಿಸುವಂತೆ ತಾಕೀತು ಮಾಡಿದರು.

‘ಯಾವ ಹಳ್ಳಿಗಳಲ್ಲಿಯೂ ಕುಡಿಯುವ ನೀರಿನ ತೊಂದರೆಯಾಗದಂತೆ ಗ್ರಾ.ಪಂ. ಆಡಳಿತ ಮಂಡಳಿ ಕ್ರಮಕೈಗೊಳ್ಳುವುದರ ಜೊತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕು’ ಎಂದು ಸೂಚಿಸಿದರು.

ಪ್ರತಿಕ್ರಿಯಿಸಿ (+)