ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರಿಗೆ ಉಚಿತ ನಿವೇಶನ

1.5 ಎಕರೆ ಜಾಗ ಗುರುತು: ನಗರಸಭೆ ಅಧ್ಯಕ್ಷ ಆರ್‌. ಮೋಹನ್‌
Last Updated 23 ಸೆಪ್ಟೆಂಬರ್ 2021, 14:27 IST
ಅಕ್ಷರ ಗಾತ್ರ

ಹಾಸನ: ನಗರಸಭೆಯ ಕಾಯಂ ಪೌರ ಕಾರ್ಮಿಕರಿಗೆ ಉಚಿತ ನಿವೇಶನ ನೀಡಲು ಬೇಲೂರು ರಸ್ತೆಯ
ನ್ಯಾಯಾಧೀಶರ ವಸತಿಗೃಹದ ಸಮೀಪ 1.5 ಎಕರೆ ಜಾಗ ಗುರುತಿಸಲಾಗಿದೆ ಎಂದು ನಗರಸಭೆ
ಅಧ್ಯಕ್ಷ ಆರ್‌.ಮೋಹನ್‌ ತಿಳಿಸಿದರು.

ನಗರಸಭೆ ಕುವೆಂಪು ಸಭಾಂಗಣದಲ್ಲಿ ಗುರುವಾರ ರಾಜ್ಯ ಪೌರ ಸೇವಾ ನೌಕರರ ಸೇವಾ ಸಂಘ, ಪೌರ
ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘ ಹಾಗೂ ನಗರಸಭೆ ಆಶ್ರಯದಲ್ಲಿ ಆಯೋಜಿಸಿದ್ದ ಪೌರ ಕಾರ್ಮಿಕರ
ದಿನಾಚರಣೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಗರಸಭೆಯಿಂದ ಈಗಾಗಲೇ 42 ಮಂದಿ ಕಾಯಂ ಪೌರ ಕಾರ್ಮಿಕರಿಗೆ ಉಚಿತ ನಿವೇಶನ ನೀಡಿದ್ದು,
ಮನೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಮನೆಗಳು ನಿರ್ಮಾಣವಾದ ಕೂಡಲೇ ಪೌರ ಕಾರ್ಮಿಕರಿಗೆ
ಹಸ್ತಾಂತರಿಸಲಾಗುವುದು. ಉಳಿದವರಿಗೂ ಶೀಘ್ರ ನಿವೇಶನ ನೀಡಲಾಗುವುದು ಎಂದರು.

ನಗರದಲ್ಲಿ ನಿತ್ಯ ಸ್ವಚ್ಛತೆ ಮಾಡುವ ಮೂಲಕ ಸಾರ್ವಜನಿಕರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರ
ಆರೋಗ್ಯದ ದೃಷ್ಟಿಯಿಂದ ಸೆ. 29 ರಂದು ನಗರಸಭೆ ಸಭಾಂಗಣದಲ್ಲಿ ಉಚಿತ ಆರೋಗ್ಯ ತಪಾಸಣಾ
ಶಿಬಿರ ಆಯೋಜಿಸಲಾಗಿದೆ. ಪೌರ ಕಾರ್ಮಿಕರು ಯಾವುದೇ ಸಂದರ್ಭದಲ್ಲಿಯೂ ಸಮಸ್ಯೆಗಳನ್ನು
ಹೇಳಿಕೊಂಡರೆ ಬಗೆ ಹರಿಸಲು ಸಿದ್ಧ ಎಂದು ಭರವಸೆ ನೀಡಿದರು.

ಪೌರಾಯುಕ್ತ ಕೃಷ್ಣಮೂರ್ತಿ ಮಾತನಾಡಿ, ಕೋವಿಡ್‌ ಸಂದರ್ಭದಲ್ಲಿ ವೈದ್ಯರ ರೀತಿಯೇ ಪ್ರಾಣದ ಹಂಗು
ತೊರೆದು ಕರ್ತವ್ಯ ನಿರ್ವಹಿಸಿದ ಪೌರ ಕಾರ್ಮಿಕರನ್ನು ಕೇಂದ್ರ ಸರ್ಕಾರ ಕೊರೊನಾ ವಾರಿಯರ್ಸ್
ಎಂದು ಘೋಷಣೆ ಮಾಡಿದೆ. ಸರ್ಕಾರದಿಂದ ಇನ್ನೂ ಹೆಚ್ಚಿನ ಸೌಕರ್ಯಗಳು ಸಿಗುವಂತಾಗಲಿ ಎಂದು ಆಶಿಸಿದರು.

ನಗರಸಭೆ ಒಂದನೇ ವಾರ್ಡ್ ಸದಸ್ಯ ರಕ್ಷಿತ್‌ ಮಾತನಾಡಿ, ಪೌರ ಕಾರ್ಮಿಕರು ಆರೋಗ್ಯದ ಕಡೆ
ಗಮನಹರಿಸಬೇಕು. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು ಎಂದರು.

ಕಾರ್ಯಕ್ರಮಕ್ಕೂ ಮೊದಲು ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ.ಬಿ.ಆರ್‌. ಅಂಬೇಡ್ಕರ್‌‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ಹೇಮಾವತಿ ಪ್ರತಿಮೆಗೆ ಪುಷ್ಪಾರ್ಚನೆ ಮಾಡಲಾಯಿತು. ಬಳಿಕ ಡಾ.ಬಿ.ಆರ್‌. ಅಂಬೇಡ್ಕರ್‌ ಹಾಗೂ ಡಾ. ಬಾಬು ಜಗಜೀವನ್‌ ರಾಮ್‌ ಅವರ ಭಾವಚಿತ್ರವನ್ನು ಮೆರವಣಿಗೆಯಲ್ಲಿ ನಗರಸಭೆಗೆ ತರಲಾಯಿತು.

ಪೌರ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎಚ್‌ .ಎಸ್‌.ನಾಗರಾಜ್ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT