ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಷೇತ್ರದ ಅಭಿವೃದ್ಧಿ ಮರೆತು ಶಿರಾದಲ್ಲಿ ಪ್ರಚಾರ

ಶಾಸಕ ಪ್ರೀತಂ ವಿರುದ್ಧ ಜಿ.ಪಂ. ಉಪಾಧ್ಯಕ್ಷ ಸ್ವರೂಪ್‌ ವಾಗ್ದಾಳಿ
Last Updated 21 ಅಕ್ಟೋಬರ್ 2020, 13:48 IST
ಅಕ್ಷರ ಗಾತ್ರ

ಹಾಸನ: ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದರೂ ಜನರ ಸಮಸ್ಯೆ ಆಲಿಸದೆ ಶಾಸಕ ಪ್ರೀತಂ ಜೆ.ಗೌಡ ಅವರು ಶಿರಾ ಕ್ಷೇತ್ರದ ಉಪಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ ಎಂದ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್.ಪಿ.ಸ್ವರೂಪ್ ಟೀಕಿಸಿದರು.

ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿವೆ. ನಗರದಲ್ಲಿ ನಡೆಯುತ್ತಿರುವ ಅಮೃತ್ ಯೋಜನೆ ಪೈಪ್ ಅಳವಡಿಕೆ ಕಾಮಗಾರಿಗೆ ಬಹುತೇಕ ರಸ್ತೆಗಳನ್ನು ಅಗೆಯಲಾಗಿದೆ. ಗುಂಡಿಗಳನ್ನು ಸರಿಯಾಗಿ ಮುಚ್ಚದ ಕಾರಣ ಮಳೆಯಿಂದ ರಸ್ತೆಗಳು ಕೆಸರು ಗದ್ದೆಯಂತಾಗಿ‌ ಜನರು ಓಡಾಡದ ಸ್ಥಿತಿ ನಿರ್ಮಾಣ ಆಗಿದೆ. ಹಾಸನಾಂಬ, ಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಸಮೀಪಿಸುತ್ತಿದೆ. ಆದರೂ ರಸ್ತೆ ಗುಂಡಿಗಳನ್ನು ಮುಚ್ಚಿಸುವಲ್ಲಿ ಶಾಸಕರು ಆಸಕ್ತಿ ತೋರುತ್ತಿಲ್ಲ. ಈ ವರೆಗೂ ಸಂಬಂಧಪಟ್ಟ ಅಧಿಕಾರಿಗಳ‌‌ ಸಭೆ ಕರೆದಿಲ್ಲ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಅತಿವೃಷ್ಟಿಯಿಂದ ಕಲ್ಲಹಳ್ಳಿಯ‌ಕೆರೆ ಕಟ್ಟೆ ಒಡೆದು ವರ್ಷ ಕಳೆದಿದೆ. ಜಮೀನಿಗೆ ನೀರು ನುಗ್ಗಿ ಬೆಳೆ ಹಾನಿಯಾಗಿ ರೈತರು ನಷ್ಟ ಅನುಭವಿಸಿದ್ದಾರೆ. ಗ್ರಾಮದಲ್ಲಿ ಜೆಡಿಎಸ್ ಬೆಂಬಲಿತರು ಹೆಚ್ಚು ಇದ್ದಾರೆ ಎಂಬ ಕಾರಣಕ್ಕೆ ಈವರೆಗೂ ಗ್ರಾಮಕ್ಕೆ ಶಾಸಕರು ಭೇಟಿ ನೀಡಿಲ್ಲ ಎಂದು ದೂರಿದರು.

ಬಿಟ್ಟಗೌಡನ ಹಳ್ಳಿ ರುದ್ರಭೂಮಿಯಲ್ಲಿ ಮೂಲ ಸೌಕರ್ಯ ಇಲ್ಲ.‌ ಅಂತ್ಯ ಸಂಸ್ಕಾರಕ್ಕೆ ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ‌ ಇದೆ. ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಸೋಂಕಿತರ ಚಿಕಿತ್ಸೆಗೆ ಹಣ ಸುಲಿಗೆ ಮಾಡಲಾಗುತ್ತಿದೆ. ಶಾಸಕರು ಎಷ್ಟು ಬಾರಿ ಸಂಬಂಧಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದಿದ್ದಾರೆ ? ಯಾವ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ ಎಂದು ಪ್ರಶ್ನಿಸಿದರು.

ನಗರದ ಸಾಲಗಾಮೆ ರಸ್ತೆಯಲ್ಲಿ ಹೊಸದಾಗಿ‌ ನಿರ್ಮಿಸುತ್ತಿರುವ ಫುಡ್ ಸ್ಟ್ರೀಟ್‌ ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ಈ ಹಿಂದೆ ವ್ಯಾಪಾರ ಮಾಡುತ್ತಿದ್ದವರಿಗೆ ಅವಕಾಶ ನೀಡಬೇಕು. ಪಾರದರ್ಶಕವಾಗಿ ಜಾಗ ಹಂಚಿಕೆ ಮಾಡಬೇಕು ಹಾಗೂ ಬಾಡಿಗೆ ನೀಡದಂತೆ ಕ್ರಮ ವಹಿಸಬೇಕು. ಈ ಬಗ್ಗೆ ನಗರಸಭೆ ಅಧಿಕಾರಿಗಳು ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಗೋಪಾಲ್, ಇರ್ಷಾದ್ ಪಾಷಾ, ನಗರಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT