ಗುರುವಾರ , ಡಿಸೆಂಬರ್ 12, 2019
26 °C
ನಗರದಲ್ಲಿ ವಿವಿಧ ಸಂಘಟನೆಗಳಿಂದ ಪಂಜಿನ ಮೆರವಣಿಗೆ

‘ಗಮನ ಬೇರೆಡೆಗೆ ಸೆಳೆಯಲು ರಾಮ ಮಂದಿರ ಚರ್ಚೆ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ಹಾಸನ : ‘ಅಂಬೇಡ್ಕರ್ ಅವರ ಆಶಯಗಳನ್ನು ಜನರು ನೆನಪಿಸಿಕೊಳ್ಳದಂತೆ ಮಾಡುವ ಹುನ್ನಾರದ ಭಾಗವಾಗಿ ಡಿ. 6ರಂದು ಬಾಬರಿ ಮಸೀದಿಯನ್ನು ಧ್ವಂಸ ಮಾಡುವ ಮೂಲಕ ಸಂವಿಧಾನಕ್ಕೆ ದ್ರೋಹ ಬಗೆಯಲಾಗಿದೆ’ ಎಂದು ಹಿರಿಯ ದಲಿತ ಮುಖಂಡ ರಾಜಶೇಖರ್ ಆರೋಪಿಸಿದರು.

ಬಾಬರಿ ಮಸೀದಿ ಧ್ವಂಸ ಮಾಡಿದ 26ನೇ ವರ್ಷ ಮತ್ತು ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಅಂಗವಾಗಿ ಸಿಪಿಎಂ ಮತ್ತು ದಲಿತ ಜನಪರ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ‘ಸಂವಿಧಾನ ಉಳಿಸಿ ಜಾತ್ಯಾತೀತತೆ ಸಂರಕ್ಷಿಸಿ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಿಪಿಎಂ ಮುಖಂಡ ಎಚ್.ಆರ್.ನವೀನ್ ಕುಮಾರ್ ಮಾತನಾಡಿ, ‘ನಾಲ್ಕುವರೆ ವರ್ಷಗಳಲ್ಲಿ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಜಾರಿಗೆ ತಂದಿರುವ ಜನವಿರೋಧಿ ನೀತಿಗಳಿಂದ ಜನರು ಆಕ್ರೋಶಗೊಂಡಿದ್ದಾರೆ. ಈ ಸಂದರ್ಭದಲ್ಲಿ ಜನರ ದಿಕ್ಕನ್ನು ಬೇರೆಡೆಗೆ ಸೆಳೆಯಲು ರಾಮ ಮಂದಿರ ನಿರ್ಮಾಣದ ಚರ್ಚೆಯನ್ನು ಸಂಘ ಪರಿವಾರ ಮತ್ತೆ ಹುಟ್ಟು ಹಾಕಿದೆ. ಇದು ಈ ದೇಶದ ಜಾತ್ಯಾತೀತ ಮತ್ತು ಸಂವಿಧಾನದ ಮೇಲೆ ಮಾಡುತ್ತಿರುವ ದಾಳಿಯಾಗಿದೆ’ ಎಂದು ಅಭಿಪ್ರಾಯಪಟ್ಟರು.

ಹೇಮಾವತಿ ಪ್ರತಿಮೆ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಬಿ.ಆರ್.ಅಂಬೇಡ್ಕರ್ ಪ್ರತಿಮೆವರೆಗೆ ವಿವಿಧ ಸಂಘಟನೆಗಳು ಪಂಜಿನ ಮೆರವಣಿಗೆ ನಡೆಸಿದವು. ಮುಖಂಡರಾದ ಎಂ.ಜಿ.ಪೃಥ್ವಿ, ಮುಬಾಷಿರ್ ಅಹಮದ್, ಮರಿಜೋಸೆಫ್, ಜಿ.ಪಿ.ಸತ್ಯನಾರಾಯಣ, ಅರವಿಂದ್, ರಮೇಶ್ ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು