ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಕಾಳಿ ವಿಗ್ರಹ ಮರು ಜೋಡಣೆ ಪೂರ್ಣ

Last Updated 28 ನವೆಂಬರ್ 2020, 11:09 IST
ಅಕ್ಷರ ಗಾತ್ರ

ಹಾಸನ: ತಾಲ್ಲೂಕಿನ ದೊಡ್ಡಗದ್ದವಳ್ಳಿ ಮಹಾಲಕ್ಷ್ಮೀ ದೇವಾಲಯದ ಮಹಾಕಾಳಿ ವಿಗ್ರಹ ಮರು ಜೋಡಣೆ ಕಾರ್ಯ
ಪೂರ್ಣಗೊಂಡಿದೆ.

ಚೆನ್ನೈನಿಂದ ಬಂದಿದ್ದ ಇಬ್ಬರು ಶಿಲ್ಪಕಲಾ ತಜ್ಞರು ದೊಡ್ಡಗದ್ದವಳ್ಳಿಯಲ್ಲಿಯೇ ಒಂದು ವಾರ ವಾಸ್ತವ್ಯ ಹೂಡಿ, ದುರಸ್ತಿ ಕಾರ್ಯ ಕೈಗೊಂಡಿದ್ದರು. ಸದ್ಯ ದೇವಾಲಯದಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ, ಬಾಗಿಲು ರಿಪೇರಿ ನಡೆಯುತ್ತಿದೆ. 14 ದಿನಗಳ ಬಳಿಕ ಮಹಾಕಾಳಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಪುರಾತತ್ವ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮಹಾಲಕ್ಷ್ಮಿದೇವಾಲಯಕ್ಕೆ ಶುಕ್ರವಾರ ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರ ಕಾರ್ಯಾಲಯದ ಹಿರಿಯ ಆಗಮಿಕ ವಿಜಯಕುಮಾರ್ ಹಾಗೂ ವೇದ ವಿದ್ವಾಂಸ ಗೋವಿಂದ ಭಟ್ ಭೇಟಿ ನೀಡಿ ಪರಿಶೀಲಿಸಿದರು.

‘ವಿಗ್ರಹ ಭಿನ್ನವಾದರೆ ಪೂಜೆ ಮಾಡಬಾರದು. ಬದಲಿಗೆ ಕಾಳಿ ವಿಗ್ರಹದ ರೀತಿಯಲ್ಲೇ ಮತ್ತೊಂದು ಮೂರ್ತಿ ಪ್ರತಿಷ್ಠಾಪಿಸಬೇಕು. 1992 ರಿಂದ ದೇವಾಲಯಕ್ಕೆ ಮುಜರಾಯಿ ಇಲಾಖೆಯಿಂದ ತಸ್ತಿಕ್ ಹಣ ನಿಂತು ಹೋಗಿದೆ. ಆದರೂ ಅರ್ಚಕರು ಸೇವೆ ಎಂಬಂತೆ ನಿತ್ಯ ಪೂಜೆ ಸಲ್ಲಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಧಾರ್ಮಿಕ ವಿಧಿ ವಿಧಾನ ಹೇಗೆ ನಡೆಯಬೇಕು ಎಂಬುದರ ಕುರಿತು ಚರ್ಚಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು’ ಎಂದು ಆಗಮಿಕರು ತಿಳಿಸಿದರು.

‘ಭಗ್ನಗೊಂಡ ಮಹಾಕಾಳಿ ವಿಗ್ರಹವನ್ನು ಪುರಾತತ್ವ ಇಲಾಖೆ ಮರುಜೋಡಣೆ ಮಾಡಿದೆ. ಆದರೆ ಹಿಂದೂ ಸಂಪ್ರದಾಯದಂತೆ ಭಿನ್ನವಾದ ವಿಗ್ರಹಕ್ಕೆ ಪೂಜೆಯನ್ನು ಸಲ್ಲಿಸುವಂತಿಲ್ಲ. ಆಸಕ್ತ ಭಕ್ತರು, ಗ್ರಾಮಸ್ಥರು ಮತ್ತು ಧಾರ್ಮಿಕ ಮುಖಂಡರು ಮುಂದೆ ಬಂದು ತದ್ರೂಪವಾದ ಒಂದು ಚಿಕ್ಕಮೂರ್ತಿಯನ್ನು ನಿರ್ಮಿಸಿ (ಉತ್ಸವ ಮೂರ್ತಿ ಅಥವಾ ಒಂದು ಅಡಿಯ ವಿಗ್ರಹ) ಇಲಾಖೆಯ ಅನುಮತಿ ಮೇರೆಗೆ ವಿಗ್ರಹಕ್ಕೆ ಪ್ರಾಣ ಪ್ರತಿಷ್ಠಾಪನೆ ಮೂಲಕ ಸಾನಿಧ್ಯವನ್ನು ವರ್ಗಾವಣೆ ಮಾಡಿ ನಿತ್ಯಪೂಜಾ ಕಾರ್ಯಗಳನ್ನು ನೆರವೇರಿಸಿಕೊಂಡು ಹೋಗಬಹುದು’ ಎಂದು ವಿಶ್ವಕರ್ಮ ಮಹಾಸಭಾದ ಮಾಜಿ ಜಿಲ್ಲಾ ಅಧ್ಯಕ್ಷ ಎಚ್.ವಿ. ಹರೀಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT