ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಣನೂರು: ಕೋಟೆ ಬೀದಿಯಲ್ಲಿ ನಿತ್ಯ ಕಸದ ದರ್ಶನ

ಸ್ಥಳೀಯರ ಒತ್ತಾಯಕ್ಕೂ ಸ್ಪಂದಿಸದ ಗ್ರಾಮ ಪಂಚಾಯಿತಿ: ದುರ್ವಾಸನೆಗೆ ಜನ ತತ್ತರ
Last Updated 5 ಜುಲೈ 2022, 3:50 IST
ಅಕ್ಷರ ಗಾತ್ರ

ಕೊಣನೂರು: ಜನವಸತಿ ಪ್ರದೇಶದಲ್ಲಿ ತ್ಯಾಜ್ಯವನ್ನು ಸುರಿಯುತ್ತಿರುವುದರಿಂದ ಸಮಸ್ಯೆಗಳಾಗುತ್ತಿದ್ದು, ಇಲ್ಲಿ ಕಸವನ್ನು ಸುರಿಯುವುದನ್ನು ನಿಲ್ಲಿಸುವಂತೆ ಸ್ಥಳೀಯ ನಿವಾಸಿಗಳು ಒತ್ತಾಯಿಸುತ್ತಲೇ ಬರುತ್ತಿದ್ದಾರೆ. ಆದರೆ, ಸಮಸ್ಯೆ ಮಾತ್ರ ಪರಿಹಾರ ಕಾಣುತ್ತಿಲ್ಲ.

ಕೆಲ ದಿನಗಳಿಂದ ಇಲ್ಲಿನ ಸಾರಿಗೆ ಸಂಸ್ಥೆಯ ಬಸ್ ನಿಲ್ದಾಣದ ಪಕ್ಕದಲ್ಲಿ, ಕಾವೇರಿ ನದಿಗೆ ಹೋಗುವ ರಸ್ತೆಯ ಕೋಟೆ ಬೀದಿಯಲ್ಲಿ ತ್ಯಾಜ್ಯ ಸುರಿಯಲಾಗುತ್ತಿದೆ. ಇದರಿಂದಾಗಿ ಜನವಸತಿ ಪ್ರದೇಶವು ಕಸದ ತೊಟ್ಟಿಯಾಗಿ ಪರಿಣಮಿಸಿದೆ. ಸುಮಾರು 8 ಸಾವಿರ ಜನಸಂಖ್ಯೆ ಇದ್ದು, ಕಸವನ್ನು ಅಂಗಡಿಗಳ ವರ್ತಕರು ಮತ್ತು ಮನೆಗಳಿಂದ ತಂದು ಹಾಕಲಾಗುತ್ತಿದೆ.

ಕಸದ ರಾಶಿಯಲ್ಲಿ ಸಿಗುವ ವಸ್ತುಗಳನ್ನು ತಿನ್ನಲು ನಾಯಿಗಳ ಹಿಂಡು ಬೀಡು ಬಿಡುತ್ತಿದ್ದು, ಈ ಪ್ರದೇಶದಲ್ಲಿ ಸಂಚರಿಸುವ ಜನರ ಮೇಲೆ ಮುಗಿಬೀಳುತ್ತಿವೆ. ಈ ರಸ್ತೆಯಲ್ಲಿನ ಜನರು ಭಯದಿಂದ ತಿರುಗಾಡಬೇಕಿದೆ. ನಾಯಿ, ಹಂದಿಗಳು, ಪಕ್ಷಿಗಳು ಕಸದೊಳಗಿನಿಂದ ತ್ಯಾಜ್ಯಗಳನ್ನು ರಸ್ತೆಗೆ ಎಳೆದು ತರುತ್ತಿವೆ. ಗಾಳಿಗೆ ಹಾರಿಕೊಂಡು ಬರುವ ಪ್ಲಾಸ್ಟಿಕ್ ಮತ್ತು ಪೇಪರ್‌ಗಳು ರಸ್ತೆಯಲ್ಲಿ ಎಲ್ಲೆಡೆ ಹರಿದಾಡುತ್ತಿವೆ. ಅಲ್ಲದೇ ಸಮೀಪದ ಮನೆಗಳ ಬಳಿ ಬಂದು ಬೀಳುತ್ತಿದ್ದು, ಸ್ವಚ್ಛವಿದ್ದ ಸ್ಥಳವು ಕಸದಿಂದಾಗಿ ದುರ್ವಾಸನೆ ಬೀರಲಾರಂಭಿಸಿದೆ.

ಕಸದ ದುರ್ವಾಸನೆಯಿಂದ ಸುತ್ತಲಿನ ನಿವಾಸಿಗಳು ಕಂಗೆಟ್ಟಿದ್ದಾರೆ. ನದಿಗೆ ಕಡೆಗೆ ಹೋಗುವ ಜನರು ಕಸದ ವಾಸನೆಯನ್ನು ಸಹಿಸಲಾಗದೆ ಮೂಗು ಮುಚ್ಚಿಕೊಂಡು ತಿರುಗಾಡಬೇಕಿದೆ.

ಕೊಣನೂರಿನ ಪ್ರಮುಖ ಆಕರ್ಷಣೆಯಾಗಿರುವ ತೂಗು ಸೇತುವೆಯನ್ನು ನೋಡಲು ಹಾಗೂ ವೆಂಕಟೇಶ್ವರ ದೇವಾಲಯ, ಜ್ಞಾನಜ್ಯೋತಿ ಧ್ಯಾನಮಂದಿರಕ್ಕೆ ಅನೇಕ ಜನರು ಬರುತ್ತಾರೆ. ಕಾವೇರಿ ನದಿಗೆ ತೆರಳಲು, ಬೆಳಿಗ್ಗೆ ಮತ್ತು ಸಂಜೆಯ ವಾಯು ವಿಹಾರಕ್ಕೆಂದು ನಿತ್ಯ ನೂರಾರು ಜನರು ಈ ರಸ್ತೆಯಲ್ಲಿ ಓಡಾಡುತ್ತಾರೆ. ಆದರೆ, ರಸ್ತೆಯ ಬದಿಯಲ್ಲಿ ಕಸ ಸುರಿಯುತ್ತಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಕೆಲವೊಮ್ಮೆ ಕಸದ ರಾಶಿಗೆ ಬೆಂಕಿ ಹಾಕಲಾಗುತ್ತಿದ್ದು, ಬೆಂಕಿಯು 2 ದಿನಗಳವರೆಗೂ ಇರುತ್ತದೆ. ಹೊಗೆಯಿಂದ ಸುತ್ತಲಿನ ಮನೆಗಳ ಜನರಿಗೆ ವಾಸನೆಯನ್ನು ಸಹಿಸಲಾಗುತ್ತಿಲ್ಲ. ಮಳೆ ಆರಂಭ ಆಗಿರುವುದರಿಂದ ಕಸದ ವಾಸನೆಯು ಹೆಚ್ಚುತ್ತಲೇ ಇದೆ.

ಸ್ವಚ್ಛತೆ ಕಾಪಾಡಬೇಕಿರುವ ಗ್ರಾಮ ಪಂಚಾಯಿತಿಯು ಜನವಸತಿ ಪ್ರದೇಶದಿಂದ ಹೊರಗೆ ಹಾಕಬೇಕಿರುವ ಕಸವನ್ನು ಊರಿನೊಳಗಿನ ಮುಖ್ಯ ರಸ್ತೆಯಲ್ಲಿನ ಪ್ರದೇಶಕ್ಕೆ ಹಾಕಿ ನಿವಾಸಿಗಳಿಗೆ ಅನಗತ್ಯವಾಗಿ ತೊಂದರೆ ನೀಡುತ್ತಿದೆ. ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡಲು ನಿರ್ವಹಣಾ ಘಟಕವನ್ನು ಸ್ಥಾಪಿಸಬೇಕು ಎನ್ನುವ ಆದೇಶವಿದ್ದರೂ, ಕೊಣನೂರು ಗ್ರಾಮ ಪಂಚಾಯಿತಿ ಘಟಕಕ್ಕೆ ಸ್ಥಳ ಗುರುತಿಸಲು ವಿಫಲವಾಗಿದೆ. ಇದರಿಂದಾಗಿಯೇ ಎಲ್ಲೆಂದರಲ್ಲಿ ಕಸ ಸುರಿಯುವ ಪರಿಸ್ಥಿತಿ ಬಂದಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಗ್ರಾಮದ ಸುತ್ತಮುತ್ತ ಅಲ್ಲಲ್ಲಿ ಖಾಲಿಯಿರುವ ಸ್ಥಳಗಳಲ್ಲಿ ಕಸ ಸುರಿಯುವ ಅಭ್ಯಾಸ ಮಾಡಿಕೊಂಡಿದ್ದು, ಇದಕ್ಕೆ ಕಡಿವಾಣ ಹಾಕಿದರೆ ಸ್ಥಳ ಬದಲಿಸುವುದು ಮಾಮೂಲಾಗಿದೆ. ಮೊದಲಿಗೆ ಕೆರೆ ಏರಿ, ನಂತರ ಕೋಟೆ ಬೀದಿಯ ದಕ್ಷಿಣ ಭಾಗ ಮತ್ತು ಇದೀಗ ಕಾವೇರಿ ನದಿ ರಸ್ತೆಯಲ್ಲಿ ಕಸ ಸುರಿಯಲಾಗುತ್ತಿದೆ. ಇದರಿಂದ ಗ್ರಾಮದ ಸ್ವಚ್ಛತೆ ಹಾಳಾಗಿದೆ ಎಂದು ಗ್ರಾಮದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಘಟಕ ಸ್ಥಾಪನೆಗೆ ಸ್ಥಳವಿಲ್ಲ’
‘ಕೊಣನೂರು ಗ್ರಾಮ ಪಂಚಾಯಿತಿ ಕಸ ವಿಲೇವಾರಿ ಘಟಕ ಸ್ಥಾಪಿಸಲು ಗುರುತಿಸಿರುವ ಸ್ಥಳದಲ್ಲಿ ವಿ.ಜಿ ಕೊಪ್ಪಲಿನ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದು, ಘಟಕ ನಿರ್ಮಾಣ ತಡವಾಗುತ್ತಿದೆ. ಬೇರೆಲ್ಲೂ ಸ್ಥಳಾವಕಾಶ ಇಲ್ಲದ್ದರಿಂದ ಇಲ್ಲಿ ಸುರಿಯಬೇಕಾಗಿದ್ದು, ಸಮಸ್ಯೆಯನ್ನು ತಪ್ಪಿಸಲು ಒಣ ಕಸವನ್ನು ಮಾತ್ರ ಸಂಗ್ರಹಿಸಿ ಹಸಿ–ಕಸವನ್ನು ಜನರ ಮನೆಯಲ್ಲಿಯೇ ಸಂಸ್ಕರಿಸಿಕೊಳ್ಳಲು ಮನವಿ ಮಾಡುವುದೇ ನಮಗೆ ಉಳಿದಿರುವ ದಾರಿ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ್‌ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT